ಜೀರುಂಡೆಯಿಂದ... ಜೀವಶಾಸ್ತ್ರದೆಡೆಗೆ...!

'ನೀನೊಬ್ಬ ನಿಷ್ಪ್ರಯೋಜಕ. ಕೆಲಸಕ್ಕೆ ಬಾರದ ಮಡ್ಡಿ; ಬೇಡದ ಕಸ-ಕಡ್ಡಿ, ಹಾಳುಮೂಳು ತಂದು ಮನೆಯನ್ನು ಕಸದ ತೊಟ್ಟಿ ಮಾಡುತ್ತಿ' ಅಂತ ಅಪ್ಪ ಸದಾ ಮೊಟಕುತ್ತಿದ್ದರು. ಕಾರಣ; ಇವನ ಓರಗೆಯವರೆಲ್ಲಾ ಆಟದ ಸಾಮಾನು, ಓದಿನ ಸಾಮಗ್ರಿ ಕೂಡಿಟ್ಟರೆ, ಈತ ಕಪ್ಪೆಚಿಪ್ಪು, ಕವಡೆ, ಕಲ್ಲಿನ ಚೂರು, ಯಾವುಯಾವುದೋ ಹುಳು-ಹುಪ್ಪಡಿಗಳನ್ನು ಹುಡುಕಿ ತಂದು ತನ್ನ ಕೋಣೆಯಲ್ಲಿ ಭದ್ರಪಡಿಸುತ್ತಿದ್ದ. ಆ ಕೆಲಸದಲ್ಲಿಯೇ ಆತನಿಗೆ ಸಂತೃಪ್ತಿ.
ಶಾಲೆಯ ಪಾಠ-ಪ್ರವಚನವೆಂದರೆ ನಿರಾಸಕ್ತಿ. ಓದುವುದಿರಲಿ, ವಿಷಯ ಗ್ರಹಿಸುವುದರಲ್ಲಿಯೂ ಆತ ಚುರುಕಾಗಿರಲಿಲ್ಲ. ಇತರ ಹುಡುಗರೊಡನೆ ಬೆರೆತು ಆಟ-ಪಾಠಗಳಲ್ಲಿ ಭಾಗವಹಿಸದೇ ತೆಪ್ಪಗಿರುತ್ತಿದ್ದ. ಈ ಕಾರಣದಿಂದಲೇ ಏನೋ...! ಉಪಾಧ್ಯಾಯರು ಇವನನ್ನು ದಡ್ಡನೆಂದು ಜರಿದರೆ; ಸಹಪಾಠಿಗಳು ಈತನನ್ನು ಪರಿಹಾಸ್ಯ ಮಾಡುತ್ತಲೇ ಹೋದರು. ಒಟ್ಟಾರೆ ಆತನಿಗೆ ನಾಲ್ಕು ಗೋಡೆಗಳ ಮಧ್ಯದ ಸಾಂಪ್ರದಾಯಿಕ ವಿದ್ಯೆ ತಲೆಗೆ ಹತ್ತಲೇ ಇಲ್ಲ.
ಹಾಗಂತ ಸುಮ್ಮನುಳಿಯುವುದು ಆತನ ಜಾಯಮಾನವೇ ಅಲ್ಲ. ಆತನಿಗೆ ಪ್ರಕೃತಿಯೇ ಗುರು. ಅದರೊಂದಿಗೇ ತಾದಾತ್ಮನಾಗುವ ಗುಣ. ಹೀಗಿದ್ದವನಲ್ಲೊಂದು ಚುರುಕಾದ ಅವಲೋಕನ ಸಾಮರ್ಥವಿತ್ತು. ನಿಸರ್ಗದ ಬಗೆಗಂತೂ ತೀರದ ಕುತೂಹಲ. ಸುಪ್ರಸಿದ್ಧ ವೈದ್ಯರಾದ ತಂದೆಗೆ ಮಗನ ನಡವಳಿಕೆ ಸರಿ ಕಾಣುತ್ತಿರಲಿಲ್ಲ. ಆತ ವೈದ್ಯಶಾಸ್ತ್ರವನ್ನು ಅಧ್ಯಯನ ಮಾಡಬೇಕೆಂಬುದು ಅವರ ಇಚ್ಛೆಯಾಗಿತ್ತು. ಅದಕ್ಕಾಗಿಯೇ ಆತನನ್ನು ವೈದ್ಯಶಾಸ್ತ್ರ ಅಭ್ಯಾಸ ಮಾಡಲು ಪ್ರೋತ್ಸಾಹಿಸಿದರು.
ಮೃದು ಹೃದಯಿಯಾದ ಆತ ರೋಗಿಗಳು ಬಗೆಬಗೆಯ ಬೇನೆಯಿಂದ ನರಳುವುದು ಕಂಡು ತಲ್ಲಣಿಸುತ್ತಿದ್ದ. ಒಮ್ಮೆ ಚಿಕ್ಕ ಮಗುವೊಂದಕ್ಕೆ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭ... ಆಗಿನ್ನೂ ಅರಿವಳಿಕೆ ಮದ್ದು ತಿಳಿದಿರಲಿಲ್ಲ. ವೈದ್ಯಕೀಯ ವಿದ್ಯಾರ್ಥಿಯಾದ ಆತ ಶಸ್ತ್ರಚಿಕಿತ್ಸೆ ನೋಡುತ್ತಿದ್ದ. ರೋಗಿಯ ಭಯಂಕರ ಅರಚಾಟ ಕೇಳಲಾಗದೇ, ಆ ದೃಶ್ಯ ನೋಡಲಾಗದೇ ಆ ಸ್ಥಳದಿಂದ ಓಡಿಹೋದ!
ತನ್ನ ಮಗ ಈ ಕಾರ್ಯದಲ್ಲೂ ಸಫಲನಾಗದ್ದು ಕಂಡ ತಂದೆ, ಆತನನ್ನು ಧರ್ಮಶಾಸ್ತ್ರ ಕಲಿಯಲು ಕಳುಹಿಸಿದರು. ಹೀಗಾದರೂ ಆತ ಬದುಕು ಕಂಡುಕೊಳ್ಳಬಹುದೆಂಬ ವಿಶ್ವಾಸ ಅವರದು. ಆದರೆ ಅದೂ ಆತನಿಗೆ ರುಚಿಸಲಿಲ್ಲ. ಈ ಎಲ್ಲ ಕಲಿಕೆಗಾಗಿ ತಾನು ಅನವಶ್ಯಕವಾಗಿ ಬದುಕಿನ ಕೆಲಕಾಲ ವ್ಯಯಿಸಿದೆನೆಲ್ಲಾ ಎಂದು ಚಿಂತಿಸಿದ ಆತ, ಮತ್ತೆ ತನ್ನ ಆಸಕ್ತಿಯ ವಿಷಯವಾದ ಪ್ರಕೃತಿಯ ಕಡೆಗೆ ಮುಖ ಮಾಡಿದ. ಪ್ರಕೃತಿಯ ಕುರಿತ ಆತನ ಅವಲೋಕನ, ಅಧ್ಯಯನ ನಿರಾಂತಕವಾಗಿ ಮುಂದುವರಿಯಿತು.
ಹೀಗಿರುವಾಗೊಮ್ಮೆ ಎರಡು ಬೇರೆಬೇರೆ ಬಗೆಯ ಬಣ್ಣದ ಜೀರುಂಡೆಗಳು ಆತನ ಕಣ್ಣಿಗೆ ಬಿದ್ದವು. ಒಂದೊಂದು ಕೈಯಲ್ಲಿ ಒಂದೊಂದು ಜೀರುಂಡೆ ಹಿಡಿದುಕೊಂಡವನಿಗೆ, ಅಲ್ಲೇ ಇನ್ನೊಂದು ಬಗೆಯ ಜೀರುಂಡೆ ಕಾಣಬೇಕೆ...! ಎರಡೂ ಕೈಯಲ್ಲಿ ಒಂದೊಂದು. ಆದರೇನಂತೆ ಮೂರನೆಯದು ಅದು ಬೇಕೇಬೇಕು. ತಕ್ಷಣ ಆತ ಮಾಡಿದ್ದೇನು ಗೊತ್ತೇ...! ಹೆಚ್ಚು ಯೋಚಿಸದ ಆತ ತಟ್ಟನೆ ತನ್ನ ಬಲಗೈಲಿದ್ದ ಕೀಟವನ್ನು ಬಾಯಲ್ಲಿ ಹಾಕಿಕೊಂಡು, ಮೂರನೆಯದರತ್ತ ಕೈ ಚಾಚಿದ. ಅಷ್ಟರಲ್ಲಿ ಬಾಯಲ್ಲಿದ್ದ ಕೀಟ ಅತಿ ಖಾರದ ರಸವನ್ನು ಸ್ರವಿಸಿಬಿಟ್ಟಿತು. ಉರಿ ತಡೆಯದಾದ ಆತ ಉಗುಳಿ ಬಿಟ್ಟ. ಮೂರನೆಯದು ಕೈ ತಪ್ಪಿತಲ್ಲ ಎಂದು ಪರಿತಪಿಸಿದ!
ಇಂಥ ಅವ್ಯಾಸವಿದ್ದ ಆತ ಮುಂದೆ ಒಬ್ಬ ಪ್ರಕೃತಿ ಶಾಸ್ತ್ರಜ್ಞನಾಗಿ ರೂಪುಗೊಂಡ. 'ಈ ಜಗತ್ತಿನಲ್ಲಿ ಜೀವಿಗಳಿಗೆ ತಕ್ಕಂತೆ ಆಹಾರ ಹಾಗೂ ವಾಸಿಸಲು ಜಾಗ ಅಪಾರ ಪ್ರಮಾಣದಲ್ಲಿಲ್ಲ. ಅವು ಮಿತಿಯಲ್ಲಿದೆ. ಈ ಕಾರಣದಿಂದ ಜೀವಿಗಳು ಬದುಕಲು ಪರಸ್ಪರ ಹೋರಾಡಬೇಕಾಗುತ್ತದೆ. ಈ ಸಂಗ್ರಾಮದಲ್ಲಿ ದುರ್ಬಲ ಜೀವಿಗಳು ನಾಶವಾದರೆ, ಬಲಶಾಲಿ ಜೀವಿಗಳು (ಖ್ಡ್ಠಢ್ಝಢಛಟ ್ಟಜಿ ಝಿಜ ಜ್ಝಿಡಿಡಿಜಡಡಿ) ಉಳಿದುಕೊಳ್ಳುತ್ತವೆ' ಎಂದ.
'ಸಕಲ ಪ್ರಾಣಿಗಳು ಅನುಕ್ರಮವಾಗಿ ವಿಕಾಸಗೊಳ್ಳುತ್ತಾ, ವೃದ್ಧಿ ಹೊಂದುತ್ತಾ ಬಂದಿವೆ. ಕಾಲ ಕಳೆದಂತೆ ವಾತಾವರಣದಲ್ಲಿಯೂ ಬದಲಾವಣೆಗಳಾಗುತ್ತವೆ. ಈ ಪರಿಣಾಮದಿಂದ ಜೀವಿಗಳಲ್ಲಿಯೂ ನಿಧಾನ ಗತಿಯಲ್ಲಿ ಪರಿವರ್ತನೆಯಾಗುತ್ತದೆ' ಎಂದ. ಇದು ಮುಂದೆ 'ವಿಕಾಸವಾದ'ವೆಂದು ಪ್ರಸಿದ್ಧಿಯಾಯಿತು. ಮಂಗನಿಂದ ಮಾನವನ ವಿಕಾಸವೆಂದ ಆತ, 'ಮಾನವ ಕಾಡು ಪ್ರಾಣಿಗಳಿಂದ ಕಾಲಕ್ರಮೇಣ ಪ್ರಕೃತಿಯ ನಿಯಮಾನುಸಾರವಾಗಿ ರೂಪುಗೊಂಡ ಸುಸಂಸ್ಕೃತ' ಎಂದು ತಿಳಿಸಿದ. ಈ ಮಹಾನ್ ವಿಜ್ಞಾನಿಯೇ ಆಧುನಿಕ ಜೀವವಿಜ್ಞಾನದ ಪಿತಾಮಹ 'ಚಾರ್ಲ್ ಡಾರ್ವಿನ್'!
- ಹೊಸ್ಮನೆ ಮುತ್ತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


