ಬಿಸಿಲ ಕುಸ್ತಿ

ಕುಸ್ತಿ ಎಂದರೆ ಗೊತ್ತು. ಇದೇನಿದು ಹೊಸದು ಬೇಸಿಗೆ ಕುಸ್ತಿ ಎಂದು ಹುಬ್ಬೇರಿಸಬೇಡಿ. ನಮ್ಮ ರಾಜ್ಯದಲ್ಲಿ ಕುಸ್ತಿ ಪರಂಪರೆ ಬೆಳೆದು ಬಂದಿದ್ದೇ ಬೇಸಿಗೆಯಲ್ಲಿ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಇದು ಹೆಚ್ಚು ಚಾಲ್ತಿಯಲ್ಲಿದೆ.
ಉತ್ತರ ಕರ್ನಾಟಕದಾದ್ಯಂತ ಬೇಸಿಗೆಯಲ್ಲಿ ಯಾವುದೇ ಕೃಷಿ ಚಟುವಟಿಕೆ ಇರುವುದಿಲ್ಲ. ಈ ವೇಳೆಯಲ್ಲಿ ಯುವಕರು ಅಡ್ಡದಾರಿಗೆ (ಕೆಟ್ಟ ಹವ್ಯಾಸ) ಬೀಳದೇ ಇರಲಿ ಎನ್ನುವ ಉದ್ದೇಶದಿಂದ ಅಂದಿನ ಹಿರಿಯರು ಯುವಕರನ್ನು ಗರಡಿ ಮನೆಗಳತ್ತ ಆಕರ್ಷಿತರಾಗುವಂತೆ ಮಾಡುತ್ತಿದ್ದರು. ಅದಕ್ಕಾಗಿಯೇ ಗ್ರಾಮೀಣ ಪ್ರದೇಶದ ಈ ಕುಸ್ತಿಗೆ ಇಂದಿಗೂ ಬೇಸಿಗೆ ಕುಸ್ತಿ ಅಥವಾ ಬಿಸಿಲ ಕುಸ್ತಿ ಅಂತಲೇ ಕರೆಯುತ್ತಾರೆ.
ಕುಸ್ತಿ ವಿಧಗಳು
ಇದಕ್ಕೆ ಈ ರೀತಿಯ ಹೆಸರು ಬರಲು ಮತ್ತೊಂದು ಪ್ರಮುಖ ಕಾರಣ, ಇವು ನಡೆಯುವುದು ಬಯಲಲ್ಲಿ ಅಥವಾ ಬಿಸಿಲಿನಲ್ಲಿ. ಆ ದೃಷ್ಟಿಯಿಂದಲೂ ಇದಕ್ಕೆ ಬಿಸಿಲ ಕುಸ್ತಿ ಎನ್ನುವ ಹೆಸರು ಬಂದಿದೆ. ಕುಸ್ತಿ ಇಂದು ಜಗತ್ತಿನ ಕ್ರೀಡೆ. ಆಯಾ ದೇಶದ ಸಾಂಸ್ಕೃತಿಕ ಮತ್ತು ಕ್ರೀಡೆ ಬೆಳೆದುಕೊಂಡು ಬಂದ ರೀತಿಯ ಆಧಾರದಲ್ಲಿ ಕುಸ್ತಿಗಳ ವೈವಿಧ್ಯ ನಮಗೆ ಗೊತ್ತಾಗುತ್ತದೆ. ನಮ್ಮ ದೇಶದಲ್ಲೇ ಬಯಲು (ಬಿಸಿಲ) ಕುಸ್ತಿ. ಮುಷ್ಟಿ ಕುಸ್ತಿ, ಮುಂಗೈ ಕುಸ್ತಿ, ಎದೆ ಕುಸ್ತಿ, ಕಾಲು ತಳುಕು ಕುಸ್ತಿ ಹೀಗೆ ವಿಧಗಳು ಕಂಡು ಬರುತ್ತವೆ.
ಆದರೆ, ಎಲ್ಲ ಕುಸ್ತಿಗಳ ತವರು ಮನೆ ಎಂದು ಕರೆಸಿಕೊಳ್ಳುವುದು ನಮ್ಮ ಮೂಲ ಕುಸ್ತಿಯಾದ ಬೇಸಿಗೆ ಕುಸ್ತಿ. ಈ ಕುಸ್ತಿಯನ್ನು ಆಡಬೇಕಾದಲ್ಲಿ, ಕಲಿಯಬೇಕಾದಲ್ಲಿ ಮೊದಲು ಗುಂಡಿಗೆ ಗಟ್ಟಿ ಬೇಕು. ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವ ಆತ್ಮವಿಶ್ವಾಸವಿರಬೇಕು. ಮುಖ್ಯವಾಗಿ ಬೆಳಗ್ಗೆ ಮತ್ತು ಸಾಯಂಕಾಲ ಬಿಡುವಿನ ಸಮಯವಿರಬೇಕು. ಇದೆಲ್ಲ ಕಂಡು ಬರುವುದು ನಮ್ಮ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ, ಕೃಷಿಯನ್ನೇ ವೃತ್ತಿಯನ್ನಾಗಿ ನಂಬಿರುವ ಯುವಕರಲ್ಲಿ. ಹಾಗಾಗಿಯೇ ಪ್ರತಿ ಬೇಸಿಗೆಯಲ್ಲೂ ಯುವ ರೈತರಿಗೆ ಹೆಚ್ಚಿನ ಸಮಯ ಸಿಗುವುದರಿಂದ ಅವರೆಲ್ಲ ಈ ಕುಸ್ತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.
ಕುಸ್ತಿಗೆ ಉತ್ತೇಜನ
ಬಿಸಿಲ ಕುಸ್ತಿಯನ್ನು ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ಹಿಂದಿನ ಹಿರಿಯರು ಬಹುತೇಕವಾಗಿ ಬೇಸಿಗೆಯಲ್ಲೇ ಬರುವ ಜಾತ್ರೆಗಳಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ, ಯುವಕರು ಕುಸ್ತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾವು ಕಲಿತ ವಿದ್ಯೆಯನ್ನು, ಕಟ್ಟುಮಸ್ತಾದ ದೇಹ, ಕುಸ್ತಿಯ ಚಾಕಚಕ್ಯತೆ ಪ್ರದರ್ಶಿಸಿ ಬಹುಮಾನ ಪಡೆಯುತ್ತಿದ್ದರು. ಇದು ಜಾತ್ರೆಗಳಿಗೆ ಬರುವ ಸಾರ್ವಜನಿಕರಿಗೆ ಮನರಂಜನೆ ಹಾಗೂ ಸಾಹಸ ಕ್ರೀಡೆಯ ದರ್ಶನ ಮಾಡುವುದರೊಟ್ಟಿಗೆ ನಮ್ಮ ಅಪ್ಪಟ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಉತ್ತೇಜನ ದೊರೆಯುತ್ತಿತ್ತು.
ಗ್ರಾಮೀಣ ಭಾಗದಲ್ಲಿ ಜಾತ್ರೆಗಳೂ ಬೇಸಿಗೆಯಲ್ಲೇ ನಡೆಯುವುದು. ಹಾಗಾಗಿ ಬೇಸಿಗೆಯಲ್ಲೇ ಈ ಗ್ರಾಮೀಣ ಕುಸ್ತಿಗಳು ನಡೆಯುವುದರಿಂದಲೂ ಬಿಸಿಲ ಕುಸ್ತಿಯಾಗಿ ಜನತೆ ಇದನ್ನು ಗುರುತಿಸುತ್ತಾರೆ. ಇಂಥ ಅಪ್ಪಟ ಕ್ರೀಡೆಯನ್ನು ಅದೇ ಹಳೇ ಮಾದರಿಯಲ್ಲೇ ಉಳಿಸಿ, ಬೆಳೆಸುವ ಪ್ರಯತ್ನಗಳು ನಡೆಯಬೇಕಿದೆ. ಅದರಲ್ಲೂ ಬಡವರ ಈ ಕುಸ್ತಿಯ ಮುಖ್ಯ ಬೆಳವಣಿಗೆ ಸ್ಥಳವಾದ ಗರಡಿ ಮನೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
= ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


