ಕೌರ್ ಶತಕ ವ್ಯರ್ಥ; ಆಂಗ್ಲರಿಗೆ ಶರಣಾದ ಭಾರತ

ಮುಂಬೈ: ಹರ್ಮನ್ ಪ್ರೀತ್ ಕೌರ್ ಅವರ ಶತಕದ ಹೊರತಾಗಿಯೂ ಭಾರತ ತಂಡ, ಭಾನುವಾರ ನಡೆದ ಮಹಿಳಾ ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ 32 ರನ್‌ಗಳ ಸೋಲು ಅನುಭವಿಸಿತು.
ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್, 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ನಂತರ, ಬ್ಯಾಟಿಂಗ್‌ಗೆ ಇಳಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 240 ರನ್ ಮಾತ್ರ ಗಳಿಸಿತು.
ವ್ಯರ್ಥವಾದ ಕೌರ್ ಶತಕ: 109 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 107 ರನ್ ಬಾರಿಸಿದ ಹರ್ಮನ್ ಪ್ರೀತ್ ಕೌರ್, ಭಾರತದ ಪರವಾಗಿ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಎರಡನೇ ಆಟಗಾರ್ತಿಯೆಂಬ ಹೆಗ್ಗಳಿಕೆ ಪಡೆದರು. ಆದರೆ, ಕ್ರೀಸ್‌ನಲ್ಲಿ ಅವರಿಗೆ ಉತ್ತಮ ಸಾಥ್ ದೊರೆಯದ ಕಾರಣ ಅವರ ಶತಕ ವ್ಯರ್ಥವಾಯಿತು.
ಇಂಗ್ಲೆಂಡ್‌ನ ವೇಗದ ಬೌಲರ್ ಕ್ಯಾಥರಿನ್ ಹೆಲೆನ್ ಬ್ರಂಟ್ (4 ವಿಕೆಟ್) ಹಾಗೂ ಸ್ಪಿನ್ನರ್ ಡೇನಿಯಲ್ ವ್ಯಾಟ್ (2 ವಿಕೆಟ್) ಅವರು ಭಾರತದ ಆಶಯವನ್ನು ದಿಕ್ಕು ತಪ್ಪಿಸುವಲ್ಲಿ ಯಶಸ್ವಿಯಾದರು.
ಇಂಗ್ಲೆಂಡ್ ನೀಡಿದ್ದ 273 ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ವಿಘ್ನಗಳು ಎದುರಾದವು. ಮೂವರು ಅಗ್ರ ಬ್ಯಾಟರ್‌ಗಳಾದ ಪೂನಮ್ ರಾವುತ್, ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ತಿರುಷ್‌ಕಾಮಿನಿ ಮುರುಗೇಶನ್ ಹಾಗೂ ನಾಯಕಿ ಮಿಥಾಲಿ ರಾಜ್ ಅವರು ಬೇಗನೇ ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ಮುಳುವಾಗಿ ಪರಿಣಮಿಸಿತು. ಇನಿಂಗ್ಸ್ ಆರಂಭವಾಗಿ ಕೇವಲ 34 ನಿಮಿಷಗಳಲ್ಲೇ ಈ ಅಮೂಲ್ಯ ಮೂರು ವಿಕೆಟ್‌ಗಳು ಉರುಳಿದವು.
ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಉಪನಾಯಕಿ ಹರ್ಮನ್ ಪ್ರೀತ್ ಕೌರ್ ಹಾಗೂ ಕರುಣಾ ಜೈನ್ ಇಬ್ಬರೂ ಕುಸಿದಿದ್ದ ತಂಡದ ಇನಿಂಗ್ಸ್ ಮೇಲೆತ್ತುವಲ್ಲಿ ಯಶಸ್ವಿಯಾದರು. 157 ಎಸೆತಗಳಲ್ಲಿ ಈ ಜೋಡಿ 4ನೇ ವಿಕೆಟ್‌ಗೆ 106 ರನ್ ಪೇರಿಸಿತು.
92 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 56 ರನ್ ಗಳಿಸಿದ್ದ ಜೈನ್, ಇನಿಂಗ್ಸ್ 34ನೇ ಓವರ್‌ನಲ್ಲಿ ಆರಾನ್ ಬ್ರಿಂಡ್ಲ್ ಅವರ ಎಸೆತದಲ್ಲಿ ಲಾರಾ ಮಾರ್ಷ್‌ಗೆ ಕ್ಯಾಚ್ ನೀಡಿ ಹೊರನಡೆದರು. ಅದೇ ಓವರ್‌ನ ಮೊದಲ ಎಸೆತದಲ್ಲೇ ಜೈನ್, ಇಂಗ್ಲೆಂಡ್ ತಂಡದ ನಾಯಕಿ ಎಡ್ವರ್ಡ್ಸ್‌ಗೆ ಕ್ಯಾಚ್ ನೀಡಿದ್ದರು. ಆದರೆ, ಎಡ್ವರ್ಡ್ ಆ ಕ್ಯಾಚ್ ಕೈಚೆಲ್ಲಿದ್ದರಿಂದಾಗಿ ಜೈನ್‌ಗೆ 'ಲೈಫ್' ಸಿಕ್ಕಿತ್ತು. ಆದರೆ, ಜೈನ್ ಅವರಿಗೆ ಸಿಕ್ಕಿದ್ದ 'ಲೈಫ್' ಹೆಚ್ಚು ಕಾಲ ಉಳಿಯಲಿಲ್ಲ.
ಜೈನ್ ನಿರ್ಗಮನದ ನಂತರ, ಬ್ಯಾಟ್ ಮಾಡಲು ಬಂದ ಜುಲಾನ್ ಗೋಸ್ವಾಮಿ ಅವರು ಜೆನ್ನಿಫರ್ ಗನ್ ಅವರ ಎಸೆತದಲ್ಲಿ ಆನ್ಯಾ ಶ್ರುಬ್ಸೋಲ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ನಂತರ, ಬಂದ ರೀಮಾ ಮಲ್ಹೋತ್ರಾ,ಅಮಿತಾ ಶರ್ಮಾ, ನಾಗರಾಜನ್ ನಿರಂಜನಾ, ಏಕ್ತಾ ಬಿಶ್ತ್, ಗೌಹರ್ ಸುಲ್ತಾನಾ - ಯಾರೊಬ್ಬರೂ ಕ್ರೀಸ್‌ನಲ್ಲಿದ್ದ ಕೌರ್‌ಗೆ ಉತ್ತಮ ಸಾಥ್ ನೀಡಲಿಲ್ಲ. 50ನೇ ಓವರ್‌ನ ಎರಡನೇ ಎಸೆತದಲ್ಲಿ ಬಿಶ್ತ್ ಅವರು ವ್ಯಾಟ್ ಬೌಲಿಂಗ್‌ನಲ್ಲಿ ಮಾರ್ಷ್‌ಗೆ ಕ್ಯಾಚ್ ನೀಡುವ ಮೂಲಕ ಭಾರತ ವಿಕೆಟ್ ಪತನಗೊಂಡಿತು. ಅಂತಿಮವಾಗಿ, ಭಾರತ ಕೇವಲ 240 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಆಂಗ್ಲರ ದಿಟ್ಟತನ: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡದ ಆರಂಭವೂ ಉತ್ತಮವಾಗಿಲಿಲ್ಲ. ತಂಡದ ಮೊತ್ತ 4 ರನ್ ಆಗಿದ್ದಾಗ ಇಂಗ್ಲೆಂಡ್, ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಅವರನ್ನು ಕಳೆದುಕೊಂಡಿತು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಹಾಗೂ ಮೂರನೇ ಕ್ರಮಾಂಕದ ಸರಾ ಟೇಲರ್ 2ನೇ ವಿಕೆಟ್‌ಗೆ 104 ರನ್ ಸೇರಿಸಿ, ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಎಡ್ವರ್ಡ್‌ಗೆ ಸಾಧನೆಗಳ ಗರಿ: 109 ರನ್ ಗಳಿಸಿದ ಎಡ್ವರ್ಡ್, ಒಟ್ಟು ಏಕದಿನ ಪಂದ್ಯಗಳಲ್ಲಿ 4,901 ರನ್ ಗಳಿಸುವ ಮೂಲಕ ಮಹಿಳೆಯರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಪಾತ್ರರಾದರು. ಈ ಹಿಂದೆ, ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ (4, 884 ರನ್) ಅವರು ಅತಿ ಹೆಚ್ಚು ರನ್ ಗಳಿಸಿದ ಖ್ಯಾತಿ ಹೊಂದಿದ್ದರು.
ಈ ಸಾಧನೆ ಮಾತ್ರವಲ್ಲದೇ, ವಿಶ್ವಕಪ್ ಪಂದ್ಯಗಳಲ್ಲಿ 1 ಸಾವಿರ ರನ್ ಗಡಿ ದಾಟಿದ ವಿಶ್ವದ ನಾಲ್ಕನೇ ಮಹಿಳಾ ಕ್ರಿಕೆಟ್ ಪಟುವೆಂಬ ಹೆಗ್ಗಳಿಕೆಗೂ ಎಡ್ವರ್ಡ್ ಪಾತ್ರರಾದರು.
28ನೇ ಓವರ್‌ನಲ್ಲಿ ಟೇಲರ್ ರನೌಟ್ ಆದ ಮೇಲೆ, ಭಾರತದ ಬೌಲರ್‌ಗಳಾದ ಗೋಸ್ವಾಮಿ ಹಾಗೂ ನಾಗರಾಜನ್ ಅವರು ಇಂಗ್ಲೆಂಡ್‌ನ ಕೆಲ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೂ, 274 ರನ್‌ಗಳ ದೊಡ್ಡ ಮೊತ್ತವನ್ನು ಪೇರಿಸುವುದನ್ನು ತಪ್ಪಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್‌ಗಳ ದೊಡ್ಡ ಮೊತ್ತವನ್ನು ಪೇರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


