ಕಾರ್ಚೆಂಡಾಟ
ಫುಟ್ಬಾಲ್ ಕ್ರೀಡಾಂಗಣದಲ್ಲಿ ನಾವಿಷ್ಟಪಡುವ ಆಟಗಾರ ಕಾಲಿಟ್ಟಾಗ ಹುಚ್ಚೆದ್ದು ಕುಣಿಯುತ್ತೇವೆ. ಆದರೆ ಈ ಫುಟ್ಬಾಲ್ ...

ಫುಟ್ಬಾಲ್ ಕ್ರೀಡಾಂಗಣದಲ್ಲಿ ನಾವಿಷ್ಟಪಡುವ ಆಟಗಾರ ಕಾಲಿಟ್ಟಾಗ ಹುಚ್ಚೆದ್ದು ಕುಣಿಯುತ್ತೇವೆ. ಆದರೆ ಈ ಫುಟ್ಬಾಲ್ ಆಟಗಾರರು ಮೈದಾನ ಬಿಟ್ಟು ಹೊರಗೆ ಖುಷಿ ಕಾಣುವುದು ಹುಡುಗಿಯರು ಹಾಗೂ ಕಾರಿನಲ್ಲಂತೆ. ಇದಕ್ಕಾಗಿ ಗರ್ಲ್ ಫ್ರೆಂಡ್ ಬದಲಾಯಿಸುವುದಕ್ಕಿಂತ ಹೆಚ್ಚು ಕಾರುಗಳನ್ನು ಬದಲಾಯಿಸುತ್ತಾರೆ. ಒಂದು ಹೆಜ್ಜೆ ಮುಂದೆ ಹೋಗಿ ಹತ್ತಾರು ಸೂಪರ್ ಕಾರುಗಳ ಕಲೆಕ್ಷನ್ ಹೊಂದಿರುತ್ತಾರೆ. ನಮ್ಮ ಮನೆಯ ಶೋಕೇಸ್ನಲ್ಲಿ ಚೆಂದದ ವಸ್ತುಗಳನ್ನು ಇಟ್ಟಂತೆ ಪಾರ್ಕಿಂಗ್ನಲ್ಲಿ ನಿಲ್ಲಿಸಿರುತ್ತಾರೆ.
ಫುಟ್ಬಾಲ್ ಎಂದಾಕ್ಷಣ ಮನಸ್ಸಿಗೆ ಬರುವುದು ಅದರ ರೋಚಕತೆ, ಗ್ಲಾಮರ್, ದುಡ್ಡಿನ ಹೊಳೆ, ಹುಚ್ಚು ಫ್ಯಾನ್ ಫಾಲೋವರ್ಸ್. ಆದರೆ ಈ ಕ್ರೀಡಾಳುಗಳು ಇದನ್ನು ಹೊರತುಪಡಿಸಿದ ಮತ್ತೊಂದು ಜಗತ್ತು ರೂಪಿಸಿಕೊಂಡಿರುತ್ತಾರೆ. ಕ್ಲಬ್ಗಳ ಮೂಲಕ ಚೀಲಗಟ್ಟಲೆ ಪಡೆದ ಹಣವನ್ನು ಹೇಗೆ ಖರ್ಚು ಮಾಡುವದು ಎಂಬ ತಲೆನೋವು. ಆಗ ಸುಲಭವಾಗಿ ಕಾಣುವುದೇ ಐಷಾರಾಮಿ ಕಾರುಗಳು. ಇನ್ನೂ ಮದುವೆಯಾಗದ ಫುಟ್ಬಾಲ್ ದಿಗ್ಗಜ, ಹೆಂಗಳೆಯರ ಕನಸಿನ ಕುವರ ಕ್ರಿಸ್ಟಿಯಾನೋ ರೊನಾಲ್ಡೋ ಬರೋಬ್ಬರಿ 19 ಕಾರುಗಳನ್ನು ಮನೆಯಲ್ಲಿಟ್ಟಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 30 ಕೋಟಿ ರುಪಾಯಿ. ಅರ್ಜೆಂಟೀನಾದ ಲಯೋನೆಲ್ ಮೆಸ್ಸಿ 8 ಕಾರುಗಳನ್ನು ಮನೆಯಲ್ಲಿ ಪಾರ್ಕ್ ಮಾಡಿಟ್ಟಿದ್ದಾರೆ. ಯುರೋಪಿನ ಫುಟ್ಬಾಲ್ ಕ್ಲಬ್ಗಳಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗುವ ಬಹುತೇಕ ಆಟಗಾರರು ಹಣ ಸಿಕ್ಕ ಬಳಿಕ ಆ ವರ್ಷ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಐಷಾರಾಮಿ ಕಾರನ್ನು ಮನೆಗೆ ತಂದು ನಿಲ್ಲಿಸುತ್ತಾರೆ.
ಇಂತಹ ಕೆಲ ಐಷಾರಾಮಿ ಕಾರನ್ನು ನೋಡಿ ಬಾಯಲ್ಲಿ ನೀರು ಬರಲಿ, ನಿಮ್ಮ ರಾತ್ರಿಯ ಕನಸಲ್ಲಿ ಆಟಗಾರರ ಜತೆ ಕಾರು ಬರಲೆಂದು ಕೆಲವು ಕಾರುಗಳ ವಿವರ ನಿಮಗೆ ಕೊಡುತ್ತಿದ್ದೇವೆ.
ಲಯೋನೆಲ್ ಮೆಸ್ಸಿ
ಮೆಸರಾಟಿ ಗ್ರ್ಯಾನ್ ತುರಿಸ್ಮೋ
ರೊನಾಲ್ಡೋಗೆ ಫುಟ್ಬಾಲ್ ಜಗತ್ತಿನಲ್ಲಿ ಪಕ್ಕಾ ಸ್ಪರ್ಧಿಯೆಂದರೆ ಮೆಸ್ಸಿ. ಆದರೆ, ಮೈದಾನದಲ್ಲಿನ ಪೈಪೋಟಿ ಕಾರ್ಗೆ ಸಂಬಂಧಿಸಿದ್ದಲ್ಲ. ಒಟ್ಟು ಎಂಟು ಕಾರುಗಳನ್ನು ಹೊಂದಿದ್ದರೂ ಅಂತಹ ಹುಚ್ಚು ಪ್ರೀತಿ ಹೊಂದಿಲ್ಲ. ಅದರಲ್ಲೂ ರೊನಾಲ್ಡೊಗೆ ಇರುವಂತೆ ಸ್ಪೋರ್ಟ್ಸ್ ಕಾರಿನ ಮೇಲೆ ವ್ಯಾಮೋಹವೂ ಇಲ್ಲ. ಸಾದಾ ಹಾಗೂ ಸಾಮಾನ್ಯ ವಿನ್ಯಾಸದ ಅಧಿಕ ಸಾಮರ್ಥ್ಯದ ಕಾರುಗಳು ಮೆಸ್ಸಿಗೆ ಇಷ್ಟವಂತೆ. ಮೆಸರಾಟಿ ಕಾರಿನ ಅಧಿಕ ವೇಗವೆಂದರೆ 308 ಕೀ.ಮಿ ಹೊಂದಿದ್ದು, ಇದರ ಬೆಲೆ 1.10 ಕೊಟಿ ರುಪಾಯಿ ಆಗುತ್ತದೆ.
ವೇನ್ ರೂನಿ
ಆಸ್ಟನ್ ಮಾರ್ಟಿನ್ ವ್ಯಾಂಕ್ವಿಷ್
ಕ್ಲಬ್ ಫುಟ್ಬಾಲ್ ಪಂದ್ಯಾವಳಿಗಳ ಹೀರೋ ರೂನಿ ಈ ಬಾರಿ ಆಸ್ಟನ್ ಕಾರುಗಳ ಮೂಲಕ ಮಿಂಚಿದ್ದ. ಕ್ಲಬ್ ಪಂದ್ಯಾವಳಿ ಮುಗಿಸಿ ಇಂಗ್ಲೆಂಡ್ಗೆ ಕಾಲಿಡುವಾಗ ಸುಮಾರು 1.70 ಕೋಟಿ ರುಪಾಯಿಯ ಈ ಕಾರಿನ ಮೂಲಕ ಲಂಡನ್ನಲ್ಲಿ ರೌಂಡ್ಸ್ ಹೊಡೆದಿದ್ದ. ಪ್ರತಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಓಡಿಸಬಹುದಾಗಿದ್ದರೂ ವಿಶ್ವಕಪ್ ಆಡಬೇಕೆಂಬ ಬಯಕೆಯಿಂದ ಪರೀಕ್ಷಿಸಿಲ್ಲ ಎನಿಸುತ್ತದೆ.
ಸ್ಯಾಮ್ಯೂಲ್ ಎಟೂ
ಮೇಬ್ಯಾಕ್ ಕೌಪ್
ಒಂದು ಕಾಲದಲ್ಲಿ ಫುಟ್ಬಾಲ್ ಜಗತ್ತಿನ ದುಬಾರಿ ಆಟಗಾರನಾಗಿದ್ದ ಸ್ಯಮ್ಯೂಲ್ ಎಟೂ 6.20 ಕೋಟಿ ಮೊತ್ತದ ದುಬಾರಿ ಕಾರು ಹೊಂದಿದ್ದಾನೆ. ಇದರೊಂದಿಗೆ ಆಸ್ಟನ್ ಕಂಪನಿಯ ಬಹುತೇಕ ಕಾರುಗಳನ್ನು ಈತ ಇಷ್ಟಪಡುತ್ತಾನೆ. ಯಾವುದೇ ಆಸ್ಟನ್ ಕಾರು ಬಂದರೆ ಸ್ಯಾಮ್ಯೂಲ್ ಟೆಸ್ಟ್ ಡ್ರೈವ್ಗೆ ಹೋಗುತ್ತಾನಂತೆ.
ಕ್ರಿಸ್ಟಿಯಾನೋ ರೊನಾಲ್ಡೋ
ಬುಗೋಟಿ, ಲಂಬೋರ್ಗಿನಿ ಅವೆಂಟಡಾರ್
ಕಾರಿನ ವಿನ್ಯಾಸ ನೋಡಿದರೇ ಮೈ ಜುಮ್ ಎನ್ನುವಷ್ಟು ಅದ್ಭುತವಾಗಿವೆ ಇವೆರಡು ಕಾರುಗಳು. ಕಳೆದ ವರ್ಷ ರೊನಾಲ್ಡೋ ಈ ಕಾರನ್ನು ಖರೀದಿಸಿದ್ದಾರೆ. ಬುಗಾಟಿಯಲ್ಲಿ ಐದೂವರೆ ಸೆಕೆಂಡ್ನಲ್ಲಿ 100 ಕಿ.ಮೀ ಹಾಗೂ 42 ಸೆಕೆಂಡ್ನಲ್ಲಿ ಬರೊಬ್ಬರಿ 250 ಕಿ.ಮೀ ವೇಗವನ್ನು ತಲುಪಬಹುದು. 1000 ಎಚ್ಪಿ ಸಾಮರ್ಥ್ಯ ಹೊಂದಿರುವ ಈ ಕಾರು ಜಗತ್ತಿನ ಅತಿ ಶಕ್ತಿಶಾಲಿ ಕಾರುಗಳಲ್ಲೊಂದು ಹಾಗೂ ಇದರ ಬೆಲೆ ಸುಮಾರು 12 ಕೋಟಿ ರುಪಾಯಿ. ಆದರೆ ವಿನ್ಯಾಸದ ದೃಷ್ಟಿಯಲ್ಲಿ ಲಂಬೋರ್ಗಿನಿ ಕ್ರಿಸ್ಟಿಯಾನೋ ರೊನಾಲ್ಡೋನ ಗೆಳತಿಗಿಂತ ಚೆನ್ನಾಗಿದೆ.
ನೇಮಾರ್
ಆಡಿ ಆರ್8
ಬ್ರೆಜಿಲ್ ಫುಟ್ಬಾಲ್ನ ಕೋಟ್ಯಂತರ ಹುಚ್ಚು ಪ್ರೇಮಿಗಳ ನಿರೀಕ್ಷೆ ಹೊಂದಿರುವ ನೇಮಾರ್, ಆಡಿ ಕಾರನ್ನು ತನ್ನ ಇಷ್ಟಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದಾನೆ. ಕ್ಲಾಸಿ ಆಟಗಾರನ ಕಾರಿನ ಮೇಲೆ ಪ್ರೀತಿಯೂ ಅಷ್ಟೇ ಕ್ಲಾಸಿಯಾಗಿದೆ. ಕಾರನ್ನು ಅತಿಯಾಗಿ ಇಷ್ಟಪಟ್ಟರೂ ಸಿಂಪಲ್ ಆಗಿ ಲೇಟೆಸ್ಟ್ ಆಗಿರಬೇಕು ಎನ್ನುವುದು ಆತನ ಲೆಕ್ಕಾಚಾರವಂತೆ. ನೇಮಾರ್ ಈ ಕಾರಿಗೆ ಸುಮಾರು 2 ಕೋಟಿ ಖರ್ಚು ಮಾಡಿದ್ದಾನೆ.
ಮಾರಿಯೋ ಬಾಲೋಟೆಲ್ಲಿ
ಫೆರಾರಿ-ಎಫ್12
ಫೆರಾರಿ ಕಾರೆಂದಕ್ಷಣ ಭಾರತದ ಕ್ರೀಡಾ ಪ್ರೇಮಿಗಳಿಗೆ ನೆನಪಾಗುವುದು ಸಚಿನ್ ಹಾಗೂ ಶೂಮ್ಯಾಕರ್. ಫೆರಾರಿ ಕಾರಲ್ಲಿ ಒಮ್ಮೆ ಪರಾರಿಯಾಗಬೇಕೆಂದು ಎನಿಸುತ್ತದೆ. ಇದೇ ಕಾರಿನ ಮೂಲಕ ಮೆಂಚೆಸ್ಟರ್ ರಸ್ತೆಯ ಗಲ್ಲಿ ಗಲ್ಲಿ ಸುತ್ತಲು ಬಾಲೋಟೆಲ್ಲಿ ಇಷ್ಟಪಡುತ್ತಾನೆ. 12 ಸಿಲಿಂಡರ್ ಸಾಮರ್ಥ್ಯದೊಂದಿಗೆ ಕೇವಲ 9 ಸೆಕೆಂಡ್ಗಳಲ್ಲಿ ಈ ಕಾರು 200 ಕಿ.ಮೀ ವೇಗವನ್ನು ತಲುಪಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಮೊತ್ತ 4.50 ಕೋಟಿ ರುಪಾಯಿ.
-ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


