ಇಂದಿನಿಂದ ವಿಜಯ್ ಹಜಾರೆ ಟ್ರೋಫಿ
ರಣಜಿ ಪಂದ್ಯಾವಳಿಯಲ್ಲಿ ಆಘಾತಕಾರಿ ಹಿನ್ನಡೆ ಅನುಭವಿಸಿದ ಆತಿಥೇಯ ಕರ್ನಾಟಕ ಇದೀಗ ಗುರುವಾರದಿಂದ ಶುರುವಾಗುತ್ತಿರುವ ವಿಜಯ್ ಹಜಾರೆ ಏಕದಿನ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ..

ಬೆಂಗಳೂರು: ರಣಜಿ ಪಂದ್ಯಾವಳಿಯಲ್ಲಿ ಆಘಾತಕಾರಿ ಹಿನ್ನಡೆ ಅನುಭವಿಸಿದ ಆತಿಥೇಯ ಕರ್ನಾಟಕ ಇದೀಗ ಗುರುವಾರದಿಂದ ಶುರುವಾಗುತ್ತಿರುವ ವಿಜಯ್ ಹಜಾರೆ ಏಕದಿನ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ `ಬಿ' ಗುಂಪಿನ ಪಂದ್ಯದಲ್ಲಿ ರೇಲ್ವೇಸ್ ತಂಡವನ್ನು ಎದುರುಗೊಳ್ಳುತ್ತಿರುವ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ, ರಣಜಿ ಪಂದ್ಯಾವಳಿಯಲ್ಲಿನ ವೈಫಲ್ಯವನ್ನು ಮೆಟ್ಟಿನಿಲ್ಲುವ ಅನಿವಾರ್ಯತೆಗೆ ಸಿಲುಕಿದೆ. ರಣಜಿ, ಇರಾನಿ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಜಯಿಸುವ ಮೂಲಕ ಕಳೆದೆರಡು ಋತುಗಳಲ್ಲಿ ದೇಶೀಯ ಕ್ರಿಕೆಟ್‍ನಲ್ಲಿ ತನ್ನದೇ ಪ್ರಭುತ್ವ ಸಾಧಿಸಿದ್ದ ಕರ್ನಾಟಕ, ಈ ಬಾರಿ ಮಾತ್ರ ರಣಜಿಪಂದ್ಯಾವಳಿಯಲ್ಲಿ ನಾಕೌಟ್ ಹಂತಕ್ಕೇರಲು ವಿಫಲವಾಗಿ ಹ್ಯಾಟ್ರಿಕ್ ಪ್ರಶಸ್ತಿ ಗಳಿಸುವ ಒಂದೊಳ್ಳೆಯ ಅವಕಾಶವನ್ನು ಕೈಚೆಲ್ಲಿತು.
ಪುಣೆಯಲ್ಲಿ ನಡೆದ ಮಹಾರಾಷ್ಟ್ರ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಎದುರಾದ ಸೋಲಿನಿಂದ ಕರ್ನಾಟಕ, ರಣಜಿ ಟೂರ್ನಿಯಲ್ಲಿನ ತನ್ನ ಅಭಿಯಾನವನ್ನು ಲೀಗ್ ಹಂತದಲ್ಲೇ ಕೊನೆಗೊಳಿಸು ವಂತಾಯಿತು. ಆದರೆ, ವಿಜಯ್ ಹಜಾರೆ ಟ್ರೋಫಿಯಲ್ಲಿ ಮತ್ತೆ ಪುಟಿದೆದ್ದು ನಿಲ್ಲಲು ಅದು ತೀರ್ಮಾನಿಸಿದೆ. ವಾಸ್ತವವಾಗಿ ಈ ಋತುವಿನ ರಣಜಿಯಲ್ಲಿಯೂ ದಿಟ್ಟ ಆಟದಿಂದಲೇ ಗಮನ ಸೆಳೆದ ವಿನಯ್ ಬಳಗ, ಮಹತ್ವನೀಯ ಪಂದ್ಯದಲ್ಲಿ ಮಾತ್ರ ತುಸು ಎಡವಟ್ಟು ಮಾಡಿಕೊಂಡಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಸಮತೋಲಿತ ಪ್ರದರ್ಶನ ನೀಡುತ್ತಾ ಬಂದ ಕರ್ನಾಟಕದ ಬ್ಯಾಟ್ಸ್‍ಮನ್ ಗಳಿಗೆ ಮಹಾರಾಷ್ಟ್ರದ ಬೌಲರ್‍ಗಳು ಭಾರೀ ಸವಾಲಾಗಿ ಪರಿಣಮಿಸಿದರು. ಮುಖ್ಯವಾಗಿ ಮನೀಶ್ ಪಾಂಡೆ, ಕರುಣ್ ನಾಯರ್ ತಮ್ಮಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ತಂಡ ಲೀಗ್ ಹಂತದಲ್ಲೇ ನಿರ್ಗಮಿಸುವಂತಾಯಿತು.
ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಇದು ಮರುಕಳಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ತಂಡದ ಪ್ರಮುಖ ಬ್ಯಾಟ್ಸ್ ಮನ್‍ಗಳ ಮೇಲಿದೆ. ಇನ್ನೊಂದೆಡೆ, ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೀಸಲು ಆಟಗಾರರಾಗಿದ್ದ ಸ್ಟುವರ್ಟ್ ಬಿನ್ನಿ ಮತ್ತು ಕೆ.ಎಲ್. ರಾಹುಲ್ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ರಾಜ್ಯದ ಬ್ಯಾಟಿಂಗ್‍ಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ. ಇತ್ತ ಬೌಲಿಂಗ್‍ನಲ್ಲಂತೂ ಕರ್ನಾಟಕ ಬಲಿಷ್ಠವಾಗಿದೆ. ಎಸ್. ಅರವಿಂದ್, ನಾಯಕ ವಿನಯ್ ಮತ್ತು ಅಭಿಮನ್ಯು ಮಿಥುನ್ ಅಲ್ಲದೆ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಭರ್ಜರಿ ಫಾರ್ಮ್ ನಲ್ಲಿದ್ದು, ರೇಲ್ವೇಸ್ ವಿರುದ್ಧ ಗೆಲುವು ಸಾಧಿಸುವ ಕರ್ನಾಟಕದ ವಿಶ್ವಾಸ ಇಮ್ಮಡಿಗೊಂಡಿದೆ. ಇನ್ನು ಆಲ್‍ರೌಂಡರ್ ಕರಣ್ ಶರ್ಮಾ ಸಾರಥ್ಯದ ರೇಲ್ವೇಸ್ ತಂಡ ಕೂಡ ಪಂದ್ಯಾವಳಿಯಲ್ಲಿ ಗೆಲುವಿನ ಆರಂಭ ಕಾಣಲು ತುಡಿಯುತ್ತಿದೆ. ಅನುರೀತ್ ಸಿಂಗ್, ಆರಿಂದಮ್ ಘೋಷ್‍ರಂಥ ಪ್ರಮುಖ ಆಟಗಾರರನ್ನು ಒಳಗೊಂಡಿರುವ ರೇಲ್ವೇಸ್ ತಂಡ, ರಣಜಿ ಪಂದ್ಯಾವಳಿಯಲ್ಲಿ ಕೆಣಕಿದ ಹೆಬ್ಬುಲಿಗಳಂತಾಗಿರುವ ಕರ್ನಾಟಕದ ವಿರುದ್ಧ ಎಚ್ಚರಿಕೆಯಿಂದ ಕಾದಾಡಲು ಅಣಿಯಾಗಿದೆ.
ಉಭಯ ತಂಡಗಳು
ಕರ್ನಾಟಕ: ವಿನಯ್ ಕುಮಾರ್ (ನಾಯಕ), ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಸಿ.ಎಂ. ಗೌತಮ್ (ವಿಕೆಟ್‍ಕೀಪರ್), ಶ್ರೇಯಸ್ ಗೋಪಾಲ್, ಜೆ. ಸುಚಿತ್, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಆರ್. ಸಮರ್ಥ್, ಡೇವಿಡ್ ಮಥಿಯಾಸ್, ಸಾದಿಕ್ ಕಿರ್ಮಾನಿ ಮತ್ತು ಅನಿರುದ್ಧ ಜೋಶಿ.
ರೇಲ್ವೇಸ್: ಕರಣ್ ಶರ್ಮಾ (ನಾಯಕ), ಆಶೀಶ್ ಸಿಂಗ್, ಅವಿನಾಶ್ ಯಾದವ್, ಫಯಾಜ್ ಅಹಮದ್, ಅರ್ನಾಬ್ ನಂದಿ, ಅಸದ್ ಪಠಾಣ್, ಸತೇಂದರ್ ಥಕ್ರನ್, ಸೌರಭ್ ವಾಕಸ್ಕರ್, ಅನುರೀತ್ ಸಿಂಗ್, ಆಶೀಶ್ ಯಾದವ್, ವಿ. ಚೆಲುವರಾಜ್, ಆರಿಂದಮ್ ಘೋಶ್, ಅಕ್ಷತ್ ಪಾಂಡೆ, ಮಹೇಶ್ ರಾವತ್ (ವಿಕೆಟ್‍ಕೀಪರ್), ಕೃಷ್ಣಕಾಂತ್ ಉಪಾಧ್ಯಾಯ್.
ಪಂದ್ಯ ಆರಂಭ: ಬೆಳಿಗ್ಗೆ 9.30
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


