ಕ್ರೀಡೆ

ಲಂಕೆಗೆ ಸರಣಿ ಜಯ

ಲಂಕೆಗೆ ಸರಣಿ ಜಯ
Published On :

ಮೆಲ್ಬರ್ನ್: ಮಳೆ ಅಡ್ಡಿಯಿಂದ ಡಕ್ವರ್ತ್ ಲೂಯಿಸ್ ನಿಯಮಕ್ಕೆ ಅಳವಡಿಸಲಾದ ಪಂದ್ಯದಲ್ಲಿ, ಸರಾ ಪೆರೆರಾ ಅವರ ಆಲ್ರೌಂಡ್ ಪ್ರದರ್ಶನದೊಂದಿಗೆ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಎರಡು ರನ್‌ಗಳ ಅಂತರದಿಂದ ಜಯ ಸಾಧಿಸಿತು.
ಈ ವಿಜಯದೊಂದಿಗೆ ಶ್ರೀಲಂಕಾ 2 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಸರಣಿ ಮುಡಿಗೇರಿಸಿಕೊಂಡಿತು. 15 ಎಸೆತಗಳನ್ನು ಎದುರಿಸಿದ ತಿಸರಾ ಪೆರೆರಾ (ಅಜೇಯ 35) ಸ್ಫೋಟಕ ಬ್ಯಾಟಿಂಗ್ ಮತ್ತು ಮಹೇಲ ಜಯವರ್ಧನೆ (ಅಜೇಯ 61) ರನ್ ಗಳಿಸಿದ್ದು, ಪ್ರವಾಸಿ ಶ್ರೀಲಂಕಾ ತಂಡ ನಿಗದಿತ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಲು ನೆರವಾಯಿತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ, ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಕ್ಕೆ 15 ಓವರ್‌ಗಳಲ್ಲಿ 122 ರನ್‌ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 15 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸುವ ಮೂಲಕ ಸೋಲನುಭವಿಸಿತು. ಪಂದ್ಯದ ಕೊನೆ ಓವರ್ ತೀವ್ರ ರೋಚಕವಾಗಿತ್ತು. ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಗೆಲ್ಲಲು 18 ರನ್‌ಗಳು ಬೇಕಾಗಿತ್ತು. ಆಗ ಬೌಲಿಂಗ್ ಮಾಡುತ್ತಿದ್ದ ತಿಸರಾ ಪೆರೆರಾ ಮೊದಲ ಎಸೆತದಲ್ಲಿ ಎರಡು ರನ್ ನೀಡಿದರು. ಆದರೆ, 2ನೇ ಎಸೆತದಲ್ಲಿ ಜಾರ್ಜ್ ಬೇಯ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮೂರನೇ ಎಸೆತ ನೋಬಾಲ್ ಆಗುವ ಮೂಲಕ ಆಸೀಸ್ ಮೂರು ರನ್ ಪಡೆಯಿತು. 4ನೇ ಎಸೆತದಲ್ಲಿ ಶಾನ್ ಮಾರ್ಷ್ ಒಂದು ರನ್ ಪಡೆದರು. ಬೇಯ್ಲಿ ನಿರ್ಗಮನದ ನಂತರ ಕ್ರೀಸ್‌ಗೆ ಬಂದಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ನಂತರ ಸತತ ಎರಡು ಬೌಂಡರಿ ಬಾರಿಸಿದರು. ಅಲ್ಲಿಗೆ ಆಸೀಸ್ 14 ರನ್ ಗಳಿಸಿತು. ಅಂತಿಮ ಎಸೆತದಲ್ಲಿ 4 ರನ್ ಬೇಕಾಗಿತ್ತು. ಆದರೆ, ಆಸೀಸ್ ಬೈ ಮೂಲಕ ಒಂದು ರನ್ ಪಡೆಯಿತಾದರೂ, ಜಯ ಸಾಧಿಸಲು ಇನ್ನೂ ಮೂರು ರನ್‌ಗಳ ಕೊರತೆ ಉಂಟಾಯಿತು. ಯಾವುದೇ ಪಂದ್ಯ ಮುಕ್ತಾಯವಾದಾಗ ಉಭಯ ತಂಡಗಳ ಆಟಗಾರರು ಅಭಿನಂದನೆ ಸಲ್ಲಿಸುವ ಮೂಲಕ ನಿರ್ಗಮಿಸುವುದು ಸಾಂಪ್ರದಾಯ. ಆದರೆ, ಪಂದ್ಯದ ಅಂತ್ಯದಲ್ಲಿ ಉಭಯ ತಂಡಗಳ ಆಟಗಾರರು ಪರಸ್ಪರ ಬೈದುಕೊಳ್ಳುವುದರೊಂದಿಗೆ ಕಂಡುಬಂದ ದೃಶ್ಯ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿತ್ತು. ಪಂದ್ಯದಲ್ಲಿ 90 ನಿಮಿಷಗಳ ಕಾಲ ಮಳೆ ಸುರಿದ ಕಾರಣ, ಸ್ಟೇಡಿಯಂ ಒದ್ದೆಯಾದ ನಂತರವೂ ಪಂದ್ಯವನ್ನು ಮುಂದುವರಿಸಬೇಕು ಎಂದ ಆಸ್ಟ್ರೇಲಿಯಾ ಅಂಪೈರ್‌ಗಳಾದ ಸೈಮನ್ ಫ್ರೆ ಮತ್ತು ಜಾನ್ ವಾರ್ಡ್ ಅವರಿಗೆ ಶ್ರೀಲಂಕಾ ಅಗೌರವ ಸೂಚಿಸಿತು.
ಉಭಯ ತಂಡಗಳ ನಡುವೆ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಇದೇ ರೀತಿ ಮಳೆ ಸುರಿದ ಸಂದರ್ಭ, ಶ್ರೀಲಂಕಾ ಗೆಲ್ಲುವ ಹಂತದಲ್ಲಿದ್ದ ಸಮಯದಲ್ಲೇ ಪಂದ್ಯವನ್ನು ರದ್ದುಗೊಳಿಸಲಾಗಿತ್ತು, ಇದು ಶ್ರೀಲಂಕಾ ಆಟಗಾರರಿಗೆ ಮುನಿಸು ಉಂಟಾಗಲು ಕಾರಣವಾಯಿತು. ಆ ಪಂದ್ಯ ರದ್ದುಪಡಿಸಿ ದ್ದರಿಂದ  ಶ್ರೀಲಂಕಾಕ್ಕೆ ಸರಣಿ ಕೈ ತಪ್ಪುವುದರೊಂದಿಗೆ ಉಭಯ ತಂಡಗಳು 5 ಪಂದ್ಯಗಳ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದ್ದವು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 161/4 (20 ಓವರ್)
ಜಯವರ್ಧನೆ ಅಜೇಯ 61, ತಿಸರಾ ಪೆರೆರಾ ಅಜೇಯ 35.
ಬೌಲಿಂಗ್: ಮ್ಯಾಕ್ಸ್‌ವೆಲ್ 23/1, ಪಾಲ್ಕನೇರ್ 24/1.
ಆಸ್ಟ್ರೇಲಿಯಾ 119/3 (15 ಓವರ್)
ಶಾನ್ ಮಾರ್ಷ್ ಅಜೇಯ 47, ಜಾರ್ಜ್ ಬೇಯ್ಲಿ 45.
ಬೌಲಿಂಗ್: ಕುಲಸೇಕರನ್ 18/1, ಪೆರೆರಾ 25/1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.