ವಿಜ್ಞಾನ-ತಂತ್ರಜ್ಞಾನ

ಅತಿಕಾಯ

ದಕ್ಷಿಣ ಆಫ್ರಿಕದ ಪ್ಯಾರಾಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್ ತನ್ನ ಸ್ಪ್ರಿಂಗ್ ಕಾಲುಗಳಿಂದ ಓಡಿದ ರಭಸ ನೋಡಿ...

ಅತಿಕಾಯ
Published On :

ದಕ್ಷಿಣ ಆಫ್ರಿಕದ ಪ್ಯಾರಾಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್ ತನ್ನ ಸ್ಪ್ರಿಂಗ್ ಕಾಲುಗಳಿಂದ ಓಡಿದ ರಭಸ ನೋಡಿ ಎಲ್ಲರಿಗೂ ಅಚ್ಚರಿಯಾಗಿತ್ತು. ಶೇ.25ರಷ್ಟು ಕಡಿಮೆ ಎನರ್ಜಿಯಿದ್ದರೂ, ಕೈಕಾಲುಗಳು ಸರಿಯಿದ್ದ ಥ್ಲೀಟ್‌ಗಳ ವೇಗದಲ್ಲೇ ಓಡಿದ್ದರು ಪಿಸ್ಟೋರಿಯಸ್. ಕೃತಕ ಕಾಲಿನಿಂದ ಓಡಿದ್ದರಿಂದಲೇ ಅವರು ಗೆಲವು ಸಾಧಿಸಿದರು ಎಂಬ ಆರೋಪ ಹೊರಿಸಿ ಐಎಎಎಫ್ ಆತನಿಗೆ ನಿಷೇಧ ಹೇರಿತು. ಆದರೆ, ಬಳಿಕ ಕೋರ್ಟು ಪಿಸ್ಟೋರಿಯಸ್ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿತು. ಈ ಪ್ರಕರಣದ ಸತ್ಯಾಸತ್ಯತೆ ಒಂದೆಡೆಯಿರಲಿ. ಆದರೆ, ನೈಜ ಕಾಲುಗಳಿಗಿಂತ ಕೃತಕ ಕಾಲಿನ ಶಕ್ತಿ ಅಧಿಕವೇ ಎಂಬ ಪ್ರಶ್ನೆ ಎಲ್ಲರ ತಲೆಯನ್ನು ಕೊರೆಯತೊಡಗಿತು.

ನಿಜ. ಇತ್ತೀಚೆಗೆ ಬೆಳಕಿಗೆ ಬಂದ ಕೆಲವೊಂದು ಅದ್ಭುತ ತಂತ್ರಜ್ಞಾನಗಳು ಎಲ್ಲರಲ್ಲೂ ಇಂಥ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂಬುದರಲ್ಲಿ ಸಂಶಯವಿಲ್ಲ. ಕೈಬೆರಳುಗಳಿಂದ ಹಿಡಿದು ಮನಸ್ಸನ್ನು ನಿಯಂತ್ರಿಸುವಂಥ ಸಾಧನಗಳವರೆಗೂ, ಕೃತಕ ಕಾಲುಗಳಿಂದ ಹಿಡಿದು ಧರಿಸುವ ಬಟ್ಟೆಯವರೆಗೂ ತಂತ್ರಜ್ಞಾನದ ಕೈಚಳಕ ಕೆಲಸ ಮಾಡುತ್ತಿದೆ. ಇವುಗಳನ್ನೆಲ್ಲ ಅಳವಡಿಸಿದರೆ, ಧರಿಸಿದರೆ ಸಾಮಾನ್ಯ ಮನುಷ್ಯನೊಬ್ಬ ಸೂಪರ್‌ಹ್ಯೂಮನ್ ಆಗುತ್ತಾನೆ. ಸಿನಿಮಾಗಳಲ್ಲಿ ನೋಡುವ ಅಭೂತಪೂರ್ವ ಶಕ್ತಿ, ಸಾಮರ್ಥ್ಯ ಆತನಲ್ಲೂ ಮೈದಳೆಯುತ್ತವೆ.  ಅತಿಮಾನುಷ ಶಕ್ತಿಯ ಅವತಾರಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಅಂಥ ಯುಗದತ್ತ ನಮ್ಮ ಪಯಣ ಸಾಗಿದೆ...

ಪವರ್ ಡ್ರೆಸ್ಸಿಂಗ್
1970ರಲ್ಲಿ ಸ್ಟೀವ್ ಆಸ್ಟಿನ್ ಎಂಬುವರು ವಿಮಾನ ದುರಂತಕ್ಕೊಳಗಾಗಿ ದೇಹದ ಅನೇಕ ಅಂಗಗಳನ್ನು ಕಳೆದುಕೊಂಡಿದ್ದರು. ಆಗ ಅಮೆರಿಕದಲ್ಲಿ ಟಿವಿ ಕಾರ್ಯಕ್ರಮವೊಂದು ಪ್ರಸಾರವಾಯಿತು. 'ಜಂಟಲ್‌ಮ್ಯಾನ್, ನಾವು ಇವನನ್ನು ಪುನರ್‌ನಿರ್ಮಿಸುತ್ತೇವೆ. ನಮ್ಮಲ್ಲಿ ತಂತ್ರಜ್ಞಾನವಿದೆ' ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆರಂಭವಾಗಿತ್ತು. ನಂತರ 'ಬಯೋನಿಕ್‌' ಜೋಡಣೆ ಮೂಲಕ ಆಸ್ಟಿನ್‌ಗೆ ಪುನರ್ಜೀವನ ನೀಡಲಾಯಿತು. ಇದು ಆತನಿಗೆ ಸೂಪರ್‌ಹ್ಯೂಮನ್ ಪವರ್ ಅನ್ನು ಒದಗಿಸಿತು. ಗಂಟೆಗೆ 100 ಕಿ.ಮೀ. ಓಡುವ ಸಾಮರ್ಥ್ಯ ಬಂತು. ಆತನ ಬಲಗೈಗೆ ಬುಲ್ಡೋಜರ್‌ನ ಶಕ್ತಿ ಒದಗಿತು. ಅಲ್ಲಿಂದಲೇ ಆರಂಭವಾಯಿತು ಸೂಪರ್‌ಹ್ಯೂಮನ್ ಯುಗ...

ಸೂಪರ್ ಸ್ಯೂಟ್
27,500 ಪೌಂಡ್ ವೆಚ್ಚದ, 23 ಕೆಜಿ ತೂಕದ ಎಚ್‌ಎಎಲ್-5 ಸ್ಯೂಟ್. ಇದನ್ನು ಧರಿಸಿದಾತನಿಗೆ ಆತನ ಸಾಮರ್ಥ್ಯ 10 ಪಟ್ಟು ಅಧಿಕವಾಗುತ್ತದೆ. ಇದು 4 ಸಾವಿರ ಮೀ. ಎತ್ತರದಲ್ಲೂ, ಮಂಜುಗಡ್ಡೆಯಲ್ಲೂ ಕಾರ್ಯನಿರ್ವಹಿಸಬಲ್ಲದು.

ಪೈಜೋಎಲೆಕ್ಟ್ರಿಕ್ ಚರ್ಮ
ನಾಸಾ ಮತ್ತು ಓಕ್ ರಿಜ್ಡ್ ನ್ಯಾಷನಲ್ ಲ್ಯಾಬೊರೇಟರಿ ಫಿಲ್ಮ್‌ಸ್ಕಿನ್ ಅಭಿವೃದ್ಧಿಪಡಿಸಿದವು. ಇಂಗಾಲದ ನ್ಯಾನೋ ಟ್ಯೂಬ್‌ವುಳ್ಳ ಪಾಲಿಮರ್‌ನಿಂದ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಇದನ್ನು ಮಾನವನ ದೇಹಕ್ಕೆ ಅಳವಡಿಸಿದರೆ, ಒಂದು ವೇಳೆ ಚರ್ಮಕ್ಕೆ ಹಾನಿಯಾದರೂ ತಕ್ಷಣವೇ ಅದನ್ನು ಬದಲಾವಣೆ ಮಾಡಬಹುದು. ಮಾನವನ ನೈಜ ಚರ್ಮವನ್ನು ಹೀಗೆ ಮಾಡಲು ಸಾಧ್ಯವಿಲ್ಲ.

ಯೋಚನಾಶಕ್ತಿ ನಿಯಂತ್ರಣ
ಬ್ರೈನ್‌ಗೇಟ್ ಎಂಬ ಸಾಧನವನ್ನು ಮೆದುಳಿನ ಕವಚಕ್ಕೆ ಅಳವಡಿಸಲಾಗುತ್ತದೆ. ಇದು ದೈಹಿಕ ಕ್ರಿಯೆಯನ್ನು ನಿಯಂತ್ರಿಸುವ ಸಣ್ಣಪುಟ್ಟ ನರ ಸಂಕೇತಗಳನ್ನು ಪತ್ತೆಹಚ್ಚುತ್ತದೆ. ಇದನ್ನು ನಂತರ ವಿದ್ಯುದಾವೇಶವುಳ್ಳ ಸಂಕೇತಗಳಾಗಿ ಬದಲಾಯಿಸಿ, ಪ್ರೋಗ್ರಾಂವೊಂದರ ಸಹಾಯದಿಂದ ಧರಿಸಿದಾತ ಏನನ್ನು ಯೋಚಿಸುತ್ತಿದ್ದಾನೆ ಎಂಬುದನ್ನು ಅರಿಯಲಾಗುತ್ತದೆ. ತನ್ನ ರೊಬೋಟಿಕ್ ಕೈಯನ್ನು ಅಲುಗಾಡಿಸುವಂತೆ, ಇ-ಮೇಲ್ ತೆರೆಯುವಂತೆ ಅಥವಾ ಟಿವಿಯನ್ನು ನಿಯಂತ್ರಿಸುವಂತೆ ಹೀಗೆ ಇದು ನೀಡುವ ಸಂಕೇತ ಏನೇ ಆಗಿರಬಹುದು. ಕೆಲಸ ತನ್ನಿಂತಾನೇ ಆಗುತ್ತಿರುತ್ತದೆ.

ಡಿಜಿಟಲ್ ದೃಷ್ಟಿ
ಇದಕ್ಕೆ ಐಟ್ಯಾಪ್ ತಂತ್ರಜ್ಞಾನ ಬಳಸಲಾಗುತ್ತದೆ. ಕಣ್ಣಿಗೆ ಅಳವಡಿಸುವ ಸಾಧನವಿದು. ಸುತ್ತ ಗೋಚರಿಸುವ ಪ್ರದೇಶವನ್ನು ಕಂಪ್ಯೂಟರಿನಲ್ಲಿ ಡಿಜಿಟಲೀಕರಣಗೊಳಿಸಿ ಇದು ಗೋಚರಿಸುವಂತೆ ಮಾಡುತ್ತದೆ. ದೃಶ್ಯವನ್ನು ಡೌನ್‌ಲೋಡ್ ಮಾಡಿಕೊಳ್ಳಲೆಂದೇ ಐಟ್ಯಾಪ್ ಅನ್ನು ವೈರ್‌ಲೆಸ್ ಅಥವಾ ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಕೃತಕ ಸ್ನಾಯು
ಇದು ನ್ಯಾನೋ ಟ್ಯೂಬ್ ಆಧಾರಿತ ಸ್ನಾಯು. ಮಾನವನ ಸ್ನಾಯುಗಿಂತ 100 ಪಟ್ಟು ಹೆಚ್ಚು ಶಕ್ತಿಯುಳ್ಳ ಎಲೆಕ್ಟ್ರಿಕ್ ಉದ್ದೀಪನಕ್ಕೆ ಈ ಸ್ನಾಯು ಪ್ರತಿಕ್ರಿಯಿಸುತ್ತದೆ. ಮೆಥನಾಲ್ ಇಂಧನದಿಂದ ಇದು ಕಾರ್ಯನಿರ್ವಹಿಸುತ್ತದೆ. ಈ ಸ್ನಾಯುಗಳಲ್ಲಿ ನ್ಯಾನೋಟ್ಯೂಬ್‌ಗಳ ಬಂಡಲ್‌ಗಳೇ ಇರುತ್ತವೆ. ಜತೆಗೆ ಲೋಹದ ಫ್ರೇಮ್‌ಗಳು ಮತ್ತು ಮೆಮೊರಿ ಕೂಡ ಅಳವಡಿಸಲಾಗಿರುತ್ತದೆ.

ಚೀತಾ ಕಾಲು
ಚೀತಾ ಫ್ಲೆಕ್ಸ್ ಕಾಲು ಒಂದು ಕಾರ್ಬನ್ ಫೈಬರ್ ಸ್ಪ್ರಿಂಗ್ ಅನ್ನು ಒಳಗೊಂಡಿದ್ದು, ಇದು ಓಡುವ ವೇಗವನ್ನು ಶೇ.30ರಷ್ಟು ಹೆಚ್ಚಿಸುತ್ತದೆ. ಇದೇ ವಿನ್ಯಾಸದ ಕಾಲನ್ನೇ ಪ್ಯಾರಾಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್ ಬಳಸುತ್ತಿದ್ದುದು. ಒಂದು ಚೀತಾ ಕಾಲಿನ ಬೆಲೆ ರು. 8.42 ಲಕ್ಷ. <

ಸೂಪರ್‌ಹೀರೋ ತಂತ್ರಜ್ಞಾನಗಳು
1. ಹೀರೋ- ಬ್ಯಾಟ್‌ಮನ್ ಪವರ್- ಗ್ಲೈಡಿಂಗ್
ಇದು ಗ್ರೈಫೋನ್. ರೆಕ್ಕೆಯಂಥ ಈ ಸಾಧನವನ್ನು ಧರಿಸಿದರೆ ನೀವು ಬ್ಯಾಟ್‌ಮನ್ ಥರ ಎಲ್ಲಿ ಬೇಕೆಂದರಲ್ಲಿ ಹಾರಿಕೊಂಡು, ಜಾರಿಕೊಂಡು ಹೋಗಬಹುದು. ರೆಕ್ಕೆಯ ಅಗಲ 1.8 ಮೀಟರ್. ಕಾರ್ಬನ್ ಫೈಬರ್‌ನಂಥ ಬಾಳಿಕೆಬರುವ ಹಾಗೂ ಹಗುರವಾದ ವಸ್ತುಗಳಿಂದ ತಯಾರಿಸಲಾಗಿದೆ. ಈಗಾಗಲೇ ಜರ್ಮನ್‌ನ ವಿಶೇಷ ಪಡೆಗಳು ಇದನ್ನು ಬಳಸುತ್ತಿವೆ. 30 ಕೆ.ಜಿ. ತೂಕದ ಈ ರೆಕ್ಕೆ ಕಟ್ಟಿಕೊಂಡರೆ, ಯೋಧನು ಪ್ಯಾರಾಚೂಟ್ ತೆರೆಯುವ ಕೊನೇ ಕ್ಷಣದವರೆಗೆ 50 ಕಿ.ಮೀ. ಎತ್ತರಕ್ಕೆ ಹಾರುವ ಸಾಮರ್ಥ್ಯ ಹೊಂದಿರುತ್ತಾನೆ. ಎತ್ತರದಲ್ಲಿರುವಾಗ ಯಾರಾದರೂ ಗುಂಡಿನ ದಾಳಿಗೈದರೆ ತಕ್ಷಣ ಗ್ರೈಫೋನ್ ಕೆಳಮುಖವಾಗಿ ತಿರುಗಿ ಯೋಧನನ್ನು ಕೆಳಕ್ಕಿಳಿಸುತ್ತದೆ.

2. ಹೀರೋ- ಐರನ್ ಮ್ಯಾನ್ ಪವರ್- ರಕ್ಷಣೆ
ಟ್ರೋಜನ್- ಎಸ್ ಸರಣಿಯ ವಸ್ತ್ರಗಳು ಅತ್ಯಂತ ಸಮೀಪದಲ್ಲಿ ಗುಂಡುಹಾರಿಸಿದರೂ ಧರಿಸಿದಾತನನ್ನು ರಕ್ಷಿಸುತ್ತದೆ. 13.6 ಕೆ.ಜಿ. ತೂಕವಿದ್ದರೂ ಇದು ಅತ್ಯಂತ ಹಗುರ ಹಾಗೂ ಚಲನಶೀಲವಾಗಿದ್ದು, ಧರಿಸಿದಾತನಿಗೆ ಓಡಲು, ಪರ್ವತ ಏರಲು ಯಾವುದೇ ತೊಂದರೆಯಾಗದಂತೆ ಸಿದ್ಧಪಡಿಸಲಾಗಿದೆ. ಇದರಲ್ಲಿರುವ ಸುರಕ್ಷಿತ ಪ್ಯಾನೆಲ್‌ಗಳು ಗುಂಡೇಟು, ಚಾಕುವಿನ ಇರಿತದಿಂದ ರಕ್ಷಿಸುವ ಸಾಮರ್ಥ್ಯ ಹೊಂದಿವೆ. ಸಂಪೂರ್ಣ ಟ್ರೋಜನ್ ಸ್ಯೂಟ್‌ನ ದರ ರು. 29.46 ಲಕ್ಷ.

3. ಹೀರೋ- ಸ್ಪೈಡರ್‌ಮ್ಯಾನ್ ಪವರ್- ಆರೋಹಣ
ಪೀಟರ್ ಪಾರ್ಕರ್‌ನಂತೆ ಗೋಡೆಗಳನ್ನೆಲ್ಲ ಹತ್ತಬೇಕೆಂಬ ಆಸೆಯಿದೆಯೇ? ಲಂಬವಾದ ಗೋಡೆಗಳನ್ನು ಹತ್ತಬಲ್ಲಂಥ ರೊಬೋಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಲೈಂಬಿಂಗ್ ಪ್ಯಾಡ್ ಹಾಗೂ ಗೋಡೆಯ ಮೇಲ್ಮೈಯ ನಡುವೆ ಎಲೆಕ್ಟ್ರೋಸ್ಟ್ಯಾಟಿಕ್ ಆಕರ್ಷಣೆ ಉತ್ಪತ್ತಿಮಾಡಲು ಕರೆಂಟ್ ಅನ್ನು ಬಳಸಲಾಗುತ್ತದೆ. ಈ ಕರೆಂಟ್ ರೊಬೋಟ್‌ಗಳು ಬರೋಬ್ಬರಿ 34 ಕೆ.ಜಿ. ತೂಕದ ವಸ್ತುವನ್ನು ಹೊತ್ತುಕೊಂಡು ಗೋಡೆಗಳನ್ನು ಏರಬಲ್ಲವು.

4. ಹೀರೋ- ದಿ ಹಲ್ಕ್ ಪವರ್- ಪುನರುತ್ಪತ್ತಿ
ಶತ್ರುಗಳೊಂದಿಗೆ ಹೋರಾಡುವಾಗ ನಿಮ್ಮ ಒಂದು ಕಾಲು ಮುರಿದುಹೋಯಿತೇ? ಟೆನ್ಷನ್ ಯಾಕೆ? ಆಗಲೇ ಹೊಸ ಕಾಲನ್ನು ಪುನರುತ್ಪತ್ತಿ ಮಾಡಿಕೊಂಡರಾಯಿತು. ಹೌದು. ಇಂಥದ್ದೊಂದು ಶಕ್ತಿಯನ್ನು ಮಾನವನಲ್ಲಿ ತರಲು ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಸಲಮಾಂಡರ್ ಮತ್ತು ಜೀಬ್ರಾ ಮೀನುಗಳ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಇವುಗಳಿಗೆ ಅಂಥ ಶಕ್ತಿಯಿದೆ.

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.