ಕ್ರೀಡೆ

ಲಂಕೆಗೆ ಮಿಥಾಲಿ ಪಡೆ ಸವಾಲು

ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 32 ರನ್‌ಗಳ ಅಂತರದಿಂದ ಸೋಲನುಭವಿಸಿದ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ ...

ಲಂಕೆಗೆ ಮಿಥಾಲಿ ಪಡೆ ಸವಾಲು
Published On :

ಮುಂಬೈ: ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 32 ರನ್‌ಗಳ ಅಂತರದಿಂದ ಸೋಲನುಭವಿಸಿದ ಮಿಥಾಲಿ ರಾಜ್ ನಾಯಕತ್ವದ ಭಾರತ ತಂಡ ಮಂಗಳವಾರ ಶ್ರೀಲಂಕಾವನ್ನು ಎದುರಿಸಲಿದೆ. ಉಭಯ ತಂಡಗಳಿಗೂ ಗೆಲುವಿನ ಅಗತ್ಯವಿದ್ದು, ಬ್ರಬೋರ್ನ್ ಸ್ಟೇಡಿಯಂನಲ್ಲಿ ಜಯಕ್ಕಾಗಿ ತೀವ್ರ ಪೈಪೋಟಿ ನಡೆಯಲಿದೆ.
ಎ ಗುಂಪಿನ ಎಲ್ಲ ತಂಡಗಳೂ ಈಗ ತಲಾ ಒಂದು ಪಂದ್ಯವನ್ನು ಗೆದ್ದುಕೊಂಡಿವೆ. ಹೀಗಾಗಿ ಅತಿಥೇಯ ಭಾರತ ನಾಕೌಟ್ ಹಂತಕ್ಕೆ ತಲುಪಬೇಕಾದರೆ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿ ಭರವಸೆಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಿದೆ.
ಭಾರತ ತಂಡ ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 105 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು. ಆದರೆ, ಭಾನುವಾರ ಇಂಗ್ಲೆಂಡ್ ನೀಡಿದ 272 ರನ್‌ಗಳ ಗುರಿ ತಲುಪುವಲ್ಲಿ ವಿಫಲವಾಗಿತ್ತು.
ಇನ್ನೊಂದೆಡೆ ಶ್ರೀಲಂಕಾ ತಂಡ ತನ್ನ ಮೊದಲ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು. ಆದರೆ, ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 209 ರನ್‌ಗಳ ಅಂತರದಿಂದ ಹೀನಾಯ ಸೋಲನುಭವಿಸಿತ್ತು.
ಉದ್ಘಾಟನಾ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿಯಾದ ತಿರುಶ್‌ಕಾಮಿನಿ ಮುರುಗೇಶನ್ ಮತ್ತು ಪೂನಂ ರೌತ್ ಮೊದಲ ವಿಕೆಟ್‌ಗೆ 175 ರನ್ ಗಳಿಸುವ ಮೂಲಕ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿತ್ತು. ಈಗ ದ್ವೀಪ ರಾಷ್ಟ್ರ ಶ್ರೀಲಂಕಾ ವಿರುದ್ಧವೂ ಕಾಮಿನಿ ಮತ್ತು ಪೂನಂ ತಂಡಕ್ಕೆ ಭದ್ರ ಅಡಿಪಾಯ ಹಾಕುವ ನಿರೀಕ್ಷೆಗಳಿವೆ.
ಇನ್ನು ಇಂಗ್ಲೆಂಡ್ ವಿರುದ್ಧ ಚೊಚ್ಚಲ ಶತಕ (ಅಜೇಯ 107) ದಾಖಲಿಸಿದ ಉಪ ನಾಯಕಿ ಹರ್ಮನ್‌ಪ್ರೀತ್ ಕೌರ್, ಭಾರತದ ಮಧ್ಯಮ ಕ್ರಮಾಂಕ ಸಹ ಬಲಿಷ್ಠವಾಗಿರುವುದನ್ನು ಸಾಬೀತುಪಡಿಸಿದ್ದಾರೆ. ಆದರೆ, ಕೌರ್‌ಗೆ ಇತರ ಆಟಗಾರ್ತಿಯರು ಕ್ರೀಸ್‌ನಲ್ಲಿ ನಿಂತು ತಕ್ಕ ಸಾಥ್ ನೀಡುವ ಅಗತ್ಯವಿದೆ.
ಭಾರತ ವನಿತೆಯರು ಇದುವರೆಗೂ ಶ್ರೀಲಂಕಾ ವಿರುದ್ಧ ಆಡಿರುವ 17 ಪಂದ್ಯಗಳಲ್ಲಿ 16ರಲ್ಲಿ ಗೆದ್ದು ಪಾರಮ್ಯ ಮೆರೆದಿದ್ದಾರೆ. ಆದರೆ, ಒಂದು ಪಂದ್ಯ ಮಾತ್ರ ಫಲಿತಾಂಶ ಕಂಡಿಲ್ಲ. ಆದಾಗ್ಯೂ ಭಾರತ ನೆರೆಯ ರಾಷ್ಟ್ರವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹೊನಲು ಬೆಳಕಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡುವ ಕಾತರದಲ್ಲಿದ್ದಾರೆ.
'ನಾವು ಒಂದು ವೇಳೆ ಸೂಪರ್ ಸಿಕ್ಸ್ ಹಂತ ಪ್ರವೇಶಿಸಬೇಕಾದರೆ, ಲಂಕಾ ವಿರುದ್ಧದ ಪಂದ್ಯ ನಮಗೆ ನಿರ್ಣಾಯಕ. ಈ ಪಂದ್ಯದಲ್ಲಿ ನಾವು ಶ್ರೀಲಂಕಾವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಇಂಗ್ಲೆಂಡ್ ವಿರುದ್ಧ ಸ್ಫೂರ್ತಿಯ ಹೋರಾಟ ನೀಡಿರುವ ಶ್ರೀಲಂಕಾ ಯಾವ ಸಮಯದಲ್ಲಿ ಬೇಕಾದರೂ ಸಿಡಿದೇಳಬಹುದು. ನಮ್ಮ ತಂಡ ಪಂದ್ಯದಲ್ಲಿ ಸಮರ್ಥ ಹೋರಾಟ ನಡೆಸುವ ಭರವಸೆಯನ್ನು ಹೊಂದಿದ್ದೇವೆ' ಎಂದಿದ್ದಾರೆ ಭಾರತ ತಂಡದ ನಾಯಕಿ ಮಿಥಾಲಿ ರಾಜ್.
ಐಸಿಸಿ ನಂ.1 ರ್ಯಾಂಕಿಂಗ್ ತಂಡ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ, ಶ್ರೀಲಂಕಾ ವಿರುದ್ಧ ಟಾಸ್ ಗೆದ್ದರೂ ಮಿಥಾಲಿ ರಾಜ್ ಅದೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
'ಇಂಗ್ಲೆಂಡ್ ವಿರುದ್ಧ ಆರಂಭದಲ್ಲಿ ನೀಡಿದ ಪ್ರದರ್ಶನವನ್ನೇ ಬೌಲರ್‌ಗಳು ನೀಡುತ್ತಾರೆ ಎಂದು ಭರವಸೆ ಹೊಂದಿದ್ದೇವೆ. ಆದರೆ, ಪವರ್ ಪ್ಲೇ ಸಂದರ್ಭದಲ್ಲಿ ನಮ್ಮ ಬೌಲರ್‌ಗಳು ಹೆಚ್ಚಿನ ರನ್ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು. ಇಂಗ್ಲೆಂಡ್ ವಿರುದ್ಧ ನಮ್ಮ ಬೌಲರ್‌ಗಳು ಹೆಚ್ಚಿನ ರನ್ ನೀಡಿದ್ದರು. ಆದರೆ, ಲಂಕಾ ವಿರುದ್ಧದ ಪವರ್ ಪ್ಲೇ ಸಂದರ್ಭದಲ್ಲಿ ಹೆಚ್ಚಿನ ರನ್ ಸೋರಿಕೆ ಮಾಡದಿರಲು ಯತ್ನಿಸುತ್ತೇವೆ' ಎಂದಿದ್ದಾರೆ ಮಿಥಾಲಿ ರಾಜ್.
ಇನ್ನೊಂದೆಡೆ, ಎದುರಾಳಿ ಶ್ರೀಲಂಕಾ ತಂಡ ಸಹ ತನ್ನ ಆರಂಭಿಕ ಆಟಗಾರ್ತಿಯರ ಮೇಲೆ ಹೆಚ್ಚಿನ ಅವಲಂಬನೆಯನ್ನು ಹೊಂದಿದೆ. ಇಂಗ್ಲೆಂಡ್ ವಿರುದ್ಧ ಮಹತ್ವದ ಪಾತ್ರ ವಹಿಸಿದ್ದ ಈಶಾನಿ ಕೌಸಲ್ಯ ಲೋಕುಸೂರ್ಯ ಅವರು ಭಾರತದ ವಿರುದ್ಧ ಮಿಂಚುವ ನಿರೀಕ್ಷೆಗಳಿವೆ. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ಕೌಶಲ್ಯ ಯಾವುದೇ ವಿಕೆಟ್ ಪಡೆಯದಿರುವುದು ತಂಡಕ್ಕೆ ಆತಂಕ ಉಂಟುಮಾಡಿದೆ. ವಿಂಡೀಸ್ ವಿರುದ್ಧ 7 ಓವರ್ ಬೌಲಿಂಗ್‌ನಲ್ಲಿ ಕೌಶಲ್ಯ 63 ರನ್ ನೀಡಿದ್ದರು.
ಗೆಲ್ಲುವುದೊಂದೇ ನಮ್ಮ ಗುರಿ ಎನ್ನುತ್ತಾರೆ ಶ್ರೀಲಂಕಾ ತಂಡದ ನಾಯಕಿ ಶಶಿಕಲಾಸಿರಿವರ್ಧನೆ.
'ಉತ್ತಮ ರನ್ ಕಲೆ ಹಾಕದಿರುವುದು ನಮ್ಮ ತಂಡದ ಪ್ರಮುಖ ಸಮಸ್ಯೆಯಾಗಿದೆ. ಆದರೆ, ಭಾರತದ ವಿರುದ್ಧ ಜಯ ಸಾಧಿಸದೇ ಅನ್ಯ ಮಾರ್ಗವಿಲ್ಲ' ಎಂದಿದ್ದಾರೆ ಶಶಿಕಲಾ.
ಒಂದು ಗುಂಪಿನಿಂದ ಒಂದು ತಂಡ ಹೊರಗೆ ಹೋಗಲೇಬೇಕಾಗಿರುವುದರಿಂದ, ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಗೆದ್ದರೆ, ಸೂಪರ್ ಸಿಕ್ಸ್ ಹಂತಕ್ಕೆ ಭಾರತದ ಹಾದಿ ಸುಗಮವಾಗಲಿದೆ.




ತಂಡಗಳ ವಿವರ
ಭಾರತ: ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪ ನಾಯಕಿ), ಎಕ್ತಾ ಬಿಷ್ಟ್, ಅಮಿತಾ ದಾಸ್, ಜೂಲನ್ ಗೋಸ್ವಾಮಿ, ಕರುಣಾ ಜೈನ್, ರೀಮಾ ಮಲ್ಹೋತ್ರಾ, ಮೋನಾ ಮೆಶ್ರಮ್, ತಿರುಶ್‌ಕಾಮಿನಿ ಮುರುಗೇಶನ್. ಸುಲಕ್ಷಣಾ ನಾಯಕ್, ನಿರಂಜನ ನಾಗರಾಜನ್, ರಸ್ನಾರಾ ಪರ್ವಿನ್, ಪೂನಂ ರೌತ್, ಸುಬ್ಬಲಕ್ಷ್ಮಿ ಶರ್ಮಾ, ಗೌಹಾರ್ ಸುಲ್ತಾನ್.
ಶ್ರೀಲಂಕಾ: ಶಶಿಕಲಾ ಸಿರಿವರ್ಧನೆ (ನಾಯಕಿ), ಸ್ಯಾಂಡ್‌ಮಾಲಿ ಡೋಲಾವಟ್ಟಾ (ಉಪ ನಾಯಕಿ), ಚಾಮರಿ ಅಟ್ಟಾಪಟ್ಟು, ಈಶಾನಿ ಕೌಸಲ್ಯ ಲೋಕುಸೂರ್ಯ, ಲಸಾಂಥಿ, ಒಶಾಡಿ ರಾಣಾಸಿಂಗೆ, ಇನೋಕಾ ರಾಣವೀರಾ, ದೀಪಾ ರಸಂಗಿಕಾ, ಶೆರಿನಾ ರವಿಕುಮಾರ್, ಚಾಮನಿ ಸೆನೆವಿರತ್ನೆ, ಪ್ರಸಾದಿನಿ ವೀರಕ್ಕೋಡಿ, ಸ್ರೀಪಾಲಿ ವೀರಾಕ್ಕೊಡಿ.



ದಿನದ ಇತರ ಪಂದ್ಯಗಳು
ಆಸ್ಟ್ರೇಲಿಯಾ v/s ನ್ಯೂಜಿಲೆಂಡ್
ಇಂಗ್ಲ್ಲೆಂಡ್ v/sವೆಸ್ಟ್ ಇಂಡೀಸ್
ಪಾಕಿಸ್ತಾನ v/sದಕ್ಷಿಣ ಆಫ್ರಿಕಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.