ವಿಶೇಷ

ಸಿ ಇ ಟಿ - ಕಡೆಯ ಕ್ಷಣದ ಸಿದ್ಧತೆಗಾಗಿ ಒಂದಿಷ್ಟು ಟಿಪ್ಸ್..!

ಮಾನಸಿಕವಾಗಿ ಗಟ್ಟಿಗರಾಗಲು ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಮಾಡಿಕೊಂಡಿದ್ದರೆ ಒಳಿತು. ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನ...

ಸಿ ಇ ಟಿ - ಕಡೆಯ ಕ್ಷಣದ ಸಿದ್ಧತೆಗಾಗಿ ಒಂದಿಷ್ಟು ಟಿಪ್ಸ್..!
ಪರೀಕ್ಷಾ ತಯಾರಿಯಲ್ಲಿರುವ ವಿದ್ಯಾರ್ಥಿನಿ (ಸಾಂದರ್ಭಿಕ ಚಿತ್ರ )
Published On :

ಇತ್ತೀಚಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಘಟ್ಟ
ಸಿ ಇ ಟಿ… ವೃತ್ತಿಪರ ಶಿಕ್ಷಣದ ಹೆಬ್ಬಾಗಿಲು! ಸಾಮಾನ್ಯ ಪ್ರವೇಶ ಪರೀಕ್ಷೆ ಅಥವಾ ಸಿ ಇ ಟಿ ಎಂಬುದು ವಿದ್ಯಾರ್ಥಿಗಳಿಂದ ಹೆಚ್ಚಿನ ಶ್ರಮವನ್ನು ಬೇಡುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇತರೆ ಎಲ್ಲ ಪರೀಕ್ಷೆಗಳಂತೆ ಪಠ್ಯಕ್ರಮದ ಪ್ರಕಾರ ಕೇವಲ ನೇರ ಪ್ರಶ್ನೆಗಳಿಂದ ಕೂಡಿರದೇ ವಿದ್ಯಾರ್ಥಿಯು ತಾನು ಆಭ್ಯಾಸ ಮಾಡಿರುವ ವಿಷಯವನ್ನು ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಅನ್ವಯಿಸಬಲ್ಲ ಎಂಬುದನ್ನೂ ಪರೀಕ್ಷಿಸಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಯು ವಿಷಯವನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಂಡಿರುತ್ತಾನೆ ಎಂಬುದು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಊರು ಹೊಡೆದು ಅಭ್ಯಾಸ ಮಾಡುವವರಿಗೆ ಸಿ ಇ ಟಿಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಕಷ್ಟವೇ ಸರಿ!

ಈ ಸಮಯಕ್ಕೆ ಆಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದು ಸಿಇಟಿ ಯ ತಯಾರಿಯೂ ಜೋರಾಗಿ ನಡೆದಿರುತ್ತದೆ.  ಈಗಾಗಲೇ ವಿಷಯದಲ್ಲಿ ಪರಿಣಿತಿ ಒದಗಿರುವುದರಿಂದ ಸಿಇಟಿ ಯಲ್ಲಿ ನಿಮ್ಮ ಹೆಚ್ಚಿನ ಗಮನ ಸಮಯ ನಿರ್ವಹಣೆಯ ಕಡೆಗೆ ಇರಲಿ. ಪರೀಕ್ಷೆ ಬರೆಯುವಾಗ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಉತ್ತರಗಳನ್ನು ಬರೆಯುವ ಅಭ್ಯಾಸ ನಡೆಸಬೇಕು. ಎಲ್ಲರಿಗೂ ತಿಳಿದಿರುವಂತೆ ಅರವತ್ತು ನಿಮಿಷಗಳಲ್ಲಿ ವಿದ್ಯಾರ್ಥಿಯು ಅರವತ್ತು ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾಗಿರುತ್ತದೆ. ಅಂದರೆ ಒಂದು ಉತ್ತರಕ್ಕೆ ಒಂದು ನಿಮಿಷ ಮಾತ್ರ ಸಮಯವಿರುತ್ತದೆ! ಆದರೆ ಪ್ರಶ್ನೆಪತ್ರಿಕೆಗಳಲ್ಲಿ ಮೂರು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಅನೇಕ ಲೆಕ್ಕಗಳಿರುತ್ತವೆ. ಹಾಗಾಗಿ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಆರಂಭ ಮಾಡುತ್ತಿದ್ದಂತೆ ಮೊದಲು ಒಂದು ಅಥವಾ ಎರಡು ಸೆಕಂಡು ಗಳಲ್ಲಿ ಉತ್ತರಿಸಬಹುದಾದ ನೇರ ಪ್ರಶ್ನೆಗಳನ್ನು ಆರಿಸಿಕೊಂಡು ಉತ್ತರಿಸಬೇಕು. ನಂತರ ಒಂದು ನಿಮಿಷಕ್ಕಿಂತ ಕಡಿಮೆ ಅವಧಿ ತೆಗೆದುಕೊಳ್ಳುವ ಸೂತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಿಸಬೇಕು. ಕಡೆಗೆ ದೊಡ್ಡ ಪ್ರಶ್ನೆಗಳಿಗೆ ಮುಖ ಮಾಡಬೇಕು. ಒಂದು ವೇಳೆ ಯಾವುದಾದರೂ ಪ್ರಶ್ನೆ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಲ್ಲಿ ಹೆಚ್ಚು ವೇಳೆ ವ್ಯರ್ಥ ಮಾಡದೇ ಅದನ್ನು ಅರ್ಧದಲ್ಲಿಯೇ ನಿಲ್ಲಿಸಿ ಮುಂದುವರೆಯಬೇಕು. ಕಡೆಗೆ ಸಮಯ ಉಳಿದರೆ ಆ ಸಮಯವನ್ನು ಮತ್ತೆ ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಲು ಮೀಸಲಿಡಬಹುದು. ಯಾವ ಪ್ರಶ್ನೆ ಎಷ್ಟು ಸಮಯ ತೆಗೆದುಕೊಳ್ಲುತ್ತದೆ ಎಂದು ನೋಡಿದ ತಕ್ಷಣವೇ ತಿಳಿಯಲು ಮೊದಲು ಸಾಕಷ್ಟು ಮಾದರಿ ಪ್ರಶ್ನೆಪತ್ರಿಕೆಗಳನ್ನು ಹಾಗೂ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಅಭ್ಯಾಸ ಮಾಡಬೇಕು. ಓದುವ ಕೋಣೆಯಲ್ಲಿ ಗಡಿಯಾರ ಇಟ್ಟುಕೊಂಡು ಸರಿಯಾಗಿ ಒಂದು ಗಂಟೆ ಲೆಕ್ಕ ಹಾಕಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಅಭ್ಯಾಸ ಮಾಡಿಕೊಂಡರೆ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಸುಲಭ ಸಾಧ್ಯ. ಆದ್ದರಿಂದ ನೆನಪಿಡಿ No Shortcut for Success and No alternate for Hardwork!

ಪರೀಕ್ಷೆಯಲ್ಲಿ ಉತ್ತರಿಸುತ್ತಾ ಕೆಲವರಿಗೆ ಗ್ಲೂಕೋಸ್ ಮಟ್ಟ ಕಡಿಮೆಯಾಗಿ ಯೋಚಿಸಲು ಕಷ್ಟವಾಗತೊಡಗುತ್ತದೆ. ಆಗ ಒಂದು ಚಾಕಲೇಟ್ ತುಂಡನ್ನು ಬಾಯಿಗೆ ಹಾಕಿಕೊಂಡರೆ ಗ್ಲುಕೋಸ್ ಮತ್ತೆ ಮೊದಲಿನ ಮಟ್ಟಕ್ಕೆ ಮರಳುತ್ತದೆ ಎಂದು ಕೆಲ ವೈದ್ಯರು ಅಭಿಪ್ರಾಯ ಪಡುತ್ತಾರೆ. ಅದರಲ್ಲೂ ಮೂರು ತಾಸುಗಳ ಪರೀಕ್ಷೆಯಲ್ಲಿ ಚಾಕಲೇಟುಗಳು ಸಾಕಷ್ಟು ಉಪಯೋಗಕ್ಕೆ ಬರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಪರೀಕ್ಷೆಯಲ್ಲಿ ಆತಂಕಕ್ಕೊಳಗಾಗದಿರುವುದು ಅತ್ಯಂತ ಮುಖ್ಯ. ಆತಂಕವು ಓದಿರುವುದನ್ನು ಮರೆಯುವಂತೆ ಮಾಡುತ್ತದೆ. ಮಾನಸಿಕವಾಗಿ ಗಟ್ಟಿಗರಾಗಲು ಪ್ರಾಣಾಯಾಮ ಮತ್ತು ಧ್ಯಾನದ ಅಭ್ಯಾಸ ಮಾಡಿಕೊಂಡಿದ್ದರೆ ಒಳಿತು. ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮುನ್ನ ಇತರೆ ವಿದ್ಯಾರ್ಥಿಗಳೊಂದಿಗೆ ವಿಷಯದ ಬಗ್ಗೆ ಚರ್ಚಿಸಿ ಗಲಿಬಿಲಿಗೊಳಗಾಗಬೇಡಿ. ಪರೀಕ್ಷಾ ಕೇಂದ್ರದ ಬಳಿ ಕನಿಷ್ಟ ಪಕ್ಷ ಅರ್ಧ ಗಂಟೆ ಮೊದಲು ಹಾಜರಿರಬೇಕು. ಕಡೆಯ ಸಮಯದಲ್ಲಿ ಮುಖ್ಯ ಸೂತ್ರಗಳನ್ನು ಒಮ್ಮೆ ಬೇಕಿದ್ದರೆ ಕಣ್ಣಾಡಿಸಿಕೊಳ್ಳಬಹುದು.

 ಎಲ್ಲಕ್ಕಿಂತ ಮುಖ್ಯ ನಿದ್ದೆಗೆಟ್ಟು ಓದಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ದೈಹಿಕ ಆರೋಗ್ಯ ಮಾನಸಿಕ ಆರೊಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸೋ.. ಹೆಚ್ಚು ಉದ್ವಿಗ್ನರಾಗದೇ ಶಾಂತ ಚಿತ್ತರಾಗಿ ಪರೀಕ್ಷೆಯನ್ನು ಎದುರುಗೊಳ್ಳಿ. ಯಶಸ್ಸು ನಿಮ್ಮದಾಗಲಿ. ಆದರೆ ಸಿಇಟಿ ಫಲಿತಾಂಶವೊಂದೇ ಜೀವನದ ಭವಿಷ್ಯವಲ್ಲ ಎಂಬುದೂ ಸಹ ನೆನಪಿರಲಿ! ಆಲ್ ದ ಬೆಸ್ಟ್…!


-ಸಿಂಧು ಕೆ ಎಮ್.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.