ಕ್ರೀಡೆ

ಪ್ರೀತಿಯ ಶುಮಿಗೆ

ಸಹನೆ ಕಳೆದುಹೋಗುತ್ತಿದೆ... ಅಭಿಮಾನ ಅನಾಥಪ್ರಜ್ಞೆಯಿಂದ ನರಳುತ್ತಿದೆ. ನಮ್ಮೆಲ್ಲರ ಅಚ್ಚುಮೆಚ್ಚಿನ ನೀನು ಹೀಗೆ ನಿಶ್ಚೇಷ್ಟಿತನಾಗಿ...

ಪ್ರೀತಿಯ ಶುಮಿಗೆ
Published On :

ಸಹನೆ ಕಳೆದುಹೋಗುತ್ತಿದೆ... ಅಭಿಮಾನ ಅನಾಥಪ್ರಜ್ಞೆಯಿಂದ ನರಳುತ್ತಿದೆ. ನಮ್ಮೆಲ್ಲರ ಅಚ್ಚುಮೆಚ್ಚಿನ ನೀನು ಹೀಗೆ ನಿಶ್ಚೇಷ್ಟಿತನಾಗಿ ಮಲಗಿರುವುದನ್ನು ನೋಡಿದರೆ ಖೇದವೆನಿಸುತ್ತದೆ. ಮೂರು ತಿಂಗಳಾಗುತ್ತಾ ಬಂತು... ನೀನು ಹೀಗೆ ಸಾವು- ಬದುಕಿನ ಮಧ್ಯೆ ಹೋರಾಟ ಶುರು ಮಾಡಿ. ಅಲ್ಲಿಂದ ಇಲ್ಲಿಯವರೆಗೂ ನಿನ್ನ ಹೋರಾಟ ನಿಂತಿಲ್ಲ... ಇತ್ತ, ನಿನ್ನ ಅಭಿಮಾನಿಗಳ ಆತಂಕವೂ ದೂರವಾಗಿಲ್ಲ. ಆದರೂ, ನೀನು ಒಂದಲ್ಲಾ ಒಂದು ದಿನ ಚೇತರಿಕೆ ಕಂಡು ಮೇಲೇಳುತ್ತೀಯಾ ಎಂಬ ಅಗೋಚರ ಭರವಸೆಯೊಂದಿಗೆ ನಾವೆಲ್ಲರೂ ಕಾಲ ತಳ್ಳುತ್ತಿದ್ದೇವೆ.
ನಾನಾಗ ಪ್ರಾಯಕ್ಕೆ ಬರುತ್ತಿದ್ದೆ. ಫಾರ್ಮುಲಾ ಒನ್ ಎಂಬ ಎರಡು ಪದಗಳ ಕ್ರೀಡೆ ಆಗ ತಾನೆ ಅರ್ಥವಾಗುತ್ತಿದ್ದ ಕಾಲವದು. ಆದರೆ, ಅದು ಅಷ್ಟು ಅರ್ಥವಾಗಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅದರ ನೆಪದಲ್ಲಿ ನೀನಂತೂ ಚಿರಪರಿಚಿತನಾಗಿದ್ದೆ. ನಿನ್ನ ಸಾಧನೆ, ನಿನ್ನ ಅಪ್ರತಿಮ ಚಾಕಚಕ್ಯತೆ, ಟ್ರ್ಯಾಕ್‌ನಲ್ಲಿ ನೀನು ಮಿಂಚಿನಂತೆ ಸಾಗುವ ರೀತಿ... ಉಫ್.... ಅವೆಲ್ಲವೂ ಕೇವಲ ನನ್ನನ್ನಷ್ಟೇ ಅಲ್ಲ, ನನ್ನಂತಹ ಅದೆಷ್ಟೋ ಅಭಿಮಾನಿಗಳ ಮನಸೂರೆಗೊಂಡಿದ್ದಂತೂ ಅಕ್ಷರಶ- ನಿಜ. ನಿನ್ನಲ್ಲಿನ ಅದ್ಭುತ ಪ್ರತಿಭೆಗೆ ಮಾರುಹೋದ ನಾನಂತೂ ನಿನ್ನ ಫ್ಯಾನ್ ಆಗಿಬಿಟ್ಟಿದ್ದೆ. ಈಗ ಅದನ್ನೆಲ್ಲಾ ನೆನಪಿಸಿಕೊಂಡರೆ, ಫಾರ್ಮುಲಾ ಒನ್‌ನಿಂದ ನೀನು ನನಗೆ ಪರಿಚಿತನಾದೆಯೋ ಅಥವಾ ನಿನ್ನಿಂದ ಫಾರ್ಮುಲಾ ಒನ್ ನನಗೆ ಹೆಚ್ಚು ಅರ್ಥವಾಗುತ್ತಾ, ಆಪ್ತವಾಗುತ್ತಾ ಹೋಯ್ತೋ ಗೊತ್ತಾಗುತ್ತಿಲ್ಲ. ಇರಲಿ... ಆದರೆ, ನೀನಂತೂ ನನ್ನ ಮನಸ್ಸಿನಲ್ಲಿ ಎಫ್ ಒನ್‌ಗೆ ಪರ್ಯಾಯ ಪದವಾಗಿ ಅಚ್ಚಾಗಿದ್ದೀಯಾ. ಅದೇ ನನಗೆ ಸಂತೋಷ.
ನಿನ್ನ ಮಾತೃಭೂಮಿ ಜರ್ಮನಿ ಕನ್ನಡಿಗರಿಗೆ ಅಪರಿಚಿತವೇನಲ್ಲ. ಆ ದೇಶವನ್ನಾಳಿದ ಹಿಟ್ಲರ್, ಅಲ್ಲಿನ ಕಾಫಿ, ಫುಟ್ಬಾಲ್... ಹೀಗೆ ಎಲ್ಲವೂ ನಮಗೆ ಗೊತ್ತು. ಪ್ರಿಂಟಿಂಗ್ ತಂತ್ರಜ್ಞಾನ, ಆಟೋಮೊಬೈಲ್ ತಂತ್ರಜ್ಞಾನ... ಅಷ್ಟೇ ಏಕೆ ನಾನು ಸಂಗೀತವನ್ನು ಆನಂದಿಸಲು ಬಳಸುವ ಎಂಪಿ 3 ತಂತ್ರಜ್ಞಾನವೂ ನಿನ್ನ ದೇಶದ ಕೊಡುಗೆಗಳಲ್ಲೊಂದು. ಅದರಲ್ಲೂ ಕನ್ನಡಕ್ಕೆ ಹೆಚ್ಚು ಸೇವೆ ಸಲ್ಲಿಸಿದ ರೆವೆರೆಂಡ್ ಜಾರ್ಜ್ ಕಿಟ್ಟೆಲ್ ಅಂತೂ ಕನ್ನಡಿಗರ ಕಣ್ಮಣಿ. ಕನ್ನಡಕ್ಕೆ ಅವರು ಮಾಡಿದ ಸೇವೆ ಮರೆಯಲಾಗದ್ದು. ಇನ್ನು, ನೀನು ಪ್ರತಿನಿಧಿಸುವ ಮರ್ಸಿಡಿಸ್ ತಂಡದ ಮಾಲೀಕತ್ವ ಹೊಂದಿರುವ ಮರ್ಸಿಡೀಸ್ ಆಟೋಮೊಬೈಲ್ ಸಂಸ್ಥೆಯಂತೂ ಅಚ್ಚುಮೆಚ್ಚು. ಇಂದಿಗೂ ಮರ್ಸಿಡೀಸ್ ಕಾರು ಕೊಳ್ಳುವುದೆಂದರೆ ನಮಗೆಲ್ಲಾ ಪ್ರತಿಷ್ಠೆಯ ಹಾಗೂ ಪುಳಕಿತಗೊಳ್ಳುವ ವಿಷಯ. ಹೀಗೆ,  ಅನೇರವಾಗಿ ನಮ್ಮ ಅರಿವಿನ ಜಗತ್ತಿನಲ್ಲಿ, ನಮ್ಮ ಆಲೋಚನೆಗಳೊಂದಿಗೆ, ಅಭಿರುಚಿಗಳೊಂದಿಗೆ ಹಾಸುಹೊಕ್ಕಾಗಿರುವ ಜರ್ಮನಿ ವಿಶ್ವಕ್ಕೆ ಕೊಟ್ಟ ಮತ್ತೊಂದು ಕೊಡುಗೆ ಶುಮಾಕರ್ ಎಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ.
ಇಂಥ ಘನವೆತ್ತ ಸಂಸ್ಕೃತಿಯ ದೇಶದಿಂದ ಬಂದ ನೀನು ಏಳು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಮಾತ್ರ ಅದ್ವಿತೀಯ ಸಾಧನೆ. ಜಗತ್ತು ನಿಬ್ಬೆರಗಾಗಿ ನಿನ್ನತ್ತ ನೋಡುತ್ತಿದ್ದಂತೆ ನೀನು ಮುಗಿಲೆತ್ತರಕ್ಕೆ ಬೆಳೆದು ನೀಲಾಕಾಶದಲ್ಲಿ ನಿತ್ಯ ಮಿನುಗುವ ಧೃವತಾರೆಯಾಗಿ ಕಂಗೊಳಿಸಿದ್ದೆ. ನಿನ್ನಲ್ಲಿನ ಕ್ಷಮತೆಗೆ, ಅಸಾಧಾರಣ ಪ್ರತಿಭೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ನಿನ್ನ ಈ ಸಾಧನೆ ಅದೆಷ್ಟು ಜನರಿಗೆ ಸ್ಫೂರ್ತಿಯಾಗಿಲ್ಲ? ಅದೆಷ್ಟು ಯುವಜನರನ್ನು ಎಫ್1 ಕ್ರೀಡೆಯತ್ತ ಸೆಳೆದಿಲ್ಲ? ನಿನ್ನದೇ ಜಾಡು ಹಿಡಿದು ಬಂದ ಸೆಬಾಸ್ಟಿಯನ್ ವೆಟ್ಟಲ್ ಅಂಥವರು ಇಂದು ಮಾಡಿರುವ ಸಾಧನೆ, ಪರೋಕ್ಷವಾಗಿ ನಿನ್ನ ಸಾಧನೆಗೂ ಸಂದ ಗೌರವ ಎಂದು ನಾನು ಭಾವಿಸುತ್ತೇನೆ.
ಹೀಗೆ, ನಿನ್ನ ಸಾಧನೆ ಬಗ್ಗೆ ಹೇಳುತ್ತಾ ಸಾಗಿದರೆ, ಸಾವಿರ ಪುಟಗಳಾದರೂ ಈ ಪತ್ರ ಮುಗಿಯುವುದಿಲ್ಲ ಶುಮಿ. ಒಂದಂತೂ ಸತ್ಯ. ನೀನು ಜಗತ್ತು ಕಂಡ ರೋಮಾಂಚಕ ಕ್ರೀಡೆಯೊಂದರ ಮುಕುಟಪ್ರಾಯ. ಇದಕ್ಕಿಂತ ಹೆಚ್ಚೇನೂ ನಾನು ಹೇಳಲಾರೆ.
2011ರಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ಯಾನ್ ಪ್ರೀ ನಡೆದಾಗ, ನೀನು ಆಗಮಿಸಿದ್ದೆ. ಆ ಸಂದರ್ಭದಲ್ಲಿ ನಾನು ನಿನ್ನನ್ನು ಒಮ್ಮೆಯಾದರೂ ಭೇಟಿಯಾಗಬೇಕೆಂದು ಹಂಬಲಿಸಿದ್ದೆ. ಭೇಟಿಯಾಗುವುದು ಕಷ್ಟದ ಮಾತು. ಕನಿಷ್ಟ ನಿನ್ನನ್ನು ಹತ್ತಿರದಿಂದ ನೋಡಬೇಕು ಎಂದು ಕಾತರಿಸುತ್ತಿದ್ದೆ. ಅದೆಲ್ಲಾ ಸಾಧ್ಯವಾಗಲಿಲ್ಲ. ಅಂತೂ ಇಂಡಿಯನ್ ಜಿಪಿ ನೆಪದಲ್ಲಿ ನೀನು ಭಾರತಕ್ಕೆ ಆಗಮಿಸಿದ್ದು ನನಗಂತೂ ಖುಷಿಯ ವಿಚಾರವಾಗಿತ್ತು. ಅದರಲ್ಲೂ ಆಗ, ನೀನು ಭಾರತದ ಕೋಟ್ಯಾಂತರ ಅಭಿಮಾನಿಗಳ ತಾರೆ ಸಚಿನ್ ತೆಂಡೂಲ್ಕರ್ ಜೊತೆ ನಿಂತ ಚಿತ್ರ ಮರುದಿನ ಪತ್ರಿಕೆಗಳಲ್ಲಿ ನೋಡಿದಾಗಲಂತೂ ನಾನು ರೋಮಾಂಚನಗೊಂಡಿದ್ದೆ. ಆ ಖುಷಿಯ ಘಳಿಗೆಗಳನ್ನು ಮರೆಯಲಾದೀತೆ.
ಯಾಕೋ ಶುಮಿ ಗೊತ್ತಿಲ್ಲ... ಇದನ್ನೆಲ್ಲಾ ಹೇಳುತ್ತಾ ಹೋದಂತೆಲ್ಲಾ ಮನಸ್ಸು ಮತ್ತಷ್ಟು ಭಾರವಾಗುತ್ತಿದೆ. ಕಣ್ಣಾಲಿಗಳು ತೇವಗೊಳ್ಳುತ್ತಿವೆ. ಆರ್ದ್ರ ಹೃದಯದೊಂದಿಗೆ ನಾನು ಪ್ರಾರ್ಥಿಸುತ್ತಿದ್ದೇನೆ... ನೀನು ಬೇಗ ಗುಣಮುಖನಾಗಲಿ ಅಂತ... ಐಸಿಯುನಿಂದ ಬೇಗ ಎದ್ದು ಬಾ.. ಐ ವಾಂಟ್ ಟು ಸೀ ಯು ಎಗೇನ್..ಗೆಟ್ ವೆಲ್ ಸೂನ್ ಶುಮಿ...
ನಿನ್ನ ಅಭಿಮಾನಿ

-ಚೇತನ್ ಓ.ಆರ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.