ಫೆಡರರ್ ಮಣಿಸಿದ ನಡಾಲ್
ವಿಶ್ವದ ಟೆನಿಸ್ ಪ್ರಿಯರ ಕುತೂಹಲ ಕೆರಳಿಸಿದ್ದ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಪಂದ್ಯದಲ್ಲಿ ಇಂಡಿಯನ್ ಏಸಸ್...

Published On :
ನವದೆಹಲಿ: ವಿಶ್ವದ ಟೆನಿಸ್ ಪ್ರಿಯರ ಕುತೂಹಲ ಕೆರಳಿಸಿದ್ದ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಪಂದ್ಯದಲ್ಲಿ ಇಂಡಿಯನ್ ಏಸಸ್ ಆಟಗಾರ, ವಿಶ್ವದ ಐದನೇ ಶ್ರೇಯಾಂಕಿತ ಟೆನಿಸಿಗ ರಾಫೆಲ್ ನಡಾಲ್, ಯುಎಇ ರಾಯಲ್ಸ್ ನ ಆಟಗಾರ ಹಾಗೂ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ವಿರುದ್ಧ 6-5 (7-4) ಅಂತರದ ಜಯ ಸಾಧಿಸಿದರು. ಈ ಮುಖಾಮುಖಿಯ ಫಲಿತಾಂಶವೂ ಸೇರಿದಂತೆ, ದಿನದ 2ನೇ ಸೆಣಸಾಟದಲ್ಲಿ ಯುಎಇ ರಾಯಲ್ಸ್ ವಿರುದ್ಧ ಸೆಣಸಿದ ಇಂಡಿಯನ್ ಏಸಸ್, 30-19 ಅಂಕಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ, ಟೂರ್ನಿಯಲ್ಲಿನ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿತು. ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಜನರು ಕಾತುರದಿಂದ ನಿರೀಕ್ಷಿಸುತ್ತಿದ್ದ ನಡಾಲ್, ಫೆಡರರ್ ನಡುವಿನ
ಪಂದ್ಯವು ಕೊನೆಯಲ್ಲಿ ನಡೆಯಿತು. ಜಿದ್ದಾಜಿದ್ದಿನ ಹಣಾಹಣಿಯನ್ನು ನಿರೀಕ್ಷಿಸುತ್ತಿದ್ದ ಜನರನ್ನು ಈ ಇಬ್ಬರೂ ನಿರಾಸೆಗೊಳಿಸಲಿಲ್ಲ. ಇಬ್ಬರ ಸಮಬಲದ ಹೋರಾಟ ಈ ಸೆಟ್ ಟೈಬ್ರೇಕರ್‍ಗೆ ಬಂದು ನಿಂತಿತು. ಆನಂತರ ಮುಂದುವರಿದ ಆಟದಲ್ಲಿ 17 ಗ್ರ್ಯಾನ್ ಸ್ಲಾಂ ವಿಜೇತರಾದ ಫೆಡರರ್ ಅವರನ್ನು ಮಣಿಸುವಲ್ಲಿ ಸ್ಪೇನ್ ಆಟಗಾರ ಯಶಸ್ವಿಯಾದರು. ಈ ಸೆಣಸಿಗೂ ಮುನ್ನ ನಡೆದಿದ್ದ ಇತರ ಮುಖಾಮುಖಿಗಳಲ್ಲಿ ಏಸಸ್ ಆಟಗಾರರು ಉತ್ತಮ ಪ್ರದರ್ಶ ನೀಡಿದರು. ಮೊದಲಿಗೆ ನಡೆದ ಮಿಶ್ರ ಡಬಲ್ಸ್ ಸೆಟ್‍ನಲ್ಲಿ ಏಸಸ್ ತಂಡದ ಸಾನಿಯಾ ಮಿರ್ಜಾ ಹಾಗೂ ಬೋಪಣ್ಣ ಜೋಡಿ, ನೆಸ್ಟರ್-ಮ್ಲಾಡಿನೊವಿಚ್ ಜೋಡಿಯನ್ನು 6-4 ಅಂತರದಲ್ಲಿ ಮಣಸಿದರು. ಇನ್ನು, ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಏಸಸ್‍ನ ಅಗ್ನಿಸ್ಕಾ ರಾಡ್ವಾಂಸ್ಕಾ, ರಾಯಲ್ಸ್ ತಂಡದ ಕ್ರಿಶ್ಚಿನಾ ಮ್ಲಾಡಿನೊವಿಚ್ ವಿರುದ್ಧ 6-1ರ ಜಯ ಸಾಧಿಸಿದರು. ಇನ್ನು, ಮೂರನೇ ಮುಖಾಮುಖಿಯಾದ ಲೆಜೆಂಡ್ಸ್ ಸುತ್ತಿನಲ್ಲಿ, ಏಸಸ್ ತಂಡದ ಫ್ಯಾಬ್ರಿಸ್ ಸ್ಯಾಟೊರೊ, ಎದುರಾಳಿ ಗೋರನ್ ಇವಾನಿಸೆವಿಚ್ ಅವರನ್ನು 6-5 (7-4)
ಅಂತರದಲ್ಲಿ ಮಣಿಸಿದರು. ಆನಂತರ ನಡೆದ ಪುರುಷರ ಡಬಲ್‍ನಲ್ಲಿ, ಏಸಸ್‍ನ ಬೋಪಣ್ಣ-ನಡಾಲ್ ಜೋಡಿ, ರಾಯಲ್ಸ್ ತಂಡದ ಸಿಲಿಕ್- ಫೆಡರರ್ ವಿರುದ್ಧ 6-4 ಅಂತರದಲ್ಲಿ ಜಯ ಸಾಧಿಸಿತು. ಇನ್ನು, ಅಂತಿಮ ಹಣಾಹಣಿಯ ಪುರುಷರ ಸಿಂಗಲ್ಸ್‍ನಲ್ಲಿ ನಡಾಲ್ ಅವರು, ಫೆಡರರ್ ಅವರನ್ನು ಸೋಲಿಸುವ ಮೂಲಕ ಏಸಸ್ ತಂಡವು, ಎಲ್ಲಾ ಐದು ಹಣಾಹಣಿಗಳಲ್ಲೂ ಜಯ ಸಾಧಿಸಿತು. ಮತ್ತೊಂದು ಸೋಲು ಕಂಡ ವಾರಿಯರ್ಸ್ ಉತ್ತಮ ಆಟಗಾರರಿದ್ದರೂ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಪದೇ ಪದೇ ವಿಫಲವಾಗುತ್ತಿರುವ ಜಪಾನ್ ವಾರಿಯರ್ಸ್ ತಂಡ, ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನಲ್ಲಿ ಮತ್ತೊಂದು ಸೋಲು ದಾಖಲಿಸಿದೆ. ಶನಿವಾರ ಇಲ್ಲಿ ನಡೆದ ಸಿಂಗಪುರ ಸ್ಲಾಮರ್ಸ್ ತಂಡದ ವಿರುದ್ಧ ಸೆಣಸಿದ ಜಪಾನ್ ತಂಡ, 22:24 ಅಂಕಗಳ ಅಂತರದಲ್ಲಿ ಮಣಿಯಿತು. ಡಿ. 10ರಿಂದ ಟೂರ್ನಿಯ ಭಾರತೀಯ ಆವೃತ್ತಿ ಆರಂಭಗೊಂಡಿತು. ಅಲ್ಲಿಂದ ಇಲ್ಲಿಯವರೆಗೂ ಜಪಾನ್ ತಂಡ, ಮೂರು ಬಾರಿ ಕಣಕ್ಕಿಳಿದಿದ್ದರೂ ಒಂದರಲ್ಲೂ ಗೆಲುವು ಕಂಡಿಲ್ಲ. ಮೊದಲ ಹಣಾಹಣಿಯಲ್ಲೇ ಯುಎಇ ರಾಯಲ್ಸ್ ವಿರುದ್ಧ ಸೋತಿದ್ದ ಅದು, ಆನಂತರ ನಡೆದ ಪಂದ್ಯದಲ್ಲಿ ಇಂಡಿಯನ್ ಏಸಸ್ ವಿರುದ್ಧ ದೊಡ್ಡಮಟ್ಟದ ಪರಾಭವ ಕಂಡಿತ್ತು. ಇದೀಗ, ಶನಿವಾರ ನಡೆದ ಮೂರನೇ ಹಣಾಹಣಿಯಲ್ಲೂ ಸೋಲು ಕಾಣುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿದೆ. ಅನುಭವಿ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ಫಿಲಿಪ್ ಕೋಲ್‍ಶ್ರೆಬರ್ ಅವರಿದ್ದರೂ, ತಂಡ ಪದೇ ಪದೇ ಹಿನ್ನಡೆ ಅನುಭವಿಸುತ್ತಿರುವುದು ಅಚ್ಚರಿ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


