ಕ್ರೀಡೆ

ಸೆರೆನಾಗೆ ಸೋಲಿನ ಶಾಕ್

Published On :

ಮೆಲ್ಬರ್ನ್: ಅಮೆರಿಕದ ಹದಿಹರೆಯದ ಆಟಗಾರ್ತಿ ಸ್ಲೊವಾನ್ ಸ್ಟೀಫನ್ಸ್ ಅವರು ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ವಿರುದ್ಧ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ನಿರ್ಣಾಯಕ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಸೆರೆನಾ ವಿಲಿಯಮ್ಸ್ ಅವರ ವಿರುದ್ಧ 3-6, 7-5, 6-4 ಅಂತರದಲ್ಲಿ ಜಯ ದಾಖಲಿಸಿ, ಸೆಮಿಫೈನಲ್ಗೆ ಕಾಲಿಟ್ಟರು.
ಅತ್ತ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೆರೆನಾ ಅವರ ಈ ಬಾರಿಯ ತಮ್ಮ ಆಸ್ಟ್ರೇಲಿಯನ್ ಓಪನ್ ಅಭಿಯಾನವನ್ನು ಕ್ವಾರ್ಟರ್ ಫೈನಲ್ವರೆಗೇ ಅಂತ್ಯಗೊಳಿಸಿದರು. ಸೆರೆನಾ ವಿಲಿಯಮ್ಸ್ನ ಉತ್ತರಾಧಿಕಾರಿಯೆಂದೇ ಅಮೆರಿಕಾದಲ್ಲಿ ಜನಮನ್ನಣೆ ಗಳಿಸಿರುವ 19ರ ಪ್ರಾಯದ ಸ್ಟೀಫನ್ಸ್, ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರನ್ನು ಎದುರಿಸಲಿದ್ದಾರೆ.  31ರ ಪ್ರಾಯದ ಸೆರೆನಾ ವಿಲಿಯಮ್ಸ್ ಅವರು, ಕಳೆದ ವರ್ಷದ ಆಗಸ್ಟ್ನಿಂದ ತಾವು ಆಡಿದ್ದ ಯಾವ ಪಂದ್ಯದಲ್ಲೂ ಸೋಲು ಕಂಡಿರಲಿಲ್ಲ. ವಿಂಬಲ್ಡನ್, ಒಲಿಂಪಿಕ್ಸ್ ಹಾಗೂ ಯುಎಸ್ ಓಪನ್ ಪಂದ್ಯಾವಳಿ... ಹೀಗೆ ಎಲ್ಲೆಡೆ ಅವರ ಗೆಲುವಿನ ಓಟ ಮುಂದುವರೆದಿತ್ತು. ಆದರೆ, ಈ ಬಾರಿ ಅವರು ಕ್ವಾರ್ಟರ್ ಫೈನಲ್ನಲ್ಲಿ ಸೋಲುವ ಮೂಲಕ ಅವರ ಗೆಲುವಿನ ನಾಗಾಲೋಟಕ್ಕೆ ತೆರೆಬಿದ್ದಿದೆ.
ಕೈತಪ್ಪಿದ ಎರಡು ದಾಖಲೆಗಳು: ತಮ್ಮ ವೃತ್ತಿಜೀವನದಲ್ಲಿ ಒಂದೊಮ್ಮೆ 21 ಪಂದ್ಯಗಳನ್ನು ಸತತವಾಗಿ ಗೆದ್ದು ದಾಖಲೆ ಬರೆದಿದ್ದ ಸೆರೆನಾಗೆ ಆ ದಾಖಲೆಯನ್ನು ಮುರಿಯಲು ಸಾಧ್ಯವಾಗಲೇ ಇಲ್ಲ. ಕೇವಲ ಒಂದು ಪಂದ್ಯವನ್ನು ಗೆದ್ದಿದ್ದರೆ, ಆ ಹಿಂದಿನ ದಾಖಲೆಯನ್ನು ಸರಿಗಟ್ಟಬಹುದಾಗಿತ್ತು.  ಮೊದಲ ಸೆಟ್ನಲ್ಲಿ 3-4ರ ಅನಾಯಾಸವಾಗಿ ಗೆಲುವು ದಾಖಲಿಸಿದ್ದ ಸೆರೆನಾ ವಿಲಿಯಮ್ಸ್ ನಂತರದ ಎರಡೂ ಸೆಟ್ಗಳಲ್ಲಿ ಸೋಲು ಅನುಭವಿಸಿದರು. ಮೊದಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರಲ್ಲಿ ಎಂದಿನಂತೆ ಕಾಣುತ್ತಿದ್ದ ನೈಪುಣ್ಯದ ಆಟ ಮರೆಯಾಗಿತ್ತು.
ಅತ್ತ, ಸ್ಟೀಫನ್ ಮಾತ್ರ ಉತ್ತಮವಾದ ಸರ್ವ್ ಹಾಗೂ ಬಿರುಸಿನ ಹೊಡೆತಗಳಿಂದ ಸೆರೆನಾ ಮೇಲೆ ಹಿಡಿತ ಸಾಧಿಸಿದರು. ಆದರೂ, ಸೆರೆನಾ ಹಠದ ಆಟವಾಡಿ ಅಲ್ಲಲ್ಲಿ ಸಮಬಲ ಸಾಧಿಸಿದರಾದರೂ ದ್ವಿತೀಯ ಹಾಗೂ ತೃತೀಯ ಸೆಟ್ಗಳಲ್ಲಿ ಗೆಲುವು ಸಾಧಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಸ್ಟೀಫನ್ಸ್ ಅವರು ಸೆರೆನಾ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಪ್ರತಿಷ್ಠಿತ ಪಂದ್ಯಾವಳಿಯ ನಿರ್ಣಾಯಕ ಘಟ್ಟದಲ್ಲಿ ಸೆರೆನಾ ವಿಲಿಯಮ್ಸ್ ಅವರಂಥ ಪ್ರತಿಭಾನ್ವಿತೆಯನ್ನು ಮಣಿಸುವುದೆಂದರೆ ಅದು ಸುಲಭದ ಮಾತಲ್ಲ. ಕ್ವಾರ್ಟರ್ ಫೈನಲ್ನಲ್ಲಿ ಅವರ ವಿರುದ್ಧ ಜಯ ಗಳಿಸಲು ನಾನು ಸಾಕಷ್ಟು ತಯಾರಿ ನಡೆಸಿದ್ದೆ. ಈ ಜಯ ಖುಷಿ ತಂದಿದೆ. ವರ್ಷಗಳಿಂದ ಆರಾಧಿಸಿದ್ದ ಸೆರೆನಾ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ರೋಮಾಂಚನವಾಗಿದೆ.
-ಸ್ಲೊವಾನ್ ಸ್ಟೀಫನ್, ಉದಯೋನ್ಮುಖ ಟೆನಿಸ್ ಆಟಗಾರ್ತಿ

ನನ್ನ ಕಾಲಿನ ಗಾಯದಿಂದಾಗಿ ಕಳೆದೆರಡು ವಾರಗಳಿಂದ ನೋವು ಅನುಭವಿಸಿದ್ದೇನೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಅದೇ ಸಮಸ್ಯೆಯಿಂದಲೇ ಆಡಿದ್ದೆ. ಪಂದ್ಯ ಆಡುತ್ತಾ ಕಾಲು ನೋವಿನೊಂದಿಗೆ ಬೆನ್ನು ನೋವೂ ಕಾಣಿಸಿಕೊಂಡಿತು. ಆದರೂ, ಜಯ ಗಳಿಸಲು ಪ್ರಯತ್ನಪಟ್ಟೆ. ಆದರೆ, ಸಫಲತೆ ಕಾಣಲಿಲ್ಲ. ಈ ಗ್ರಾಂಡ್ ಸ್ಲಾಂ ನನ್ನ ಕೈ ತಪ್ಪಿತು.
-ಸೆರೇನಾ ವಿಲಿಯಮ್ಸ್,  ಹಿರಿಯ ಟೆನಿಸ್ ಆಟಗಾರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.