ಪ್ಲೇಯರ್ ಹಿಂದಿನ ಪವರ್ ಟ್ರೈನರ್!
ಇಡೀ ತಂಡ ಅಭ್ಯಾಸಕ್ಕೆ ಆಗಮಿಸುವ ಮುನ್ನವೇ ಅವರು ಹಾಜರಾಗಿರುತ್ತಿದ್ದರು. ಇಡೀ ತಂಡ ಅಭ್ಯಾಸ ಮುಗಿಸಿಕೊಂಡು ಹೋದ ...

ಇಡೀ ತಂಡ ಅಭ್ಯಾಸಕ್ಕೆ ಆಗಮಿಸುವ ಮುನ್ನವೇ ಅವರು ಹಾಜರಾಗಿರುತ್ತಿದ್ದರು. ಇಡೀ ತಂಡ ಅಭ್ಯಾಸ ಮುಗಿಸಿಕೊಂಡು ಹೋದ ನಂತರವೇ ಅವರು ಬ್ಯಾಗ್ ಹೆಗಲಿಗೇರಿಸಿಕೊಳ್ಳುತ್ತಿದ್ದರು. ಆದರೂ, ಅವರ ತಲೆಯಲ್ಲಿ ತಂಡ ಮತ್ತು ಆಟಗಾರರ ವಿಚಾರವೇ ಸದಾ ಕೊರೆಯುತ್ತಿತ್ತು. ಇಂದು ಎರಡು ರನ್ ಓಡಿದ ಆಟಗಾರ ನಾಳೆ 3 ರನ್ ಓಡಬೇಕು, ಇಂದು ಓಡಿದ್ದಕ್ಕಿಂತ ಕಡಿಮೆ ಸಮಯದಲ್ಲಿ ಓಡಬೇಕು. ಆತ ನಿನ್ನೆ ಬೌಲ್ ಮಾಡಿದ್ದಕ್ಕಿಂತ ನಾಳೆ ಇನ್ನಷ್ಟು ಮೊನಚಾಗಿ ಮತ್ತು ವೇಗವಾಗಿ ಚೆಂಡೆಸೆಯಬೇಕು. ಅವರ ಸಾಮರ್ಥ್ಯಗಳೇನು? ದೌರ್ಬಲ್ಯಗಳೇನು? ಅವರ ದೌರ್ಬಲ್ಯಗಳನ್ನು ಹೇಗೆ ತಿದ್ದಬೇಕು ಎನ್ನುವ ಬಗ್ಗೆಯೇ ಅವರ ಯೋಚನೆ. ಹೀಗಾಗಿಯೇ ಈ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗಳಿಸಿಕೊಂಡ ಕರ್ನಾಟಕ ತಂಡದ ಯಶಸ್ಸಿನ ಹಿಂದೆ, ಟ್ರೈನಿ ವಸಂತ್ ಬಂಡಿ ಪಾತ್ರವೂ ಮಹತ್ವದ್ದಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ.
ಆಟಗಾರರಿಗೆ ಯಾವ ರೀತಿಯ ಆಹಾರ ಸೇವನೆಗೆ ಸಲಹೆ ನೀಡಬೇಕು. ಎಷ್ಟು ಹೊತ್ತು ಮಾತ್ರ ಅಭ್ಯಾಸದಲ್ಲಿ ತೊಡಗಲು ಹೇಳಬೇಕು. ಆತನ ತೂಕ ಹೆಚ್ಚಾಗಿದೆ, ಅದನ್ನು ಹೇಗೆ ಕಡಿಮೆ ಮಾಡಬೇಕು. ಕಡಿಮೆ ಮಾಡಲು ಹೋಗಿ ಪಂದ್ಯದಲ್ಲಿನ ಪ್ರದರ್ಶನಕ್ಕೆ ಎಡವಟ್ಟಾಗಬಾರದು, ಅಷ್ಟೊಂದು ಸಮತೋಲನ ಕಾಪಾಡಿಕೊಳ್ಳಬೇಕು. ಇನ್ನೊಬ್ಬ ಹಳೇ ಪದ್ಧತಿಯಲ್ಲೇ ತರಬೇತಿ ಪಡೆಯುತ್ತಿದ್ದಾನೆ, ಆತನನ್ನು ಹೇಗೆ ಹೊಸ ಪದ್ಧತಿಗೆ ತೆರೆದುಕೊಳ್ಳಲು ಅಣಿಗೊಳಿಸಬೇಕು ಎಂಬೆಲ್ಲ ಸಮಸ್ಯೆಗಳ ಚಿಂತೆಯಲ್ಲೇ ಟ್ರೈನರ್ ಮುಳುಗಿರುತ್ತಾರೆ.
ತರಬೇತಿ ನೀಡುವ ಕೋಚ್ಗಳಿಗೆ ಆಟಗಾರರು ಸ್ಪಂದಿಸುವಂತೆ, ಆಟಗಾರನೊಬ್ಬ ಗಾಯಗೊಂಡು ತಂಡದಿಂದ ಹೊರಗುಳಿಯದಂತೆ, ಗಾಯಗೊಂಡು ಮರಳಿದ ನಂತರ ಆತ ಮತ್ತೆ ಗಾಯಗೊಳ್ಳದಂತೆ, ಆಟಗಾರರು ಸದಾ ತಮ್ಮ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಳ್ಳುವಂತೆ ನೋಡಿಕೊಳ್ಳುವಲ್ಲಿ ತಂಡವೊಂದರಲ್ಲಿ ಟ್ರೈನರ್ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಅಲ್ಲದೆ ಕ್ರೀಡಾಪಟುವೊಬ್ಬ ಯಾವ ರೀತಿಯ ಕ್ರೀಡಾ ಸಾಧನಗಳನ್ನು ಬಳಸಬೇಕು ಎಂಬ ಕುರಿತು ಸಹ ಟ್ರೈನರ್ಗಳು ಸಲಹೆ ನೀಡುತ್ತಾರೆ. ಹೀಗಾಗಿಯೇ ಕ್ರೀಡೆಯಲ್ಲಿ ಇತ್ತೀಚೆಗೆ ಟ್ರೈನರ್ಗಳಿಗೆ ಭಾರಿ ಬೇಡಿಕೆ ಇದೆ.
ಮಹತ್ವದ ಅಂಶ
'ಇತ್ತೀಚೆಗೆ ಕ್ರೀಡೆಯಲ್ಲಿ ಹೊಸ ಹೊಸ ತರಬೇತಿ ಪದ್ಧತಿಗಳು ಜಾರಿಗೆ ಬರುತ್ತಿವೆ. ಇಂಥ ಸಂದರ್ಭದಲ್ಲಿ ಹಳೇ ಪದ್ಧತಿಗಳನ್ನು ಅಳವಡಿಸಿಕೊಂಡ ಆಟಗಾರರನ್ನು ಹೊಸ ಪದ್ಧತಿಗೆ ತರುವುದೇ ದೊಡ್ಡ ಸವಾಲು' ಎನ್ನುತ್ತಾರೆ ಕರ್ನಾಟಕ ರಾಜ್ಯ ರಣಜಿ ತಂಡದ ಟ್ರೈನರ್ ವಸಂತ್ ಬಂಡಿ.
ಗಳಿಕೆ ಹೇಗೆ?
ರಾಜ್ಯಮಟ್ಟದಲ್ಲಿ ಎಲ್ಲ ವಯೋವಾನದ ತಂಡಗಳಿಂದ ಹಿಡಿದು, ರಣಜಿ ತಂಡದ ಟ್ರೈನರ್ವರೆಗೂ ಕೈತುಂಬ ಸಂಭಾವನೆ ದೊರೆಯುತ್ತಿದೆ. ಕೊಂಚ ದೊಡ್ಡಮಟ್ಟಕ್ಕೆ ಬಂದಾಗ ಭತ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುವ ಟ್ರೈನರ್ಗಳಿಗೆ ರು. 1 ಲಕ್ಷ ಮತ್ತು ಬಿಸಿಸಿಐನೊಂದಿಗೆ ಕಾರ್ಯನಿರ್ವಹಿಸುವ ಟ್ರೈನಿಗಳು ರು. 1.5 ಲಕ್ಷದಿಂದ ರು. 2 ಲಕ್ಷದವರೆಗೂ ಸಂಭಾವನೆ ಗಿಟ್ಟಿಸುತ್ತಿದ್ದಾರೆ.
-ಮಲ್ಲಿಕಾರ್ಜುನ ಕರಿಯಪ್ಪನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


