ಕ್ರೀಡೆ

ರಾಜಸ್ಥಾನಕ್ಕೆ ಪ್ರಯಾಸದ ಜಯ

ಆರಂಭಿಕ ಆಟಗಾರ ಅಜಿಂಕ್ಯ ರಹಾನೆಯವರ ಅರ್ಧಶತಕದ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್‍ಗಳ ಜಯ ಪಡೆಯಿತು...

ರಾಜಸ್ಥಾನಕ್ಕೆ ಪ್ರಯಾಸದ ಜಯ
ರಾಜಸ್ಥಾನಕ್ಕೆ ಪ್ರಯಾಸದ ಜಯ
Published On :

ವಿಶಾಖಪಟ್ಟಣ: ಆರಂಭಿಕ ಆಟಗಾರ ಅಜಿಂಕ್ಯ ರಹಾನೆಯವರ ಅರ್ಧಶತಕದ ನೆರವಿನಿಂದಾಗಿ ರಾಜಸ್ಥಾನ ರಾಯಲ್ಸ್ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ 6 ವಿಕೆಟ್‍ಗಳ ಜಯ ಪಡೆಯಿತು.

ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸನ್‍ರೈಸರ್ಸ್, 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ತಂಡ, 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಜಯದ ನಗೆ ಬೀರಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಸತತ ನಾಲ್ಕನೇ ಜಯ ಸಂಪಾದಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಗೆಲ್ಲುವ ಗುರಿ ಅಲ್ಪಮೊತ್ತವಾಗಿದ್ದರೂ ಸನ್ ರೈಸರ್ಸ್ ಹೈದರಾಬಾದ್‍ನ ಶಿಸ್ತುಬದ್ಧ ದಾಳಿಯಿಂದಾಗಿ ರಾಜಸ್ಥಾನ ತಂಡಕ್ಕೆ ಗೆಲವಿನ ಹಾದಿ ಸುಲಭವಾಗಿರಲಿಲ್ಲ. ಪಂದ್ಯ ಅಂತಿಮ
ಎಸೆತದವರೆಗೂ ಸಾಗಿ ರೋಚಕತೆಗೆ ಸಾಕ್ಷಿಯಾಯಿತು. ಸಾಧಾರಣ ಮೊತ್ತ: ಟಾಸ್ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವನ್ ಸ್ಮಿತ್, ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿದರು. ಡೇವಿಡ್ ವಾರ್ನರ್, ಶಿಖರ್ ಧವನ್ ಹೈದರಾಬಾದ್ ತಂಡದ ಇನಿಂಗ್ಸ್ ಆರಂಭಿಸಿದರು. ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ತಲಾ ಅರ್ಧ ಶತಕ ಸಿಡಿಸಿದ್ದ ಈ ಇಬ್ಬರೂ, ಈ ಪಂದ್ಯದಲ್ಲಿ ಅದೇ ಮಾದರಿಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು.

ತಂಡದ ಮೊತ್ತ 25 ರನ್ ಆಗಿದ್ದಾಗ ಕುಲಕರ್ಣಿ ಅವರು ಶಿಖರ್ ಅವರ ವಿಕೆಟ್ ಕಬಳಿಸಿದರೆ, ಅಲ್ಲಿಂದ 10 ರನ್‍ಗಳು ಮೊತ್ತಕ್ಕೆ ಜಮೆಯಾಗುವಷ್ಟರಲ್ಲಿ ವಾರ್ನರ್ ರನೌಟ್ ಆಗಿ
ಹೊರನಡೆದರು. ನಂತರ ಆಕ್ರಮಣಕಾರಿ ದಾಳಿಗೆ ಮುಂದಾದ ಕುಲಕರ್ಣಿ ಮೂರನೇ ಕ್ರಮಾಂಕದಲ್ಲಿ ಆಡಲು ಬಂದಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನೂ ಪೆವಿಲಿಯನ್‍ಗೆ ಅಟ್ಟಿದರು. ಇದಾದ ಮೇಲೆ ಜೊತೆಯಾದ ನಮನ್ ಓಜಾ ಹಾಗೂ ಆಯನ್ ಮೋರ್ಗನ್ ಜೋಡಿ, 4ನೇ ವಿಕೆಟ್‍ಗೆ 52 ರನ್‍ಗಳ ಜೊತೆಯಾಟವಾಡಿತು. ಇವರ ಜೊತೆಯಾಟ
ಮುರಿದಿದ್ದು ಪ್ರವೀಣ್ ತಾಂಬೆ. ಇನಿಂಗ್ಸ್‍ನ 15ನೇ ಓವರ್‍ನ ಮೊದಲ ಎಸೆತದಲ್ಲೇ ಓಜಾ ಅವರನ್ನು ಪೆವಿಲಿಯನ್‍ಗೆ ಅಟ್ಟಿದ ಅವರು, 17ನೇ ಓವರ್ ನಲ್ಲಿ ಮೋರ್ಗನ್‍ಗೆ ಪೆವಿಲಿಯನ್ ಹಾದಿ ತೋರಿದರು.

ಈ ಮೂಲಕ, 100 ರನ್ ಗಡಿ ದಾಟುವಷ್ಟರಲ್ಲೇ ಸನ್‍ರೈಸರ್ಸ್ ತಂಡ, 5 ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ರವಿ ಬೊಪಾರ-ಆಶೀಶ್ ರೆಡ್ಡಿ ಜೋಡಿ, ಮುರಿಯದ 6ನೇ ವಿಕೆಟ್‍ಗೆ 31 ರನ್ ಪೇರಿಸಿ, ತಂಡದ ಮೊತ್ತವನ್ನು 127 ರನ್‍ಗಳಿಗೆ ತಂದು ಮುಟ್ಟಿಸಿದರು. ಹೀಗೆ, ಆರಂಭಿಕ ಬ್ಯಾಟ್ಸ್ ಮನ್‍ಗಳ ವೈಫಲ್ಯದಿಂದಾಗಿ, ಸನ್‍ರೈಸರ್ಸ್ ತಂಡ, ರಾಜಸ್ಥಾನ ತಂಡಕ್ಕೆ ಪಂದ್ಯ ಗೆಲ್ಲಲು 128 ರನ್‍ಗಳ ಸಾಧಾರಣ ಸವಾಲನ್ನು ನೀಡಿತು.

ಹುಷಾರು ಹೆಜ್ಜೆ:
ರಾಜಸ್ಥಾನ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ಅಜಿಂಕ್ಯ ರಹಾನೆ ಹಾಗೂ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟವಾಡಿದರು. ಕ್ರೀಸ್‍ಗೆ ಇಳಿದ ಕೂಡಲೇ
ಭರ್ಜರಿ ಹೊಡೆತಗಳಿಗೆ ಕೈ ಹಾಕದೇ ಮಂದಗತಿಯಲ್ಲಿ ಮೊತ್ತ ಪೇರಿಸುತ್ತಾ ಸಾಗಿದರು. ಇನಿಂಗ್ಸ್ ನ ಆರಂಭದ ಆರು ಓವರ್ ದಾಟಿದಾಗ, ರಾಜಸ್ಥಾನ ತಂಡದ ಮೊತ್ತ 36 ರನ್ ಆಗಿತ್ತು. ಅದುವರೆಗೂ ಬಂದ ಬೌಂಡರಿಗಳ ಸಂಖ್ಯೆ ಕೇವಲ 4! ಅಲ್ಪ ಗುರಿಯೆಂಬ ನಿರ್ಲಕ್ಷ್ಯ, ಹುಂಬತನ ತೋರದೆ ವಿಕೆಟ್ ಉಳಿಸಿಕೊಂಡು ಜವಾಬ್ದಾರಿಯುತ ಆಟ ಆಡುವ ಅವರಿಬ್ಬರ ಪ್ರತಿಯೊಂದು ನಡೆಯಲ್ಲೂ ವ್ಯಕ್ತವಾಗುತ್ತಿತ್ತು. ಆದರೆ, 11ನೇ ಓವರ್‍ನಲ್ಲಿ ರವಿ ಬೊಪಾರ ಅವರು, ಸ್ಯಾಮ್ಸನ್ ಅವರ ವಿಕೆಟ್ ಗಳಿಸುವ ಮೂಲಕ ರಹಾನೆ-ಸ್ಯಾಮ್ಸನ್ ಜೊತೆಯಾಟ ಮುರಿದರು. ಇದಾದ ಮೇಲೆ, ರಹಾನೆಗೆ ಜೊತೆಯಾದ ನಾಯಕ ಸ್ವೀವನ್ ಸ್ಮಿತ್ 2ನೇ ವಿಕೆಟ್ ಗೆ 20 ರನ್‍ಗಳ ಜೊತೆಯಾಟವನ್ನು ನೀಡಿದರು.

ಕರಣ ಶರ್ಮಾ ಅವರು ಸ್ಮಿತ್ ಅವರ ವಿಕೆಟ್ ಪಡೆಯುವ ಮೂಲಕ, ಈ ಜೊತೆಯಾಟವನ್ನೂ ಮುರಿದರು. ಅವರ ನಂತರ ಆಡಲು ಕ್ರೀಸ್‍ಗೆ ಇಳಿದ ಕರುಣ್ ನಾಯರ್ ಅವರೂ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲದೇ ಪೆವಿಲಿಯನ್‍ಗೆ ಹೊರಟರು. ಹೀಗೆ, ಒಂದರ ಹಿಂದೊಂದರಂತೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‍ನಲ್ಲಿ ಗಟ್ಟಿಯಾಗಿ ಬೇರೂರಿದ್ದ ರಹಾನೆ ನಿಧಾನವಾಗಿ ರನ್ ಪೇರಿಸುವತ್ತ ಗಮನ ಹರಿಸಿದ್ದರು. ಕರುಣ್ ನಾಯರ್ ನಂತರ ಬಂದಿದ್ದ ಸ್ಟುವರ್ಟ್ ಬಿನ್ನಿ ಜೊತೆ 4ನೇ ವಿಕೆಟ್‍ಗೆ 24 ರನ್ ಸೇರಿಸಿದರು. ಇದೇ ವೇಳೆ ತಮ್ಮ ಅರ್ಧಶತಕ ಪೂರೈಸಿದರು. ವೈಯಕ್ತಿಕವಾಗಿ 64 ರನ್ ಗಳಿಸಿದ್ದಾಗ ಬೌಲ್ಟ್ ಅವರ ಬೌಲಿಂಗ್‍ನಲ್ಲಿ ಬೌಲ್ಡ್ ಆಗಿ ಹೊರನಡೆದರು. ಆಗ, 118 ರನ್ ಗಳಿಸಿದ್ದ ರಾಜಸ್ಥಾನ ತಂಡ, ಗೆಲವಿನ ಹೊಸ್ತಿಲಿಗೆ ಬಂದು ನಿಂತಿತು. ಆಗ ಕ್ರೀಸ್ ನಲ್ಲಿದ್ದ ಸ್ಟುವರ್ಟ್ ಬಿನ್ನಿಗೆ ಜೋಡಿಯಾದ ಜೇಮ್ಸ್ ಫಲ್ಕನರ್, ತಂಡವನ್ನು ಗೆಲವಿನ ದಡ ಸೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.