ಕ್ರೀಡೆ

ಪಾಕಿಸ್ತಾನಕ್ಕೆ ಹೀನಾಯ ಸೋಲು

ಪಾಕಿಸ್ತಾನಕ್ಕೆ ಹೀನಾಯ ಸೋಲು
Published On :

ಕಟಕ್: ಆಸೀಸ್ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮಹಿಳೆಯರ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ 91 ರನ್‌ಗಳ ಜಯ ಗಳಿಸಿದೆ.
ಆಸೀಸ್ ತಿಣುಕು: ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, 46.1 ಓವರ್‌ಗಳಲ್ಲಿ 175 ರನ್‌ಗಳನ್ನು ಪೇರಿಸಿ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ, 33.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡು 84 ರನ್‌ಗಳನ್ನು ಮಾತ್ರ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, ಭರ್ಜರಿಯಾಗಿ ಇನಿಂಗ್ಸ್ ಆರಂಭಿಸಲಿಲ್ಲ. ಮೊದಲ ವಿಕೆಟ್‌ಗೆ ಕೇವಲ 28 ರನ್ ಸೇರಿಸುವಷ್ಟರಲ್ಲಿ ಆರಂಭಿಕರಾದ ಲ್ಯಾನಿಂಗ್ ಅವರು ವಿಕೆಟ್ ಒಪ್ಪಿಸಿದರು. ಆನಂತರ, ಕೆಲವೇ ನಿಮಿಷಗಳ ಅಂತರದಲ್ಲಿ ಮೂರನೇ ಕ್ರಮಾಂಕದ ಕ್ಯಾಮೆರೂನ್ ಸಹ ಹೊರನಡೆದರು. ಆಗ, ಕ್ರೀಸ್‌ನಲ್ಲಿದ್ದ ಮತ್ತೊಬ್ಬ ಆರಂಭಿಕ ಆಟಗಾರ್ತಿ ಹೇನ್ಸ್ ಜೊತೆ ಇನಿಂಗ್ಸ್ ಮುನ್ನಡೆಸಲು ಬಂದಿದ್ದು ಬ್ಲಾಕ್‌ವೆಲ್. ಆದರೆ, ಅವರೂ ಹೆಚ್ಚು ಆಡಲಿಲ್ಲ. ವೈಯಕ್ತಿಕವಾಗಿ 18 ರನ್ ಗಳಿಸಿದ ಬ್ಲಾಕ್‌ವೆಲ್, 24ನೇ ಓವರ್‌ನಲ್ಲಿ ಔಟಾದರು. ಅವರ ಹಿಂದೆಯೇ ಪೆವಿಲಿಯನ್‌ಗೆ ಮರಳಿದ್ದು ಆರಂಭಿಕ ಆಟಗಾರ್ತಿ ಹೇನ್ಸ್.
ಆನಂತರ, ನಾಯಕಿ ಜೂಡಿ ಫೀಲ್ಡ್ಸ್ 1 ರನ್ ಗಳಿಸಿ ಔಟಾದರೆ, ಪೆರ್ರಿ ಅವರು ಶ್ಯೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಈ ಹಂತದಲ್ಲಿ ಹೋರಾಟ ತೋರಿದ್ದು ಸರಾ ಕಾಯ್ಟ್. ಅವರು ಹಾಗೂ ಬ್ಲಾಕ್‌ವೆಲ್ ಔಟಾದಾಗ ಕ್ರೀಸ್‌ಗೆ ಬಂದಿದ್ದ ಸ್ಟಾಲೇಕರ್ ಇಬ್ಬರೂ 7ನೇ ವಿಕೆಟ್‌ಗೆ 45 ರನ್ ಸೇರಿಸಿದರು. ಆದರೆ, 39ನೇ ಓವರ್‌ನಲ್ಲಿ ಸ್ಟಾಲೇಕರ್ ಔಟಾಗುವ ಮೂಲಕ ಈ ಜೋಡಿ ಮುರಿಯಿತು.
ನಂತರ, ಕಾಯ್ಟ್‌ಗೆ ಜೋಡಿಯಾಗಿದ್ದು ಮೇಗಾನ್ ಶಟ್. ಆದರೆ, ತಂಡದ ಮೊತ್ತಕ್ಕೆ ಕೇವಲ 4 ರನ್ ಸೇರಿಸುವಷ್ಟರಲ್ಲಿ ಈ ಜೋಡಿ ಮುರಿದುಬಿತ್ತು. ನಂತರ ಬಂದ ಚಾಪೆಲ್, ಕಾಯ್ಟ್ ಜೊತೆಗೂಡಿ 9ನೇ ವಿಕೆಟ್‌ಗೆ 26 ರನ್ ಸೇರಿಸಿತು. 45ನೇ ಓವರ್‌ನಲ್ಲಿ ಚಾಪೆಲ್ ಔಟಾಗುವ ಮೂಲಕ ಈ ಜೊತೆಯಾಟ ಅಂತ್ಯಗೊಂಡಿತು. ಅವರ ನಂತರ ಬಂದ ಫರ್ಲಿಂಗ್, ರನೌಟ್ ಆದರು. 35 ರನ್ ಗಳಿಸಿದ ಪೆರ್ರಿ ಕೊನೆಯವರೆಗೂ ಅಜೇಯರಾಗಿ ಉಳಿದರು.
ಅಂತಿಮವಾಗಿ, ಆಸ್ಟ್ರೇಲಿಯಾ ತಿಣುಕಾಡುತ್ತಾ 175 ರನ್‌ಗಳ ಅಲ್ಪಮೊತ್ತವನ್ನು ಸೇರಿಸಿತು.
ಪಾಕಿಸ್ತಾನ ಧೂಳಿಪಟ: ಆಸ್ಟ್ರೇಲಿಯಾ ತಂಡವನ್ನು 175 ರನ್‌ಗಳಿಗೆ ನಿಯಂತ್ರಿಸಿ ಖುಷಿ ಪಡುತ್ತಿದ್ದ ಪಾಕಿಸ್ತಾನದ ಸಂಭ್ರಮ ಬಹಳ ಹೊತ್ತು ಇರಲಿಲ್ಲ. ಕಾಂಗರೂಗಳು ನೀಡಿದ್ದ ಮೊತ್ತವನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ಪಾಕಿಸ್ತಾನ ಕಳಪೆಯಾಗಿ ಇನಿಂಗ್ಸ್ ಆರಂಭಿಸಿತು. ಕೇವಲ 9 ರನ್ ಮೊತ್ತಕ್ಕೆ ಆರಂಭಿಕ ಆಟಗಾರ್ತಿ ಸರಾ ಔಟಾದರೆ, ತಂಡದ ಮೊತ್ತ 18 ರನ್ ಆಗಿದ್ದಾಗ ನಾಹಿದಾ ಖಾನ್ ಅವರು ವಿಕೆಟ್ ಒಪ್ಪಿಸಿದರು. ಆನಂತರ, ಜೋಡಿಯಾದ ಮೂರನೇ ಹಾಗೂ ನಾಲ್ಕನೇ ಕ್ರಮಾಂಕದ ನೈನ್ ಅಬಿದಿ ಹಾಗೂ ಬಿಸ್ಮಾ ಮಾರೂಫ್ ಜೋಡಿ ಮೂರನೇ ವಿಕೆಟ್‌ಗೆ 21 ರನ್ ಸೇರಿಸುವಷ್ಟರಲ್ಲಿ ನೈನ್ ಅಬಿದಿ ಔಟಾಗುವ ಮೂಲಕ ಬೇರ್ಪಟ್ಟಿತು.
ಹೀಗೆ, ವಿಕೆಟ್ ಉಳಿಸಿಕೊಳ್ಳಲು ಪರದಾಡುತ್ತಲೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನದ ಆಟಗಾರರಲ್ಲಿ ಮಧ್ಯಮ ಕ್ರಮಾಂಕದ ಬಿಸ್ಮಾ ಮಾರೂಫ್ (43) ಬಿಟ್ಟರೆ ಬೇರ್ಯಾರೂ ಹೋರಾಟದ ಹಾದಿ ತೋರಲೇ ಇಲ್ಲ. ಕ್ರೀಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ ಅವರಿಗೆ ಯಾರೊಬ್ಬರೂ ಸಾಥ್ ನೀಡಲಿಲ್ಲ. ಜವೇರಿಯಾ ಖಾನ್, ಸಿದ್ರಾ ಅಮೀನ್, ಆಸ್ಮಾವಿಯಾ ಇಕ್ಬಾಲ್, ಖಾನಿತಾ ಜಲೀಲ್, ಬತೂಲ್ ಫಾತಿಮಾ, ಸುಮೈಯಾ ಸಿದ್ಧಿಕಿ, ಸಾದಿಯಾ ಯೂಸುಫ್ - ಎಲ್ಲರೂ ಕೇವಲ ಒಂದಂಕಿ ರನ್ ಗಳಿಸಿ ಹೊರನಡೆದರು. 34ನೇ ಓವರ್‌ನಲ್ಲಿ ಬಿಸ್ಮಾ ಮಾರೂಫ್ ಔಟಾಗುವ ಮೂಲಕ ಪಾಕಿಸ್ತಾನದ ಹೋರಾಟಕ್ಕೆ ತೆರೆಬಿತ್ತು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 175/10 (46.1 ಓವರ್0
ಹೇನ್ಸ್ 39 (74), ಕಾಯ್ಟ್ 35 (64)
ಬೌಲಿಂಗ್: ಸಾದಿಯಾ ಯೂಸುಫ್ 30/3,
ಆಸ್ಮಾವಿಯಾ ಇಕ್ಬಾಲ್ 36/2
ಪಾಕಿಸ್ತಾನ: 84/10 (33.2 ಓವರ್)
ಬಿಸ್ಮಾ ಮಾರೂಫ್ 43 (95), ನಾದಿಯಾ ಖಾನ್ 10 (16)
ಬೌಲಿಂಗ್: ಕಾಯ್ಟ್ 20/3, ಸ್ಟಾಲೇಕರ್ 19/2
ಪಂದ್ಯ ಶ್ರೇಷ್ಠ: ಕಾಯ್ಟ್ (ಆಸ್ಟ್ರೇಲಿಯಾ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.