ಮುಂಬೈ ಮ್ಯಾಜಿಕ್
ರಣಜಿ ಫೈನಲ್: ಸೌರಾಷ್ಟ್ರ ವಿರುದ್ಧ ಮುಂಬೈಗೆ ಭರ್ಜರಿ ಗೆಲುವು

ಮುಂಬೈ: ಅಜಿತ್ ಅಗರ್ಕರ್ ಹಾಗೂ ಧವಳ್ ಕುಲಕರ್ಣಿ ಇಬ್ಬರ ಅಮೋಘ ಬೌಲಿಂಗ್ ನೆರವಿನಿಂದಾಗಿ ಮುಂಬೈ ತಂಡ ರಣಜಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಇನಿಂಗ್ಸ್ ಹಾಗೂ 125 ರನ್‌ಗಳ ಭರ್ಜರಿ ಗೆಲುವು ಪಡೆದು 40ನೇ ಬಾರಿಗೆ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಸೌರಾಷ್ಟ್ರ ತನ್ನ ಮೊದಲ ಇನಿಂಗ್ಸ್‌ನಲ್ಲಿ ಪೇರಿಸಿದ್ದ 148 ರನ್‌ಗಳಿಗೆ ಉತ್ತರ ನೀಡಲು ಶನಿವಾರವೇ ಬ್ಯಾಟಿಂಗ್‌ಗೆ ಇಳಿದಿದ್ದ ಮುಂಬೈ ಭಾನುವಾರ ತನ್ನ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಪೇರಿಸಿತ್ತು. ನಂತರ, ಸೋಮವಾರ ಬ್ಯಾಟಿಂಗ್ ಮುಂದುರೆಸಿದ ಅದು 355 ರನ್‌ಗಳಿಗೆ ಆಲೌಟ್ ಆಗಿ, ಒಟ್ಟು 207 ರನ್ ಮುನ್ನಡೆ ಪಡೆದುಕೊಂಡಿತ್ತು.
ಈ ಭಾರೀ ಅಂತರವನ್ನು ಬೆನ್ನಟ್ಟಲು ಅಳುಕಿನಿಂದಲೇ ಕ್ರೀಸ್‌ಗೆ ಇಳಿದ ಸೌರಾಷ್ಟ್ರ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 82 ರನ್‌ಗಳಿಗೆ ಆಲೌಟ್ ಆಯಿತು. ಸೌರಾಷ್ಟ್ರ ಅನುಭವಿಸಿದ ಈ ವೈಫಲ್ಯದಿಂದಾಗಿ ಮುಂಬೈ ತಂಡಕ್ಕೆ ಇನಿಂಗ್ಸ್ ಹಾಗೂ 125 ರನ್‌ಗಳ ಭರ್ಜರಿ ಜಯ ಲಭಿಸಿತಲ್ಲದೇ, ಅತಿ ಹೆಚ್ಚು ರಣಜಿ ಪ್ರಶಸ್ತಿಯನ್ನು ಗೆದ್ದ ಹಿರಿಮೆಗೆ ಭಾಜನವಾಯಿತು.
ಮುಂಬೈ ತಂಡದ ನಾಯಕ ಅಜಿತ್ ಅಗರ್ಕರ್ ಅವರು 15 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಮತ್ತೊಬ್ಬ ಬೌಲರ್ ಕುಲಕರ್ಣಿ 32 ರನ್ ನೀಡಿ 5 ವಿಕೆಟ್ ಕಬಳಿಸಿ, ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಇಬ್ಬರ ಬೌಲಿಂಗ್ ದಾಳಿಯಿಂದ ಸೌರಾಷ್ಟ್ರ ಕುಸಿದಿದ್ದರಿಂದಾಗಿ ಐದು ದಿನಗಳ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯವಾದಂತಾಯಿತು.
ರಣಜಿ ಫೈನಲ್‌ಗೆ ಇದುವರೆಗೂ ಒಟ್ಟು 44 ಬಾರಿ ಹೆಜ್ಜೆಯಿಟ್ಟಿರುವ ಮುಂಬೈ, ಇದೂ ಸೇರಿದಂತೆ 40 ಬಾರಿ ಕಪ್ ಗೆದ್ದುಕೊಂಡಿದೆ. ಕಳೆದ ಎರಡು ರಣಜಿ ಋತುಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿದ್ದ ತಂಡ, ಇದೀಗ ತಾನು ಕಳೆದುಕೊಂಡಿದ್ದ “ ರಣಜಿ ÈæçºÚÈÚ’ÈÚ«Úß ಮರಳಿ ಪಡೆದಿದೆ.
2 ಕೋಟಿ ಬಹುಮಾನ: ರಣಜಿ ಗೆದ್ದ ಮುಂಬೈ ತಂಡ ಬರೋಬ್ಬರಿ ರು. 2 ಕೋಟಿ ಬಹುಮಾನ ಮೊತ್ತವನ್ನು ತನ್ನದಾಗಿಸಿಕೊಂಡಿದೆ. ರನ್ನರ್ ಅಪ್ ಆದ ಸೌರಾಷ್ಟ್ರ ತಂಡ ರು. 1 ಕೋಟಿ ಮೊತ್ತವನ್ನು ಜೇಬಿಗಿಳಿಸಿದೆ.
ಶಾ ಶತಕಾರ್ಧ: ಪಂದ್ಯದ ಎರಡನೇ ದಿನವಾದ ಭಾನುವಾರ ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಹಿಕೇನ್ ಶಾ ಹಾಗೂ ಧವಳ್ ಕುಲಕರ್ಣಿ ಸೋಮವಾರ ಮುಂಬೈನ ಮೊದಲ ಇನಿಂಗ್ಸ್ ಮುಂದುವರೆಸಿದರು. ಆದರೆ, ಇನಿಂಗ್ಸ್ ಮೊತ್ತಕ್ಕೆ ಕೇವಲ 1 ರನ್ ಸೇರಿಸುವಷ್ಟರಲ್ಲಿ ಧವಳ್ ಅವರು ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಒಳಗಾಗಿ ಪೆವಿಲಿಯನ್‌ಗೆ ಸೇರಿದರು.
ಆಗ, ಅವರ ಜಾಗಕ್ಕೆ ಬಂದಿದ್ದು ಅಂಕಿತ್ ಚವಾಣ್. ಭಾನುವಾರ 41 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಶಾ ಅವರು, ಸೋಮವಾರ ತಮ್ಮ ಶತಕಾರ್ಧ ಪೂರೈಸಿದರು. ಒಟ್ಟು 141 ಎಸೆತಗಳಲ್ಲಿ ಏಳು ಬೌಂಡರಿ ಸೇರಿದಂತೆ ಅವರು ಗಳಿಸಿದ್ದು 55 ರನ್.
ಶಾ- ಅಂಕಿತ್ ಜೋಡಿ 8ನೇ ವಿಕೆಟ್‌ಗೆ 41 ರನ್ ಸೇರಿಸಿತು. ಇನಿಂಗ್ಸ್‌ನ 112ನೇ ಓವರ್‌ನಲ್ಲಿ ಶಾ ವಿಕೆಟ್ ಉರುಳಿದ ಮೇಲೆ ಬಂದ ಶಾರ್ದೂಲ್ ಠಾಕೂರ್ ಹೆಚ್ಚು ಆಡಲಿಲ್ಲ. ವೈಯಕ್ತಿಕವಾಗಿ ಕೇವಲ 10 ರನ್ ಗಳಿಸಿದ ಅವರು ಮಾಕ್ವಾನಾ ಬೌಲಿಂಗ್‌ನಲ್ಲಿ ಕಾಟ್ ಅಂಡ್ ಬೌಲ್ಡ್ ಆಗಿ ಹೊರನಡೆದರು. ಅವರ ಜಾಗಕ್ಕೆ ಬಂದದ್ದು ಕೊನೆಯ ಬ್ಯಾಟ್ಸ್‌ಮನ್ ವಿಶಾಲ್ ದಾಬೋಳ್ಕರ್. 117ನೇ ಓವರ್‌ನಲ್ಲಿ ಮಾಕ್ವಾನಾ ಅವರ ವಿಕೆಟ್ ಕಬಳಿಸಿದ್ದ ಮಾಕ್ವಾನಾ, 119ನೇ ಓವರ್‌ನಲ್ಲಿ ಧಾಬೋಳ್ಕರ್ ಅವರ ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡದ ಮೊದಲ ಇನಿಂಗ್ಸ್‌ಗೆ ಇತಿಶ್ರೀ ಹಾಡಿದರು.
ಒಟ್ಟು 355 ರನ್‌ಗಳಿಗೆ ಆಲೌಟ್ ಆದ ಮುಂಬೈ, ಸೌರಾಷ್ಟ್ರಕ್ಕಿಂತ 207 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು.
ಕುಲಕರ್ಣಿ, ಅಗರ್ಕರ್ ಮ್ಯಾಜಿಕ್: ದೊಡ್ಡ ಸವಾಲನ್ನು ಪಡೆದ ಸೌರಾಷ್ಟ್ರ ತನ್ನ ಎರಡನೇ ಇನಿಂಗ್ಸ್ ಆರಂಭಿಸಿತಾದರೂ, ದಿಟ್ಟತನದ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 148 ರನ್‌ಗಳಿಗೆ ಆಲೌಟ್ ಆಗಿದ್ದ ಸೌರಾಷ್ಟ್ರ, ದ್ವಿತೀಯ ಇನಿಂಗ್ಸ್‌ನಲ್ಲಿ ಅದಕ್ಕೂ ಕಳಪೆ ಮೊತ್ತಕ್ಕೆ (82 ರನ್) ಆಲೌಟ್ ಆಯಿತು. ಹೀಗೆ, ಬ್ಯಾಟಿಂಗ್‌ನಲ್ಲಿ ತೀವ್ರ ಕುಸಿತ ಕಂಡ ಸೌರಾಷ್ಟ್ರದ ಪರವಾಗಿ 22 ರನ್ (35 ಎಸೆತ) ಗಳಿಸಿದ ಧರ್ಮೇಂದ್ರ ಜಡೇಜಾ, ಆ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್! ಅವರನ್ನು ಬಿಟ್ಟರೆ, ಸೂರ್ಯ ಸನಂದಿಯಾ ಅವರು ಎರಡಂಕಿ ರನ್ ಗಳಿಸಿದ ಮತ್ತೊಬ್ಬ ಬ್ಯಾಟ್ಸ್‌ಮನ್. ಇನ್ನು, ಆ ತಂಡದಲ್ಲಿ ವೈಯಕ್ತಿಕವಾಗಿ ಮೂರನೇ ಗರಿಷ್ಠ ಮೊತ್ತ ದಾಖಲಿಸಿದ್ದು ಜಯದೇವ್ ಉನಾದ್ಕತ್ (9 ರನ್).
ಸೌರಾಷ್ಟ್ರ ತಂಡದ ಟಾಪ್ ಏಳು ಮಂದಿ ಬ್ಯಾಟ್ಸ್‌ಮನ್‌ಗಳಲ್ಲಿ ಯಾರೊಬ್ಬರೂ ಎರಡಂಕಿ ರನ್ ಗಳಿಸಲೇ ಇಲ್ಲ. ಅದರಲ್ಲೂ ಆ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಸಿಂತಾಂಶು ಕೋಟಕ್, ಸಾಗರ್ ಜೋಗಿಯಾನಿ ಹಾಗೂ ಇದೇ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಅರ್ಪಿತ್ ವಾಸವದಾ ಡಕ್ ಔಟ್ ಆಗಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು.
ಇನ್ನು, ರಾಹುಲ್ ದೇವ್ (5), ನಾಯಕ ಜಯದೇವ್ ಶಾ (6), ಶೆಲ್ಡನ್ ಜ್ಯಾಕ್ಸನ್ (9) ಹಾಗೂ ಕಮಲೇಶ್ ಮಾಕ್ವಾನಾ (7) ವೈಫಲ್ಯಕ್ಕೊಳಗಾದ ಮತ್ತಿತರ ಟಾಪ್ ಬ್ಯಾಟ್ಸ್‌ಮನ್‌ಗಳು.
ಮಿಂಚಿದ ಬೌಲರ್‌ಗಳು: ಸೌರಾಷ್ಟ್ರದ ಮೊದಲ ಇನಿಂಗ್ಸ್ 148 ರನ್‌ಗಳಿಗೆ ಮೊಟಕುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕುಲಕರ್ಣಿ, ಮತ್ತೊಮ್ಮೆ ಮಿಂಚಿದರು. ಅವರೊಂದಿಗೆ ಅಗರ್ಕರ್ ಅವರೂ ತಮ್ಮ ಆಕ್ರಮಣಕಾರಿ ಬೌಲಿಂಗ್ ಮೂಲಕ, ಸೌರಾಷ್ಟ್ರದ ಕುಸಿತಕ್ಕೆ ಕಾರಣವಾದರು. ಆರಂಭಿಕರಾದ ಕೋಟಕ್ ಮತ್ತು ಜೋಗಿಯಾನಿ, ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ವಾಸವದಾ ಹಾಗೂ ಅಂತಿಮ ಕ್ರಮಾಂಕದ ಉನಾದ್ಕತ್ ಅವರ ವಿಕೆಟ್‌ಗಳನ್ನು ಅಗರ್ಕರ್ ಕಬಳಿಸಿದರೆ, ಕುಲಕರ್ಣಿ ಅವರು, ರಾಹುಲ್ ಡೇವ್, ಜಯದೇವ್ ಶಾ, ಶೆಲ್ಡನ್ ಜಾನ್ಸನ್, ಸನಂದಿಯಾ ಹಾಗೂ ಧರ್ಮೇಂದ್ರ ಸಿನ್ಹಾ ಜಡೇಜಾ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಅಗರ್ಕರ್, ಕುಲಕರ್ಣಿ ಇಬ್ಬರೂ ಸೇರಿ ಒಂಭತ್ತು ವಿಕೆಟ್ ಉರುಳಿಸಿದರೆ, ಇನ್ನುಳಿದ ಒಂದು ವಿಕೆಟ್ (ಮಧ್ಯಮ ಕ್ರಮಾಂಕದ ಮಾಕ್ವಾನಾ) ಅಭಿಷೇಕ್ ನಾಯರ್ ಅವರ ಪಾಲಾಯಿತು. ಅಂತಿಮವಾಗಿ, ಸೌರಾಷ್ಟ್ರ 82 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡು ಇನಿಂಗ್ಸ್ ಹಾಗೂ 125 ರನ್‌ಗಳ ಸೋಲನ್ನು ಅನುಭವಿಸಿತು.
ಸಂಕ್ಷಿಪ್ತ ಸ್ಕೋರ್
ಸೌರಾಷ್ಟ್ರ ಪ್ರಥಮ ಇನಿಂಗ್ಸ್ 148/10
ಮುಂಬೈ ಪ್ರಥಮ ಇನಿಂಗ್ಸ್ 355/10 (119 ಓ.)
(ಭಾನುವಾರ ದಿನಾಂತ್ಯಕ್ಕೆ 287/6)
ಹಿಕೇನ್ ಶಾ 55, ಚವಾಣ್ 44
ಬೌಲಿಂಗ್: ಮಾಕ್ವಾನಾ 49/3, ತ್ರಿವೇದಿ 54/2
ಸೌರಾಷ್ಟ್ರ ದ್ವಿತೀಯ ಇನಿಂಗ್ಸ್ 82/10 (36.3 ಓವರ್)
ಜಡೇಜಾ 22, ಸನಂದಿಯಾ 16
ಬೌಲಿಂಗ್: ಕುಲಕರ್ಣಿ 32/5, ಅಗರ್ಕರ್ 15/4
ಪಂದ್ಯ ಶ್ರೇಷ್ಠ: ವಾಸೀಂ ಜಾಫರ್ (ಮುಂಬೈ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


