ಕ್ರೀಡೆ

ಫೈನಲ್‌ಗೆ ಲೀ ನಾ

Published On :

ಮೆಲ್ಬರ್ನ್: ಗ್ರಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಏಷ್ಯಾದ ಮೊದಲ ಮಹಿಳಾ ಟೆನಿಸ್ ತಾರೆ, ಚೀನಾದ ಲೀ ನಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಮಾರಿಯಾ ಶರಪೋವಾ ಅವರನ್ನು ಮಣಿಸಿದ ಲೀ ನಾ, ಫೈನಲ್ ಹಣಾಹಣಿಯಲ್ಲಿ 2012ರ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರನ್ನು ಎದುರಿಸಲಿದ್ದಾರೆ. ಸೆಮೀಸ್‌ನಲ್ಲಿ ಕಣ್ಮನ ಸೆಳೆಯುವ ಪ್ರದರ್ಶನ ನೀಡಿದ ಲೀ ನಾ, ನಾಲ್ಕು ಬಾರಿ ಚಾಂಪಿಯನ್ ಶರಪೋವಾ ಅವರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಫೈನಲ್‌ಗೆ ಹೆಜ್ಜೆ ಹಾಕಿದರು. 2011ರಲ್ಲಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿರುವ ಲೀ ನಾ ಅವರು, ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಹೊಂದಿದ್ದಾರೆ. 'ನನ್ನ 20 ವರ್ಷದ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ಕರಾರುವಕ್ಕಾದ ಪ್ರದರ್ಶನ ನೀಡಿದ್ದೇನೆ. ಪಂದ್ಯದ ಆರಂಭದಲ್ಲಿ ನಾನು ಬಲಿಷ್ಠ ಹೋರಾಟ ನಡೆಸಲಿಲ್ಲ. ಆದರೆ, ಸೆಮಿಫೈನಲ್ ಪ್ರವೇಶಿಸಿರುವುದು ನನಗೆ ಸಂತಸ ಉಂಟುಮಾಡಿತ್ತು. ಕೆಲವು ಕಾರಣಗಳಿಗಾಗಿ ನಾನು ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿತ್ತು. ಈ ಪಂದ್ಯದಲ್ಲಿ ಗೆಲ್ಲಲೇಬೇಕು ಎಂದು ತೀರ್ಮಾನಿಸಿಕೊಂಡೇ ನಾನು ಅಂಗಣಕ್ಕೆ ಬಂದಿದ್ದೆ' ಎಂದು ಪಂದ್ಯದ ನಂತರ ಲೀ ನಾ ಹೇಳಿದರು.
ಮೊದಲ ಸೆಟ್‌ನಲ್ಲಿ ಶರಪೋವಾ ಸತತವಾಗಿ ಎರಡು ತಪ್ಪುಗಳನ್ನು ಮಾಡಿದ್ದು ಆಕೆಯ ಸೋಲಿಗೆ ಕಾರಣವಾಯಿತು. ನಾಲ್ಕು ಬಾರಿ ಗ್ರಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿರುವ ಶರಪೋವಾ ಈ ಪಂದ್ಯದಲ್ಲಿ ಗೆಲವು ಸಾಧಿಸಿದ್ದರೆ, ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರುವ ಅವಕಾಶವಿತ್ತು. ಅಲ್ಲದೆ, ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಗೆಲ್ಲುವ ಅವಕಾಶವಿತ್ತು. ಆದರೆ, ಅದನ್ನು ಚೀನಾದ ಲೀ ನಾ ಅಡ್ಡಿಯಾದರು.
ನೂತನ ತರಬೇತುದಾರ ಕಾರ್ಲೋಸ್ ರೋಡ್ರಿಗೇಸ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಲೀ ನಾ ಪಂದ್ಯದಲ್ಲಿ ಶರಪೋವಾ ವಿರುದ್ಧ ತಮ್ಮ ಸಂಪೂರ್ಣ ಅನುಭವವನ್ನು ಪ್ರಯೋಗಿಸಿದರು. 'ಲೀ ನಾ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ಆಕೆ ನನಗಿಂತ ಹೆಚ್ಚಿನ ರೀತಿಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು' ಎಂದು ಶರಪೋವಾ ಪಂದ್ಯದ ನಂತರ ಹೇಳಿದರು.
ವಿವಾದ ಸೃಷ್ಟಿಸಿದ ಅಜರೆಂಕಾ: ಮಹಿಳೆಯರ ವಿಭಾಗದ ಸಿಂಗಲ್ಸ್‌ನ ಇನ್ನೊಂದು ಸೆಮಿಫೈಲ್ ಪಂದ್ಯದಲ್ಲಿ ವಿಕ್ಟೋರಿಯಾ ಅಜರೆಂಕಾ, ಯುವ ಆಟಗಾರ್ತಿ ಸ್ಲೋಯೆನ್ ಸ್ಟಿಫೆನ್ಸ್ ಅವರನ್ನು 6-1, 6-4 ನೇರ ಸೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದರು. ಆದರೆ, ಪಂದ್ಯದ ಎರಡನೇ ಸೆಟ್‌ನ ಮಹತ್ವದ ಸಮಯದಲ್ಲಿ ವೈದ್ಯಕೀಯ ಸೇವೆ ಪಡೆದ ಅಜರೆಂಕಾ ಟೀಕೆಗೆ ಗುರಿಯಾದರು.  ಅಜರೆಂಕಾ ವೈದ್ಯಕೀಯ ಸೇವೆ ಪಡೆದಿದ್ದು, ಅನಗತ್ಯವಾಗಿತ್ತು ಎಂಬುದು ಟೀಕಾಕಾರರ ಅಂಬೋಣವಾಗಿದೆ. ಆದರೆ, ತಮ್ಮ ತೀರ್ಮಾನವನ್ನು ಅಜರೆಂಕಾ ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.