ಕ್ರೀಡೆ

ಮ್ಯಾಜಿಕ್ ಮಾಡುವರೇ ಅನನುಭವಿಗಳು?

Published On :

ಇಂದು ಭಾರತ- ಕೊರಿಯಾ ನಡುವೆ ದೆಹಲಿಯಲ್ಲಿ ಡೇವಿಸ್ ಕಪ್ ಪಂದ್ಯ
ನವದೆಹಲಿ:
ಭಾರತದ ಪ್ರಮುಖ ಟೆನಿಸ್ ಆಟಗಾರರು ಬಂಡಾಯದ ಕಹಳೆ ಊದಿರುವ ಹಿನ್ನೆಲೆಯಲ್ಲಿ ಅನನುಭವಿಗಳಿಂದ ಕೂಡಿರುವ ಭಾರತದ ಡೇವಿಸ್ ಕಪ್ ತಂಡ, ಶುಕ್ರವಾರ ದೆಹಯಲ್ಲಿ ನಡೆಯಲಿರುವ ಏಷ್ಯಾ ಓಸೆನಿಯಾ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.
ಭಾರತ ತಂಡದಲ್ಲಿ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮಾತ್ರ ಶ್ರೇಷ್ಠ ಆಟಗಾರರಾಗಿದ್ದಾರೆ. ವಿ.ಎಂ. ರಂಜಿತ್, ವಿಜಯಂತ್ ಮಲಿಕ್ ಮತ್ತು ಪುರವ ರಾಜಾ ಅವರು ಡೇವಿಸ್ ಕಪ್ ಪಂದ್ಯಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಪೇಸ್ ಹೊರತುಪಡಿಸಿ ಉಳಿದೆಲ್ಲ ಆಟಗಾರರು ಹೊಸಬರಾಗಿರುವುದರಿಂದ ಸಹಜವಾಗಿಯೇ ಭಾರತದ ಮೇಲೆ ಒತ್ತಡ ಹೆಚ್ಚಾಗಿದೆ.
ಡೇವಿಸ್ ಕಪ್ ಪಂದ್ಯಾವಳಿಗೆ ಭಾರತ ಅನನುಭವಿಗಳಿಂದ ಕೂಡಿದ ತಂಡವನ್ನು ಕಳುಹಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕಳೆದ ಸೆಪ್ಟಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯಕ್ಕೆ, ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಈಗ ಸೋಮ್‌ದೇವ್ ದೇವ್‌ವರ್ಮನ್ ಅವರ ನಾಯಕತ್ವದಲ್ಲಿ ಪ್ರಮುಖ 11 ಆಟಗಾರರು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ವಿರುದ್ಧ ಬಂಡಾಯವೆದ್ದಿದ್ದಾರೆ. ಬಂಡಾಯವೆದ್ದ ಆಟಗಾರರೊಂದಿಗೆ ಕೊರಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ವಿವಾದವನ್ನು ಬಗೆಹರಿಸಿಕೊಳ್ಳಲು ಎಐಟಿಎಯಿಂದ ಸಾಧ್ಯವಾಗಿಲ್ಲ.
ಹೀಗಾಗಿ ಈ ಪಂದ್ಯದಲ್ಲಿ ತಮ್ಮ 49ನೇ ಡೇವಿಸ್ ಕಪ್ ಪಂದ್ಯ ಆಡುತ್ತಿರುವ ಲಿಯಾಂಡರ್ ಪೇಸ್ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.  ಪೇಸ್ ಡಬಲ್ಸ್ ವಿಭಾಗದಲ್ಲಿ ಮಾತ್ರ ಭಾಗವಹಿಸಲಿದ್ದು, ಡಬಲ್ಸ್ ಪಂದ್ಯ ಶನಿವಾರ ಮಾತ್ರ ನಡೆಯಲಿದೆ.
ಭಾರತದ ಕೋಚ್ ಜೀಶಾನ್ ಅಲಿ ಅವರಿಗೆ ಇದು ಮೊದಲ ಜವಾಬ್ದಾರಿಯಾದರೆ, ತಂಡದ ಆಟವಾಡದ ನಾಯಕ ಎಸ್.ಪಿ ಮಿಶ್ರಾ ಅವರಿಗೆ ಕೊನೆಯ ಜವಾಬ್ದಾರಿಯಾಗಿದೆ. ಹೀಗಾಗಿ ಇಬ್ಬರೂ ಈ ಪಂದ್ಯದಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
517ನೇ ರ್ಯಾಂಕ್ ಹೊಂದಿರುವ ರಂಜೀತ್ ಮತ್ತು 541ನೇ ರ್ಯಾಂಕಿಂಗ್ ಹೊಂದಿರುವ ಮಲಿಕ್ ತಕ್ಕಮಟ್ಟಿಗಾದರೂ ಹೋರಾಟ ನಡೆಸಲಿದ್ದಾರೆ ಎಂಬ ನಿರೀಕ್ಷೆಗಳಿವೆ. ಈ ಇಬ್ಬರು ಆಟಗಾರರು ಸಹ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಆತುರದಲ್ಲಿದ್ದಾರೆ.
ಭಾರತದ ಈ ಆಟಗಾರರು ಪಂದ್ಯಾವಳಿಯಲ್ಲಿ ಕೊರಿಯಾದ 321ನೇ ರ್ಯಾಂಕಿಂಗ್ ಆಟಗಾರ ಸುಕ್- ಯಾಂಗ್ ಜೆಯೋಂಗ್ ಮತ್ತು ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ ಇಲ್ಲದಿದ್ದರೂ ಎರಡು ಬಾರಿ ಡೇವಿಸ್ ಕಪ್‌ನಲ್ಲಿ ಭಾಗವಹಿಸಿ ಅನುಭವವಿರುವ ಮಿನ್ ಹ್ಯಾಕ್ ಚೂ  ಅವರನ್ನು ಎದುರಿಸಲಿದ್ದಾರೆ.
ಜೆಯೋಂಗ್ ಇದುವರೆಗೂ ಡೇವಿಸ್ ಕಪ್‌ನಲ್ಲಿ ಆಡಿರುವ ಐದು ಸಿಂಗಲ್ಸ್ ಪಂದ್ಯಗಳ ಪೈಕಿ ಎರಡರಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಚೂ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ದಿನದ ಪಂದ್ಯದಲ್ಲಿ ರಂಜೀತ್ ಅವರು ಚೂ ವಿರುದ್ಧ ಜಯ ಸಾಧಿಸಿದರೆ, ಪಂದ್ಯಾವಳಿಯಲ್ಲಿ ಭಾರತ ಕ್ಕೆ ಗೆಲ್ಲುವ ಅವಕಾಶವಿದೆ.
ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ತಂಡದಲ್ಲಿರುವುದು ಭಾರತಕ್ಕೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಿಕೊಟ್ಟಿದೆ. ಶನಿವಾರ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ಪೇಸ್ ಮತ್ತು ಪುರವ ರಾಜಾ ಅಂಗಣಕ್ಕಿಳಿಯಲಿದ್ದಾರೆ. ಡೇವಿಸ್ ಕಪ್‌ನಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳುವಲ್ಲಿ ಪೇಸ್ ಹೆಸರಾಗಿದ್ದಾರೆ. ಇತ್ತೀಚಗಷ್ಟೇ ವಿಷ್ಣುವರ್ಧನ್ ಅವರೊಂದಿಗೆ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀಡಿದ ಗಟ್ಟಿ ಹೋರಾಟವೇ ಇದಕ್ಕೆ ಸಾಕ್ಷಿಯಾಗಿದೆ. ಈಗ 161ನೇ ರ್ಯಾಂಕಿಂಗ್ ಆಟಗಾರ ಪುರವ ರಾಜಾ ಅವರೊಂದಿಗೆ ಸೆಣಸಲಿದ್ದು, ಗೆಲ್ಲುವ ನಿರೀಕ್ಷೆ ಇದೆ.
ಈ ಪಂದ್ಯಾವಳಿಯಲ್ಲಿ ಗೆದ್ದವರು ಏಪ್ರಿಲ್ 5ರಿಂದ 7ರವರೆಗೆ ನಡೆಯಲಿರುವ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದ್ದಾರೆ.

ರಂಜೀತ್- ಹ್ಯಾಕ್ ಚೂ ನಡುವೆ  ಮೊದಲ ಕದನ
ನವದೆಹಲಿ:
ಕೊರಿಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿಯ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ವಿ.ಎಂ ರಂಜಿತ್ ಅವರು ಕೊರಿಯಾದ ಮಿನ್ ಹ್ಯಾಕ್ ಚೂ ಅವರನ್ನು ಎದುರಿಸಲಿದ್ದಾರೆ. ಇನ್ನು ಎರಡೇ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ವಿಜಯ್ ಮಲಿಕ್ ಅವರು ಸುಕ್- ಯಾಂಗ್ ಜೆಯೋಂಗ್ ಅವರನ್ನು ಎದುರಸಲಿದ್ದಾರೆ.
ಸಿಂಗಲ್ಸ್‌ನಲ್ಲಿ ಉತ್ತಮ ಹೋರಾಟ ನಡೆಸುವ ಯಾಂಗ್ ಕು ಲಿಮ್ ಅವರನ್ನು ಸಿಂಗಲ್ಸ್‌ನಲ್ಲಿ ಆಡಿಸದೇ, ಡಬಲ್ಸ್‌ನಲ್ಲಿ ಆಡಿಸಲು, ಕೊರಿಯಾ ತೀರ್ಮಾನ ಮಾಡಿರುವುದು ಅಚ್ಚರಿ ಮೂಡಿಸಿದೆ. ಎರಡನೇ ದಿನ ನಡೆಯಲಿರುವ ಡಬಲ್ಸ್ ಪಂದ್ಯದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಪುರವ ರಾಜಾ ಅವರು ಕೊರಿಯಾದ ಯಾಂಗ್ ಕು ಲಿಮ್ ಮತ್ತು ಜಿ ಸಂಗ್ ನಾಮ್ ಅವರನ್ನು ಎದುರಿಸಲಿದ್ದಾರೆ. ಅಂತಿಮ ಮತ್ತು ಮೂರನೇ ದಿನ ರಂಜಿತ್ ಅವರು ಜೆಯಾಂಗ್ ಅವರನ್ನು ಎದುರಿಸಿದರೆ, ಮಲಿಕ್ ಅವರು ಚೂ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.