ವಿಶ್ವಕಪ್‍ಗೆ ಇಶಾಂತ್ ಅನುಮಾನ
ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಭಾರತ ತಂಡಕ್ಕೆ ಮಾತ್ರ ಗಾಯಾಳುಗಳ ಪಟ್ಟಿ ಚಿಂತೆ ಉಂಟುಮಾಡಿದೆ. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಪ್ರಮುಖರು

ಮುಂಬೈ: ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಭಾರತ ತಂಡಕ್ಕೆ ಮಾತ್ರ ಗಾಯಾಳುಗಳ ಪಟ್ಟಿ ಚಿಂತೆ ಉಂಟುಮಾಡಿದೆ.
ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಪ್ರಮುಖರು ಇನ್ನೂ ದೈಹಿಕ ಸಕ್ಷಮತೆಯ ಸಮಸ್ಯೆ ಎದುರಿಸುತ್ತಿದ್ದು, ವಿಶ್ವಕಪ್ ನಲ್ಲಿ ಆಡುವ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ, ಫೆಬ್ರವರಿ 5ರೊಳಗೆ ಎಲ್ಲ ಆಟಗಾರರು ಪೂರ್ಣ ಫಿಟ್ ಆಗಿರುವುದನ್ನು ದೃಢಪಡಿಸಬೇಕೆಂದು ತಂಡದ ವ್ಯವಸ್ಥಾಪಕರಿಗೆ ಬಿಸಿಸಿಐ ಗಡುವು ನೀಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ತಂಡದಲ್ಲಿ ಕೆಲ ಬದಲಾವಣೆ ಅನಿವಾರ್ಯವಾಗಿದ್ದು, ಮಂಡಿ ನೋವಿನಿಂದ ಬಳಲುತ್ತಿರುವ ಮುಂಚೂಣಿ ದಾಳಿಕಾರ ಇಶಾಂತ್ ಶರ್ಮಾ 2015ರ ವಿಶ್ವಕಪ್ ನಲ್ಲಿ ಆಡುವುದು ಅನುಮಾನವಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಇದರ ಹೊರತಾಗಿ, ಭುವನೇಶ್ವರ ಕುಮಾರ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ದೈಹಿಕ ಸಕ್ಷಮತೆ ಬಗ್ಗೆಯೂ ಅನುಮಾನವಿದೆ. ಆದರೆ, ಈ ಮೂವರು ಆಟಗಾರರಿಗಿಂತ ಹೆಚ್ಚಾಗಿ ಇಶಾಂತ್ ಪ್ರಕರಣವೇ ಹೆಚ್ಚು ಗಂಭೀರವಾಗಿದೆ ಎಂದು ಹೇಳಲಾಗಿದೆ.
ಇಶಾಂತ್ ಸ್ಥಾನವನ್ನು ಮತ್ತೊಬ್ಬ ಮಧ್ಯಮ ವೇಗಿ ಮೋಹಿತ್ ಶರ್ಮಾ ತುಂಬುವ ಸಾಧ್ಯತೆಯಿದೆ. ಈಗಾಗಲೇ ಮೋಹಿತ್‍ಗೆ ಆಸ್ಟ್ರೇಲಿಯಾ ತೊರೆಯದಂತೆ ಬಿಸಿಸಿಐ ತಿಳಿಸಿದೆ. ಇಂಗ್ಲೆಂಡ್ ವಿರುದ್ಧ ಪರ್ತ್‍ನಲ್ಲಿ ನಡೆದಿದ್ದ ತ್ರಿಕೋನ ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಆಡಿದ್ದ ಮೋಹಿತ್ ಉತ್ತಮ ದಾಳಿ (10-1-36-2) ನಡೆಸಿದ್ದರು.
ಮೆಲ್ಬರ್ನ್‍ನಲ್ಲಿ ಡಿಸೆಂಬರ್ 26ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಿದ್ದ ಮೂರನೇ ಟೆಸ್ಟ್ ನ ನಂತರ ಇಶಾಂತ್, ಮಂಡಿ ನೋವಿನ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು. ಸಿಡ್ನಿಯಲ್ಲಿನ ನಾಲ್ಕನೇ ಟೆಸ್ಟ್ ಅಲ್ಲದೆ, ತ್ರಿಕೋನ ಸರಣಿ ಮೊದಲೆರಡು ಪಂದ್ಯಗಳಿಂದಲೂ ಅವರನ್ನು ಕೈಬಿಡಲಾಗಿತ್ತು.
ಬಳಿಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಇಶಾಂತ್‍ಗೆ ಸ್ಥಾನ ನೀಡಲಾಗಿತ್ತಾದರೂ ಮಳೆ ಆಟಕ್ಕೆ ಅಡ್ಡಿಪಡಿಸಿತ್ತು. ಆದರೆ, ಪರ್ತ್‍ನಲ್ಲಿನ ಕೊನೆಯ ಲೀಗ್ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಿಲ್ಲ. ತಂಡದಲ್ಲಿನ ಆಟಗಾರರ ಫಿಟ್ನೆಸ್ ವಿಷಯದ ಕುರಿತು ಪ್ರತಿಕ್ರಿಯಿಸಲು ಬಿಸಿಸಿಐ ನಿರಾಕರಿಸಿದೆ. ಆದರೆ, ಬಿಸಿಸಿಐನೊಳಗಿರುವ ಮೂಲಗಳಪ್ರಕಾರ, ಈಗಿನ ಸನ್ನಿವೇಶದಲ್ಲಿ ಇಶಾಂತ್, ವಿಶ್ವಕಪ್‍ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಅಲ್ಲದೆ, ಆಟಗಾರರ ದೈಹಿಕ ಸಾಮಥ್ರ್ಯದ ಬಗ್ಗೆ ತಂಡದ ವ್ಯವಸ್ಥಾಪಕರಿಗೆ ಫೆ. 5ರ ಗಡುವು ನೀಡಲಾಗಿದ್ದು, ಕೆಲ ಬದಲಾವಣೆಗಳು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಭಾರತ ತಂಡ ಫೆ.15ರಂದು ಅಡಿಲೇಡ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ವನ್ನು ಎದುರಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಯುವರಾಜ್‍ಗೆ ಸ್ಥಾನ ಸಿಗುವುದೇ?: ಆಲ್‍ರೌಂಡರ್ ರವೀಂದ್ರ ಜಡೇಜಾ ದೈಹಿಕ ಕ್ಷಮತೆ ಸಾಬೀತುಪಡಿಸದಿದ್ದರೆ, ಯುವರಾಜ್ ಸಿಂಗ್‍ಗೆ ಅವಕಾಶ ಸಿಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವರಾಜ್, ಅನುಭವಿ ಆಟಗಾರರಾಗಿದ್ದು, ಆಸ್ಟ್ರೇಲಿಯಯಾ ನೆಲದಲ್ಲಿ ತಂಡಕ್ಕೆ ಲಾಭದಾಯಕವಾಗಬಲ್ಲರು. ಹಾಗಾಗಿ, ಜಡೇಜಾ ಸ್ಥಾನಕ್ಕೆ ಯುವರಾಜ್ ಉತ್ತಮ ಆಯ್ಯೆ ಆಗಬಲ್ಲರು ಎಂದೇ ಹೇಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


