ಕ್ರೀಡೆ

ಗುರುವಿನ ಗುಂಗಲ್ಲಿ ಭಾರತ ಕ್ರಿಕೆಟ್

Published On :

ಭಾರತ ತಂಡವು ಇತ್ತೀಚಿನ ದಿನಗಳಲ್ಲಿ ಕಂಡ ವೈಫಲ್ಯಗಳು ಹಲವು ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್, ಬೌಲಿಂಗ್, ನಾಯಕತ್ವ, ಕೋಚ್ ವಿಷಯಗಳ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.
ಈ ಎಲ್ಲಾ ಚರ್ಚೆಗಳ ನಡುವೆ ಕೋಚ್ ಬಗೆಗಿನ ಚರ್ಚೆಗಳು ವಿಭಿನ್ನ ಸ್ವರೂಪ ಪಡೆಯುತ್ತಿದೆ. ಏಕೆಂದರೆ ತಂಡದ ಸದ್ಯದ ಕೋಚ್ ಆಗಿರುವ ಡಂಕನ್ ಫ್ಲೆಚರ್ ಅವರ ಅವಧಿ ಕೆಲ ದಿನಗಳಲ್ಲಿ ಮುಕ್ತಾಯವಾಗಲಿದ್ದು, ಮುಂದಿನ ಕೋಚ್ ಯಾರಾಗಲಿದ್ದಾರೆ ಎಂಬುದು ಚರ್ಚೆಯ ಪ್ರಮುಖ ಕೇಂದ್ರ ಬಿಂದುವಾಗಿದೆ.
ಭಾರತ ತಂಡಕ್ಕೆ ಮುಂದೆ ಕೋಚ್ ಆಗುವವರು ಭಾರತೀಯರಾಗಿರಬೇಕು ಎಂಬುದು ಕೆಲವರ ವಾದವಾದರೆ, ವಿದೇಶಿ ಕೋಚ್ ತಂಡಕ್ಕೆ ಹೆಚ್ಚಿನ ಬಲ ತರಲಿದ್ದಾರೆ ಎಂಬುದು ಮತ್ತೆ ಕೆಲವರ ವಾದವಾಗಿದೆ. ಹೀಗಾಗಿ ಸದ್ಯ ಕೋಚ್ ವಿಷಯದಲ್ಲಿ ಸ್ವದೇಶಿ ಹಾಗೂ ವಿದೇಶಿ ಎಂಬ ವಾದಗಳು ಕೇಳಿ ಬರುತ್ತಿವೆ. 2000ರಲ್ಲಿ ಭಾರತಕ್ಕೆ ಜಾನ್‌ರೈಟ್ ಅವರು ಕೋಚ್ ಆಗಿ ಬಂದ ನಂತರ ವಿದೇಶಿ ಕೋಚ್‌ಗಳು ಭಾರತೀಯ ಕ್ರಿಕೆಟ್‌ಗೆ ಉತ್ತಮ ಕೊಡುಗೆ ನೀಡಿದ್ದಾರೆ. ಕಳೆದ ದಶಕದಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ಬಂದವರೆಲ್ಲರೂ ತಮ್ಮ ಕಾಲಾವಧಿಯಲ್ಲಿ ಧನಾತ್ಮಕ ಫಲಿತಾಂಶಗಳನ್ನು ಹೊಂದಿದ್ದಾರೆ ಎಂದು ಭಾರತದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಸೇರಿದಂತೆ ವಿದೇಶಿ ಕೋಚ್ ಬೇಕು ಎನ್ನುವ ಹಲವಾರು ಮಂದಿಯ ವಾದವಾಗಿದೆ. ಭಾರತದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂಬುದು ಭಾರತದ ಕೋಚ್ ಬೇಕು ಎಂಬುವರ ವಾದವಾಗಿದೆ.
ಭಾರತೀಯ ಕೋಚ್ ಬಗ್ಗೆ ಹೆಚ್ಚುತ್ತಿರುವ ಒಲವು
ಈ ಹಿಂದೆ ಸಂದೀಪ್ ಪಾಟೀಲ್ ಅವರು ಭಾರತ ಎ ತಂಡಕ್ಕೆ ಕೋಚ್ ಆಗಿದ್ದು, 2003ರ ವೇಳೆಯಲ್ಲಿ ದುರ್ಬಲ ಕೀನ್ಯಾ ತಂಡದ ಕೋಚ್ ಆಗಿದ್ದರು. 2003ರ ವಿಶ್ವಕಪ್‌ನಲ್ಲಿ ಕೀನ್ಯಾ ತಂಡ ಅಚ್ಚರಿಯ ಫಲಿತಾಂಶ ನೀಡಿ ಸೆಮಿಫೈನಲ್ ಹಂತ ಪ್ರವೇಶಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಹಾಗೆಯೇ 2007ರಲ್ಲಿ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಹಾಗೂ ರಾಬಿನ್ ಸಿಂಗ್ ಅವರು ತಂಡದ ಕೋಚ್ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಲ್ಲದೇ ಪ್ರಸಕ್ತ ರಣಜಿ ಋುತುವಿನಲ್ಲಿ ಹಲವು ತಂಡಗಳಲ್ಲಿ ಕೋಚ್ ಸ್ಥಾನವನ್ನು ಅಲಂಕರಿಸಿರುವ ಮಾಜಿ ಆಟಗಾರರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಆಟಗಾರರೊಂದಿಗೆ ಬೆರೆಯುವರೇ ವಿದೇಶಿ ಕೋಚ್
ಕಳೆದ ದಶಕಗಳಿಂದ ವಿದೇಶಿ ಕೋಚ್‌ಗಳನ್ನೇ ಕಾಣುತ್ತಿರುವ ಭಾರತ ತಂಡದ ಆಟಗಾರರು, ಕೆಲ ವಿದೇಶಿ ಕೋಚ್‌ಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದು, ಮತ್ತೇ ಕೆಲವರ ಜತೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಒಂದು ತಂಡ ಯಶಸ್ಸಿನ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯಬೇಕಾದರೆ, ತಂಡದಲ್ಲಿ ಆಟಗಾರರು ಹಾಗೂ ನಾಯಕ, ಆಟಗಾರರು ಹಾಗೂ ಕೋಚ್, ನಾಯಕ ಹಾಗೂ ಕೋಚ್ ನಡುವೆ ಉತ್ತಮ ವಿಶ್ವಾಸ ಹಾಗೂ ಪರಸ್ಪರ ಹೊಂದಾಣಿಕೆ ಅತಿ ಮುಖ್ಯ. ಜಾನ್ ರೈಟ್ ಹಾಗೂ ಗ್ಯಾರಿ ಕ್ರಸ್ಟನ್ ಆಟಗಾರರೊಂದಿಗೆ ಉತ್ತಮ ಹೊಂದಾಣಿಕೆ ಹೊಂದಿದ್ದು, ಗ್ರೇಗ್ ಚಾಪೆಲ್ ಅವರ ಬಗ್ಗೆ ತಂಡದ ಎಲ್ಲಾ ಆಟಗಾರರು ಅತೃಪ್ತಿ ವ್ಯಕ್ತ ಪಡಿಸಿದ್ದರು. ಈಗಿರುವ ಡಂಕನ್ ಫ್ಲೆಚರ್ ಅವರು ಮುಂದೆ ಕೋಚ್ ಸ್ಥಾನದಲ್ಲಿ ಮುಂದುವರೆಯ ಬಾರದು ಎಂದು ತಂಡದ ಕೆಲ ಆಟಗಾರರು ಬಿಸಿಸಿಐಗೆ ಪತ್ರ ಬರೆದಿರುವುದು ಆಟಗಾರರಲ್ಲಿನ ಅಸಮಾದಾನವನ್ನು ತೋರಿಸುತ್ತದೆ. ಈ ಎಲ್ಲಾ ವಿಚಾರದ ಹಿನ್ನಲೆಯಲ್ಲಿ ಭಾರತ ತಂಡಕ್ಕೆ ಭಾರತೀಯ ಕೋಚ್ ಬಂದರೆ ತಂಡದಲ್ಲಿನ ಆಟಗಾರರ ಜತೆ ಬೇಗ ಹೊಂದಿಕೊಂಡು ಹೋಗಬಲ್ಲರು ಎಂಬ ಮಾತುಗಳು ಕೇಳಿ ಬರುತ್ತಿವೆ.

-ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.