ಬಂಗಾಳ ಬಗ್ಗುಬಡಿದ ಕರ್ನಾಟಕ
ಇಂದೋರ್: ಕೆ.ಎಲ್ ರಾಹುಲ್ (51) ಅರ್ಧ ಶತಕ ಮತ್ತು ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ (41) ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಕರ್ನಾಟಕ ತಂಡ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ಹಂತದ 3ನೇ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡವನ್ನು 4 ವಿಕೆಟ್ ಅಂತರದಿಂದ ಪರಾಭವಗೊಳಿಸಿತು.
ಈ ಜಯದೊಂದಿಗೆ ಕರ್ನಾಟಕ ತಂಡ ಫೈನಲ್ ಪ್ರವೇಶಿಸುವ ತನ್ನ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಆದರೆ, ಶನಿವಾರ ಬರೋಡಾ ತಂಡದ ವಿರುದ್ಧ ಹೆಚ್ಚಿನ ಅಂತರದಿಂದ ಜಯ ಸಾಧಿಸಿದಲ್ಲಿ, ಕರ್ನಾಟಕಕ್ಕೆ ಫೈನಲ್ ಪ್ರವೇಶ ಸುಲಭವಾಗಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಂಗಾಳ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ನಂತರ ಈ ಸ್ಪರ್ಧಾತ್ಮಕ ರನ್ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ, ಇನ್ನು ನಾಲ್ಕು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 152 ರನ್ ಗಳಿಸುವ ಮೂಲಕ ಜಯದ ದಡ ಸೇರಿತು.
33 ಎಸೆತಗಳನ್ನು ಎದುರಿಸಿದ ಕೆ.ಎಲ್ ರಾಹುಲ್ ಮೊತ್ತದಲ್ಲಿ 2 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಇನ್ನು 26 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ ಮೊತ್ತದಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು.
ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ (20) ವಿಕೆಟ್ ಕಳೆದುಕೊಂಡ ನಂತರ ಕರ್ನಾಟಕ ತಂಡ ಕೊಂಚ ಆತಂಕದಲ್ಲಿ ಸಿಲುಕಿತ್ತು. ಆದರೆ, ಸ್ಟುವರ್ಟ್ ಬಿನ್ನಿ (ಅಜೇಯ 21) ಮತ್ತು ನಾಯಕ ವಿನಯ್ ಕುಮಾರ್ (ಅಜೇಯ 8) ತಂಡವನ್ನು ವಿಜಯದ ದಡಕ್ಕೆ ಸೇರಿಸಿದರು.
ಇತ್ತೀಚೆಗಷ್ಟೇ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದು ಮಿಂಚಿದ ಶಮಿ ಅಹ್ಮದ್ ಬೌಲಿಂಗ್ನಲ್ಲಿ ರಾಜ್ಯ ಬ್ಯಾಟ್ಸ್ಮನ್ಗಳು ಹೆಚ್ಚಿನ ರನ್ಗಳನ್ನು ಬಾರಿಸಿದ್ದು, ವಿಶೇಷವಾಗಿತ್ತು.
ಅಹ್ಮದ್ ಮೂರು ವಿಕೆಟ್ ಕಬಳಿಸಿದರಾದರೂ, ನಾಲ್ಕು ಓವರ್ಗಳಲ್ಲಿ 39 ರನ್ ನೀಡಿದರು. ಪಶ್ಚಿಮ ಬಂಗಾಳ ಪರ ಮತ್ತು ಪಂದ್ಯದಲ್ಲೇ ಅತಿ ಹೆಚ್ಚು ರನ್ ನೀಡಿದ ದುಬಾರಿ ಬೌಲರ್ ಎನಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಶ್ಚಿಮ ಬಂಗಾಳದ ಪರ ಎಸ್.ಜೆ ಮುಂದಾಲ್ (42), ಎ.ಎ ನಂದಿ (37) ಹಾಗೂ ಡಿ.ಬಿ ದಾಸ್ (31) ತಂಡ 150 ರನ್ಗಳ ಗಡಿ ದಾಟಲು ನೆರವಾದರು. 17 ಎಸೆತಗಳನ್ನು ಎದುರಿಸಿದ ನಂದಿ ಮೊತ್ತದಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿಗಳಿದ್ದವು. ಕರ್ನಾಟಕದ ಪರ ಉತ್ತಮ ಬೌಲಿಂಗ್ಪ್ರದರ್ಶಿಸಿದ ಆರ್. ವಿನಯ್ ಕುಮಾರ್, ಎಸ್. ಎಲ್ ಅಕ್ಷಯ್ ಹಾಗೂ ಕೆ. ಗೌತಮ್ ತಲಾ 2 ವಿಕೆಟ್ ಕಬಳಿಸಿದರು. ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು.
ಇದರೊಂದಿಗೆ ಎ ಗುಂಪಿನಲ್ಲಿ ಕರ್ನಾಟಕ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಆಡಿರುವ ಮೂರು ಪಂದ್ಯಗಳಲ್ಲಿ ತಲಾ ಎರಡರಲ್ಲಿ ಗೆದ್ದು ಫೈನಲ್ ಪ್ರವೇಶಿಸಲು ಪೈಪೋಟಿ ನಡೆಸಿವೆ.
ನಾಲ್ಕೂ ತಂಡಗಳು ಶನಿವಾರ ತಲಾ ಒಂದು ಪಂದ್ಯದಲ್ಲಿ ಭಾಗವಹಿಸಲಿದ್ದು, ಇಲ್ಲಿ ಹೊರಬೀಳುವ ಫಲಿತಾಂಶ ಮಹತ್ವದ್ದಾಗಿದೆ.
ಹೀಗಾಗಿ ಕರ್ನಾಟಕ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬರೋಡಾ ವಿರುದ್ಧ ಹೆಚ್ಚಿನ ಅಂತರದಿಂದ ಗೆಲ್ಲುವ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

