ವಿಜ್ಞಾನ-ತಂತ್ರಜ್ಞಾನ

ಬಾಂಬ್ ಭ್ರಮರ

ಬಾಂಬ್ ಭ್ರಮರ
Published On :

ಹೂವಿಂದ ಹೂವಿಗೆ ಹಾರುತ್ತಾ ಮಕರಂದವನ್ನು ಹೀರುತ್ತಾ ಸವಿಸವಿಯಾದ ಜೇನನ್ನು ನೀಡುವ ಜೇನ್ನೊಣಗಳಿಗೆ ಅದನ್ನು ಬಿಟ್ಟರೆ ಬೇರೇನು ಕೆಲಸ ಎಂದು ನೀವು ಭಾವಿಸಿರುವಿರಿ. ಆದರೆ, ಜೇನ್ನೊಣಗಳೂ ಸೈನಿಕರ ಕೆಲಸ ಮಾಡುತ್ತವೆ.
ಅದು ಹೇಗೆಂದರೆ ನೆಲಬಾಂಬ್‌ಗಳನ್ನು ಶೋಧಿಸುವ ಮೂಲಕ!
ಇದು ನೀವು ನಂಬಲೇಬೇಕಾದ ಸತ್ಯ. 3 ಮೈಲುಗಳಷ್ಟು ದೂರದಲ್ಲಿ ಹುದುಗಿಸಿಟ್ಟಿರುವ ನೆಲಬಾಂಬ್‌ಗಳನ್ನು ಕೇವಲ ವಾಸನೆಯಿಂದಲೇ ಪತ್ತೆಹಚ್ಚುವ ವಿಶೇಷ ಶಕ್ತಿಯಿದೆ ಈ ಜೇನ್ನೊಣಗಳಿಗೆ.

ಸ್ಫೋಟಕದ ವಾಸನೆ ಪತ್ತೆ
ಯುರೋಪ್‌ನ ಕ್ರೋಷಿಯಾದಲ್ಲಿರುವ ಝಗ್ರೇಬ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜೇನ್ನೊಣಗಳಿಗೆ ಸ್ಫೋಟಕ ಪತ್ತೆಹಚ್ಚುವ ತರಬೇತಿ ನೀಡುತ್ತಿದ್ದಾರೆ. ಅದಕ್ಕಾಗಿಯೇ ಜೇನ್ನೊಣಗಳ ಕಾಲೊನಿಯೊಂದನ್ನು ನಿರ್ಮಿಸಿದ್ದಾರೆ. ಸಕ್ಕರೆಯ ಮಿಶ್ರಣಕ್ಕೆ ಸ್ಫೋಟಕಗಳಲ್ಲಿನ ರಾಸಾಯನಿಕಗಳ ವಾಸನೆಯನ್ನು ಸೇರಿಸಿ ಜೇನ್ನೊಣಗಳು ಆ ವಾಸನೆಯನ್ನು ಅರಿಯುವಂತೆ ಮಾಡಲಾಗುತ್ತದೆ. ಈ ತರಬೇತಿ ತಂತ್ರಕ್ಕಾಗಿ ವಿಜ್ಞಾನಿಗಳು ಎಷ್ಟೋ ವರ್ಷಗಳನ್ನು ಸವೆಸಿದ್ದಾರೆ.

ಬಾಂಬ್ ಪತ್ತೆ ಹೇಗೆ?
ಟೆಂಟ್‌ನಲ್ಲಿನ ಜೇನುಹಟ್ಟಿಯ ಒಂದು ಭಾಗದಲ್ಲಿ ಜೇನ್ನೊಣಗಳನ್ನು ಕೂರಿಸಲಾಗುತ್ತದೆ. ನಂತರ ಟೆಂಟ್‌ನ ಸುತ್ತಲೂ ಹಲವೆಡೆ ಅವುಗಳಿಗೆ ಆಹಾರ ಕೇಂದ್ರವನ್ನು ಸಿದ್ಧಮಾಡಲಾಗುತ್ತದೆ. ಆದರೆ, ಅದರಲ್ಲಿ ಕೆಲವು ಕಡೆ ಮಾತ್ರ ಆಹಾರ ಹಾಕಲಾಗುತ್ತದೆ. ಆಹಾರ ಹಾಕಿರುವ ಸ್ಥಳದ ಪಕ್ಕದ ಮಣ್ಣಲ್ಲೇ ಸ್ಫೋಟಕದಲ್ಲಿ ಬಳಸುವ ರಾಸಾಯನಿಕಗಳನ್ನು ಸೇರಿಸಿರಲಾಗುತ್ತದೆ. ವಿಷಯ ಇರುವುದು ಇಲ್ಲೇ. ಆಹಾರದ ವಾಸನೆ ಬಂದೊಡನೆ ಅಲ್ಲಿಗೆ ಜೇನ್ನೊಣಗಳು ಹಾರಿಬರುತ್ತವೆ. ಆದರೆ, ಆಹಾರ ಇರುವೆಡೆಯೆಲ್ಲ ರಾಸಾಯನಿಕದ ವಾಸನೆ ಅವುಗಳ ಮೂಗಿಗೆ ಬಡಿಯುತ್ತವೆ. ಆಗ ರಾಸಾಯನಿಕದ ವಾಸನೆಯನ್ನು ಅವುಗಳು ಗ್ರಹಿಸಲು ಆರಂಭಿಸುತ್ತವೆ. ಅಂಥ ವಾಸನೆ ಎಲ್ಲೇ ಬಡಿದರೂ ಅದೇ ಪ್ರದೇಶದಲ್ಲಿ ಆಹಾರವಿದೆ ಎಂಬ ಭಾವನೆ ಭ್ರಮರಗಳಲ್ಲಿ ಮೂಡುತ್ತವೆ. ಜೇನ್ನೊಣಗಳಿಗೆ ಈ ತರಬೇತಿ ನೀಡಲು ಕೇವಲ 3ರಿಂದ 4 ದಿನಗಳು ಸಾಕು ಎನ್ನುತ್ತಾರೆ ವಿಜ್ಞಾನಿಗಳು. ತರಬೇತಿ ಪಡೆದ ಈ ಜೇನ್ನೊಣಗಳನ್ನು ನಂತರ ವಿವಿಧ ಪ್ರದೇಶಗಳಿಗೆ ಕರೆದೊಯ್ಯಲಾಗುತ್ತದೆ. ಎಲ್ಲಿ ನೆಲಬಾಂಬ್‌ಗಳಿವೆಯೋ ಅಲ್ಲಿ ಸ್ಫೋಟಕಗಳ ವಾಸನೆ ಬರತೊಡಗುತ್ತವೆ. ತಕ್ಷಣ ಆಹಾರದ ಆಸೆಯಿಂದ ಜೇನ್ನೊಣಗಳು ಆ ಪ್ರದೇಶದ ಬಳಿ ತಡಕಾಡಲು ಆರಂಭಿಸುತ್ತವೆ. ಅಂದರೆ, ಅಲ್ಲಿ ನೆಲಬಾಂಬ್ ಇದೆ ಎಂದೇ ಅರ್ಥ. ತಕ್ಷಣ ಆ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ನೆಲಬಾಂಬ್ ಸಮಸ್ಯೆ
90ರ ದಶಕದಲ್ಲಿ ಬಾಲ್ಕನ್ ಪರ್ಯಾಯ ದ್ವೀಪದಲ್ಲಿ ಸ್ವಾತಂತ್ರ್ಯಕ್ಕಾಗಿ ಭಾರಿ ಹಿಂಸಾಚಾರ ನಡೆದಿತ್ತು. ಕ್ರೋಷಿಯನ್ ಸ್ವಾತಂತ್ರ್ಯ ಸಮರದ ವೇಳೆ ಲಕ್ಷಾಂತರ ನೆಲಬಾಂಬ್‌ಗಳನ್ನು ಹುದುಗಿಸಿಡಲಾಗಿತ್ತು. ಕ್ರೋಷಿಯಾದ 683.4 ಚದರ ಕಿ.ಮೀ. ವ್ಯಾಪ್ತಿಯ ಗಣಿಪ್ರದೇಶಗಳಲ್ಲಿ ಈಗಲೂ ಸುಮಾರು 90 ಸಾವಿರಕ್ಕಿಂತಲೂ ಅಧಿಕ ನೆಲಬಾಂಬ್‌ಗಳಿವೆ ಎಂದು ಅಂದಾಜಿಸಲಾಗಿದೆ. ಈ ಸಜೀವ ನೆಲಬಾಂಬ್‌ಗಳು ಈಗಲೂ ಅನಿರೀಕ್ಷಿತವಾಗಿ ಸ್ಫೋಟಿಸಿ ಅನೇಕರ ಸಾವಿಗೆ ಕಾರಣವಾಗುತ್ತಿವೆ. ಅಂಥ ಬಾಂಬ್‌ಗಳನ್ನು ಹೊರತೆಗೆದು ನಿಷ್ಕ್ರಿಯಗೊಳಿಸುವ ಕೆಲಸ ನಡೆಯುತ್ತಿದೆಯಾದರೂ ಅದು ಸಂಪೂರ್ಣವಾಗಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗ 'ಬಾಂಬ್ ಭ್ರಮರ'ಗಳ ನೆರವಿನಿಂದ ನೆಲಬಾಂಬ್‌ಗಳಿರುವ ಪ್ರದೇಶಗಳನ್ನು ಪತ್ತೆಹಚ್ಚಿ ಅವುಗಳನ್ನು ನಿಷ್ಕ್ರಿಯಗೊಳಿಸುವುದೇ ವಿಜ್ಞಾನಿಗಳ ಗುರಿ.
ಹ್ಞಾಂ, ಇನ್ನೊಂದು ವಿಚಾರ ಗೊತ್ತಾ? ಬಾಂಬ್ ಪತ್ತೆಹಚ್ಚುವ ತಮ್ಮ ಕೆಲಸವನ್ನು ಪೂರ್ಣಗೊಳಿಸಿದ ಬಳಿಕ ಜೇನ್ನೊಣಗಳೇನೂ ಹಾರಿ ಹೋಗುವುದಿಲ್ಲ. ಮತ್ತೆ ತಮ್ಮ ಟೆಂಟ್‌ಗೆ ವಾಪಸಾಗುತ್ತವೆ. ರಸವತ್ತಾದ ಜೇನನ್ನು ಉತ್ಪಾದಿಸುವ ಮೂಲವೃತ್ತಿಯಲ್ಲಿ ತೊಡಗುತ್ತವೆ!

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.