ರೋಡ್ರಿ ನೋಡ್ರಿ...
ಎರಡು ವರ್ಷದ ಆ ಮಗುವಿನ ತಂದೆ ಕೊಲಂಬಿಯಾದಲ್ಲಿ 'ಬಿ' ಡಿವಿಷನ್ ಫುಟ್ಬಾಲಿಗ. ತಂದೆ ರೈಲಿನಲ್ಲಿ ಆಗಮಿಸಿ..

ಎರಡು ವರ್ಷದ ಆ ಮಗುವಿನ ತಂದೆ ಕೊಲಂಬಿಯಾದಲ್ಲಿ 'ಬಿ' ಡಿವಿಷನ್ ಫುಟ್ಬಾಲಿಗ. ತಂದೆ ರೈಲಿನಲ್ಲಿ ಆಗಮಿಸಿ ಮೈದಾನದಲ್ಲಿ ಉಳಿದ ಸದಸ್ಯರೊಂದಿಗೆ ತಾಲೀಮಿನಲ್ಲಿ ನಿರತನಾಗಿದ್ದರೆ ಮಗು ತಾನೂ ತಾಲೀಮಿನ ಕಣಕ್ಕಿಳಿಯುತ್ತಿತ್ತು. ಅಲ್ಲಿ ಆಟಗಾರರು ಏನು ಮಾಡುತ್ತಿದ್ದರೋ ಅದನ್ನೇ ಅನುಕರಿಸುತ್ತಿತ್ತು. ಅವರು ವಾರ್ಮ್ ಅಪ್ಗೆಂದು ಓಡುತ್ತಿದ್ದರೆ, ತಾನೂ ಪುಟ್ಟ ಹೆಜ್ಜೆಯನ್ನಿಡುತ್ತಾ ಓಡುತ್ತಿತ್ತು. ಅವರು ಕೂತು ವ್ಯಾಯಾಮ ಮಾಡುತ್ತಿದ್ದರೆ ಅದೂ ಮುದ್ದು ಮುದ್ದಾಗಿ ಏನೋನೋ ಪ್ರಯತ್ನ ನಡೆಸುತ್ತಿತ್ತು. ಆದರೆ ಆ ಮುದ್ದು ಮುಖದ ಮಗುವೇ 21 ವರ್ಷದ ಬಳಿಕ ಫಿಫಾ ಗೋಲ್ಡನ್ ಬೂಟ್ ಎತ್ತಿ ಹಿಡಿಯಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಆ ಪವಾಡವೇ ಜೇಮ್ಸ್ ರೋಡ್ರಿಗಸ್!
ಫುಟ್ಬಾಲೇ ಬದುಕು
ಹಸಿ ಹಸಿ 5ರ ಹರೆಯಕ್ಕೇ ಅಕಾಡೆಮಿಕ್ ಟೋಲಿಮನ್ಸ್ ಸ್ಕೂಲ್ಗೆ ಸೇರಿದ ಈ ಬಾಲಕ ತನ್ನ ಬದುಕಿನಲ್ಲಿ ಫುಟ್ಬಾಲ್ ಹೊರತುಪಡಿಸಿದರೆ ಮತ್ತೇನೂ ಆಲೋಚಿಸಿಲ್ಲ. ಅದಕ್ಕೇ ಕೊಲಂಬಿಯಾ ಹೆಮ್ಮೆ ಪಡುವ ಆಟಗಾರ ದೊರಕಿದ್ದಾನೆ. ಕೊಲಂಬಿಯಾ ಕ್ವಾರ್ಟರ್ಫೈನಲ್ ತಲುಪಿದಾಗ ಆತನ ಪ್ರತಿಕ್ರಿಯೆ ಹೀಗಿತ್ತು... 'ಇಲ್ಲಿರಬೇಕೆಂದು ನಾನು ಬಾಲ್ಯದಲ್ಲೇ ಅಂದುಕೊಂಡಿದ್ದೆ. ಇದು ನನ್ನ ಬಹುದೊಡ್ಡ ಕನಸಾಗಿತ್ತು. ಇಂದು ಇದಕ್ಕಿಂತಲೂ ದೊಡ್ಡ ಸಾಧನೆ ಮಾಡಬಲ್ಲೆವೆಂಬ ವಿಶ್ವಾಸ ನಮಗಿದೆ'. ಇಷ್ಟು ಹೇಳಿದ ಜೇಮ್ಸ್ ಇಂದು ವಿಶ್ವಕಪ್ ಗೆಲ್ಲದಿರಬಹುದು. ಆದರೆ ಗೋಲ್ಡನ್ ಬೂಟಿನೊಂದಿಗೆ ಫುಟ್ಬಾಲ್ ಪ್ರೇಮಿಗಳ ಮನಸ್ಸು ಗೆದ್ದಿದ್ದಾನೆ. ಹೀಗಾಗಿಯೇ ಸ್ವಭಾವತಃ ಕೊಂಚ ಸಂಕೋಚ ಮನೋಭಾವದ ಜೇಮ್ಸ್ ಪ್ರತಿ ಗೋಲು ಬಾರಿಸಿ ನಗುತ್ತಾ ಕುಣಿವಾಗಲೂ ಆತನ ಸಂಭ್ರಮಕ್ಕೆ ಫುಟ್ಬಾಲ್ ಪ್ರೇಮಿಗಳು ಮುಕ್ತಮನಸ್ಸಿನಿಂದ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ.
ಅದು 13ರ ಗೋಲು
ಜೂನಿಯರ್ ಮಟ್ಟದ ಪಂದ್ಯ ಆಡುವ ಪ್ರಾಯದಲ್ಲೇ ಸೀನಿಯರ್ ಆಟಗಾರರ ಮಧ್ಯ ಸೆಣೆಸಿದ ರೋಡ್ರಿಗಸ್ 13ರ ಹರೆಯದಲ್ಲೇ ಕಾರ್ನರ್ ಮೂಲಕ ಗೋಲು ಗಳಿಸುವಷ್ಟು ಚತುರನಾಗಿದ್ದ. ಇದೇ ಕ್ಷಿಪ್ರತನವೇ ಆತನನ್ನು ಬೆಳೆಸಿತು. ಕ್ಲಬ್ ತಂಡಗಳಲ್ಲಿ ಆಡುವುದಕ್ಕಾಗಿ ಅರ್ಜೆಂಟಿನಾವನ್ನು ನೆಚ್ಚಿಕೊಂಡ. ಇದರಿಂದ ಆತನ ಕ್ಷಮತೆ ಮತ್ತಷ್ಟು ಹೆಚ್ಚಿತು. ಕೊಲಂಬಿಯಾ ಅಂಡರ್ 17, ಅಂಡರ್ 19 ತಂಡಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವ ರಾಷ್ಟ್ರೀಯ ತಂಡದ ಆಸ್ತಿ. ಎ.ಎಸ್. ಮೊನಾಕೊ ಫುಟ್ಬಾಲ್ ಕ್ಲಬ್ನ ಹೆಮ್ಮೆಯ ಆಟಗಾರ.
ನವಾವತಾರಿ
ಈತನಿಂದ ಅತ್ಯಂತ ಹಾನಿಗೊಳಗಾದ ಉರುಗ್ವೆ ತಂಡದ ಕೋಚ್, ಅಂತೂ ಕೊಲಂಬಿಯಾ ಪಾಲಿಗೆ ಈತ ಮರಡೋನಾ ಪ್ರತಿರೂಪ ಎಂದು ಶ್ಲಾಫಿಸಿದರು. ಕೊಲಂಬಿಯಾ ಫುಟ್ಬಾಲ್ ದಂತಕತೆ ಕಾರ್ಲೋಸ್ ವಾಲ್ಡೆ ರಾಮನೇ ಈತನನ್ನು ತನ್ನ ಉತ್ತರಾಧಿಕಾರಿ ಎಂದು ಕರೆದ. ಆತನ ಆಟದ ಶೈಲಿಯೇ ಹಾಗಿದೆ. 10ನೇ ಸಂಖ್ಯೆಯ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಈತ ಯಾವ ಪರಿಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಆಡಬಲ್ಲ ಛಲದಂಕಮಲ್ಲ.
ನಂಗೆ ಇದೇ ಪೊಸಿಷನ್ ಬೇಕು ಅಂತ ಯಾವತ್ತೂ ಹೇಳಿದ್ದಿಲ್ಲ. ತಂಡದ ಆವಶ್ಯಕ್ಕನುಗುಣವಾಗಿ ಆತ ಎಲ್ಲಿ ಬೇಕಾದರೂ ಅವತಾರ ತಾಳಬಲ್ಲ. ಡಿಫೆಂಡರ್ ಆಗಿ ತಂಡಕ್ಕೆ ರಕ್ಷಣೆ ನೀಡಬಲ್ಲ. ಮಿಡ್ ಫೀಲ್ಡರ್ ಆಗಿ ತನ್ನ ತಂಡದ ಗೋಲ್ ಬಾಕ್ಸ್ನಿಂದ ಎದುರಾಳಿ ತಂಡದ ಗೋಲ್ಬಾಕ್ಸ್ವರೆಗೆ ಅದ್ಭುತವಾಗಿ ಸಂಪರ್ಕ ಸಾಧಿಸಬಲ್ಲ. ಮುನ್ನಡೆ ಆಟಗಾರನಾಗಿ ಚಾಣಾಕ್ಷತನದಿಂದ ಎದುರಾಳಿ ಗೋಲ್ಬಾಕ್ಸ್ನೊಳಗೆ ಚೆಂಡನ್ನು ತುರುಕಿಸಬಲ್ಲ.
ವಿಶ್ವಕಪ್ ಪ್ರಾರಂಭಕ್ಕೆ ಮುನ್ನವೇ 23ರ ಈ ಯುವಕ ಪ್ರತಿಭಾವಂತ ಎಂದು ಗುರುತಿಸಿಕೊಂಡಿದ್ದರೂ ಆತನನ್ನು ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ. ವಿಶ್ವದ ಉತ್ತಮ ಮುನ್ನಡೆ ಆಟಗಾರರಲ್ಲಿ ಒಬ್ಬ ಎಂದೇ ಜನಜನಿತ ರಾಡಮಲ್ ಫಾಲ್ಕೋ ಅನುಪಸ್ಥಿತಿಯಲ್ಲಿ ಕೊಲಂಬಿಯಾ ಪ್ರಶಸ್ತಿಯ ಸನಿಹಕ್ಕೆ ಬರುವುದಿರಲಿ 16ರ ಹಂತಕ್ಕೆ ತಲುಪಿದರೆ ಅದೇ ಹೆಚ್ಚು ಎಂದು ಎಲ್ಲರೂ ಭಾವಿಸಿದ್ದರು. ಅಂಥದ್ದರಲ್ಲಿ ಕೊಲಂಬಿಯಾ ತಂಡವನ್ನು ಕ್ವಾರ್ಟರ್ಫೈನಲ್ಗೇರಿಸಿ ಜಗತ್ತೇ ಹುಬ್ಬೇರುವಂತೆ ಮಾಡಿದ ರೋಡ್ರಿಗಸ್ ಸಾಹಸ ಅಂತಿಂಥದ್ದಲ್ಲ. ಈ ಚತುರತೆಗೆ ಜಗತ್ತೇ ತಲೆದೂಗಿದೆ. ನೆನಪಿಡಿ ರೆಫ್ರಿಗಳ ಎಡವಟ್ಟುಗಳಿಲ್ಲದಿದ್ದರೆ ಕೊಲಂಬಿಯಾ ಸೆಮಿಫೈನಲ್ ಪ್ರೆವೇಶಿಸುವ ಸಾಧ್ಯತೆಗಳಿದ್ದವು. ಅವೇನೇ ಇದ್ದರೂ, ಸಾಕರ್ ದುನಿಯಾಕ್ಕೊಬ್ಬ ಡಾರ್ಲಿಂಗ್ ಸಿಕ್ಕಿದ್ದಾನೆ. ಈ ಯಶಸ್ಸು ಆರಂಭವಷ್ಟೇ. ಭವ್ಯ ಭವಿಷ್ಯವು ಈತನ ಮುಂದಿದೆ.
-ಗಣಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


