ಕ್ರೀಡೆ

ಕೊರಿಯಾಕ್ಕೆ ನಿರೀಕ್ಷಿತ ವಿಜಯ

ಕೊರಿಯಾಕ್ಕೆ ನಿರೀಕ್ಷಿತ ವಿಜಯ
Published On :

ನವದೆಹಲಿ: ಭಾರತದ ಅನನುಭವಿ ಆಟಗಾರರು ಕೈಚೆಲ್ಲುವುದರೊಂದಿಗೆ ಕೊರಿಯಾ ವಿರುದ್ಧ ನಡೆದ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಪರಾಭವ ಹೊಂದಿತು. ಭಾನುವಾರ ನಡೆದ ಗೆಲ್ಲಲೇಬೇಕಾಗಿದ್ದ ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತದ ಇಬ್ಬರೂ ಆಟಗಾರರು ಸೋಲನುಭವಿಸಿದರು. ಹೀಗಾಗಿ ಭಾರತ ಪಂದ್ಯಾವಳಿಯಲ್ಲಿ 1-4 ಅಂತರದಿಂದ ಸೋಲನುಭವಿಸಿತು. ನಿರೀಕ್ಷೆಯಂತೆ ದಕ್ಷಿಣ ಕೊರಿಯಾ ತಂಡ  ಜಯದ ಕೇಕೆ ಹಾಕಿತು.
   ಮೊದಲ ರಿವರ್ಸ್ ಸಿಂಗಲ್ಸ್‌ನಲ್ಲಿ ಪಂದ್ಯದಲ್ಲಿ ವಿ.ಎಂ ರಂಜೀತ್ ಬಲಿಷ್ಠ ಹೋರಾಟ ನಡೆಸಿದರು. ಆದರೆ, 2 ಗಂಟೆ 23 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜೆಯಾಂಗ್ ವಿರುದ್ಧ 4-6, 4-6, 2-6 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು.
ಎರಡನೇ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ವಿಜಯಂತ್ ಮಲಿಕ್ ಅವರು ಕೊರಿಯಾದ ಜಿ ಸಂಗ್ ನಾಮ್ ವಿರುದ್ಧ 2-6, 4-6 ಸೆಟ್‌ಗಳಿಂದ ಸೋಲನುಭವಿಸಿದರು.
ಶುಕ್ರವಾರ ನಡೆದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಭಾರತದ ವಿ.ಎಂ ರಂಜೀತ್ ಮತ್ತು ವಿಜಯಂತ್ ಮಲಿಕ್ ಅವರು ಕೈಚೆಲ್ಲಿದ್ದರು. ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಮತ್ತು ಪುರವ ರಾಜಾ ಜೋಡಿ ಜಯ ಸಾಧಿಸಿತ್ತು.      ಇದರೊಂದಿಗೆ ಪಂದ್ಯಾವಳಿಯಲ್ಲಿ ಭಾರತ ಗೆಲ್ಲುವ ಆಸೆ ಜೀವಂತವಾಗಿ ಉಳಿದಿತ್ತು. ಹೀಗಾಗಿ ಭಾನುವಾರ ನಡೆದ ಎರಡು ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತ ಜಯ ಸಾಧಿಸುವುದು ಅನಿವಾರ್ಯವಾಗಿತ್ತು. ಆದರೆ, ಭಾರತದ ಅನನುಭವಿ ಆಟಗಾರರು ಕೊರಿಯಾದ ಬಲಿಷ್ಠ ಆಟಗಾರರ ವಿರುದ್ಧ ಕೈಚೆಲ್ಲಿದರು. ಆದಾಗ್ಯೂ ಸಮರ್ಥ ಹೋರಾಟ ನಡೆಸಿದ ವಿ.ಎಂ ರಂಜೀತ್ ಆರ್.ಕೆ ಖನ್ನಾ ಟೆನಿಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯಲ್ಲಿ ಹಲವರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು.
ಕಳೆದ ಏಳು ವರ್ಷಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ತವರಿನಲ್ಲಿ ನಡೆದ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಸೋಲನುಭವಿಸಿದೆ. ಇದಕ್ಕೂ ಮುನ್ನ 2005ರಲ್ಲಿ ಭಾರತ ತಂಡ ಸ್ವೀಡನ್ ವಿರುದ್ಧ ನಡೆದ ವಿಶ್ವಕಪ್ ಗುಂಪು ಪ್ಲೇ ಆಫ್ ಪಂದ್ಯದಲ್ಲಿ 1-3 ಅಂತರದಿಂದ ಕೈಚೆಲ್ಲಿತ್ತು.
ಭಾರತ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಬಹುದಾಗಿತ್ತು. ಆದರೆ, ಭಾರತದ ಅಗ್ರ 11 ಆಟಗಾರರು ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ತಂಡ ಗೆಲುವಿನ ಅಕಾಶದಿಂದ ವಂಚಿತವಾಗಬೇಕಾಯಿತು. ಬಂಡಾಯದ ಗುಂಪಿನಲ್ಲಿರುವ ಸನಮ್ ಸಿಂಗ್ ಅವರು ವಿ.ಎಂ ರಂಜಿತ್ ಅವರ ಪ್ರದರ್ಶನವನ್ನು ವೀಕ್ಷಿಸಿದರು.
ಇಬ್ಬರೂ ಅನನುಭವಿ ಆಟಗಾರರಾದ ವಿ.ಎಂ ರಂಜಿತ್ ಮತ್ತು ವಿಜಯಂತ್ ಮಲಿಕ್ ಅವರು ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯಕ್ಕೆ ಮೀರಿ ಹೋರಾಟ ನಡೆಸಿದರು. ಆದರೆ, ಅನನುಭವಿಗಳ ದೌರ್ಬಲ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡ ದಕ್ಷಿಣ ಕೊರಿಯಾ ಆಟಗಾರರು ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ಈಗ ಭಾರತ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಏಪ್ರಿಲ್ 5ರಿಂದ 7ರವರೆ ತವರಿನಲ್ಲಿ ಇಂಡೋನೇಷ್ಯಾ ತಂಡವನ್ನು ಎದುರಿಸಲಿದೆ. ಆದರೆ, ಅಷ್ಟರೊಳಗೆ ಆಟಗಾರರು ಮತ್ತು ಅಖಿಲ ಭಾರತ ಟೆನಿಸ್ ಸಂಸ್ಥೆಯ ನಡುವಿನ ಗೊಂದಲ ಬಗೆಹರಿಯುವುದೇ ಕಾದು ನೋಡಬೇಕಿದೆ.
ಈಗ ಟೆನಿಸ್ ಸಂಸ್ಥೆ ಯಾವ ಆಟಗಾರರನ್ನು ಮನವಲಿಸುವುದೇ, ಅಥವಾ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವುದೇ ಎಂಬ ಅಂಶ ಟೆನಿಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.