ಬಾಹ್ಯಕಸ
ತ್ಯಾಜ್ಯ ವಿಲೇವಾರಿಗೆ ಮಾನವ ಭೂ ಪ್ರದೇಶ, ನದಿ, ಸಮುದ್ರಗಳನ್ನಷ್ಟೇ ಗುರಿಯಾಗಿಸಿಕೊಂಡಿದ್ದಾನೆ ಅಂದುಕೊಳ್ಳಬೇಡಿ.

ತ್ಯಾಜ್ಯ ವಿಲೇವಾರಿಗೆ ಮಾನವ ಕೇವಲ ಭೂ ಪ್ರದೇಶ, ನದಿ, ಸಮುದ್ರಗಳನ್ನಷ್ಟೇ ಗುರಿಯಾಗಿಸಿಕೊಂಡಿದ್ದಾನೆ ಅಂದುಕೊಳ್ಳಬೇಡಿ. ಆತ ಬೇಡದ ವಸ್ತುಗಳನ್ನು ಬಾಹ್ಯಾಗಸಕ್ಕೂ ಒಗೆದು ಮಲಿನಗೊಳಿಸಿದ್ದಾನೆ!
ಅಲ್ಲಿ ಚೆದುರಿ ಹೋದ ಚೂರುಗಳ ರಾಶಿಯೇ ಬರೋಬ್ಬರಿ. ಸಾಸಿವೆ ಕಾಳಿನಿಂದ ಫುಟ್‌ಬಾಲ್ ಗಾತ್ರದವರೆಗೆ ವೈವಿಧ್ಯಮಯ ಲಕ್ಷ ಲಕ್ಷ ತುಣುಕುಗಳು, ಹಳೇ ಉಪಗ್ರಹಗಳ ಅವಶೇಷಗಳಾಗಿರುವ ಅವು ಭೂಮಿಯ ಸುತ್ತ ಕಕ್ಷಾಯಿಸುತ್ತಿವೆ. ವೇಗವಾಗಿ ಸಾಗುವ ಅಂತರಿಕ್ಷ ನೌಕೆಯೊಂದಕ್ಕೆ ಬಣ್ಣದ ಚೂರೊಂದು ಬಡಿದರೂ ಘೋರ ಅವಘಡವೇ!
ಬಾಹ್ಯಾಕಾಶ ನೌಕೆಯನ್ನು ಉಡಾಯಿಸುವ ಹಲವು ಹಂತಗಳಲ್ಲಿ ಕಸ, ರದ್ದಿ ಹೊರಬೀಳುವುದು. ನೌಕೆ ಕಕ್ಷಾಯಿಸುವಾಗ ಸ್ಫೋಟಗೊಂಡರಂತೂ ಅಪಾರ ಪ್ರಮಾಣದಲ್ಲಿ ತ್ಯಾಜ್ಯದ ಉತ್ಪತ್ತಿ. ಉಪಗ್ರಹವನ್ನು ಕಕ್ಷೆಯಲ್ಲಿರಿಸುವಾಗ ಖಾಲಿಯಾದ ಬೂಸ್ಟರ್‌ಗಳು, ರಾಕೆಟ್‌ನ ಮೂತಿ ಭಾಗ ದೂರಕ್ಕೆ ಚಿಮ್ಮಿ ಹೋಗುವುದು ಇದ್ದಿದ್ದೇ. ಜಖಂಗೊಂಡ ಉಪಗ್ರಹಗಳು, ನಿರುಪಯುಕ್ತ ಉಪಗ್ರಹಗಳು ಕಕ್ಷೆಯಲ್ಲೇ ಸಹಸ್ರಾರು ವರ್ಷಗಳು ಉಳಿದಾವು. ಜಗತ್ತಿನ ನಾನಾ ರಾಷ್ಟ್ರಗಳು ಪೈಪೋಟಿಯಲ್ಲಿ ವಿವಿಧೋದ್ದೇಶಗಳಿಗೆ ಉಪಗ್ರಹಗಳನ್ನು ಉಡಾಯಿಸುತ್ತಲೇ ಇವೆ. ಪರಿಣಾಮವಾಗಿ ಬಾಹ್ಯಾಕಾಶದಲ್ಲಿ ಅಪಾರ ಪ್ರಮಾಣದಲ್ಲಿ ಕಸದ ರಾಶಿ ಒಂದೇ ಸಮನೆ ಶೇಖರಗೊಳ್ಳುತ್ತಿದೆ. ಸಹಜವಾಗಿಯೇ ಘರ್ಷಣೆಯ ಆತಂಕವೂ ತೀವ್ರವಾಗುತ್ತಿದೆ.
ಕಸದ ವಿಲೇವಾರಿ ಹೇಗೆ?
ಒಂದು ಯೋಜನೆ ಹೀಗಿದೆ. ವಿಶೇಷವಾಗಿ ಸಜ್ಜಾದ ಉಪಗ್ರಹವೊಂದು ಭೂಮಿಯ ಸುತ್ತ ಪರಿಭ್ರಮಿಸುತ್ತ ಲೇಸರ್ ಕಿರಣ ಹಾಯಿಸಿ ತ್ಯಾಜ್ಯದ ತುಣುಕುಗಳನ್ನು ನಾಶಪಡಿಸುವುದು. ಆ ಕಿರಣ, ತುಣುಕು ಹೇಳ ಹೇಸರಿಲ್ಲದಂತೆ ಧ್ವಂಸವಾಗುವಷ್ಟು ಶಕ್ತಿಯುತವಾಗಿರಬೇಕಷ್ಟೆ. ಇನ್ನು ರೇಡಾರ್‌ಗಳು ದೊಡ್ಡ ಗಾತ್ರದ ವಸ್ತುಗಳ ಮೇಲೆ ಹದ್ದುಗಣ್ಣಿರಿಸಿ ಸಾಕಷ್ಟು ಮುಂಚಿತವಾಗಿಯೇ ಉಪಗ್ರಹಗಳಿಗೆ ಎಚ್ಚರಿಕೆ ನೀಡಬೇಕು. ಉಪಗ್ರಹಗಳು, ಗಗನನೌಕೆಗಳು, ಅಂತರಿಕ್ಷ ನಿಲ್ದಾಣಗಳನ್ನು ವಿಶೇಷ ಪಿಂಗಾಣಿ ತಂತುವಿನಿಂದ ಹೊದಿಸಿರುವುದು ಕ್ಷೇಮಕರ. ಇದರಿಂದ ತ್ಯಾಜ್ಯ ಪದಾರ್ಥಗಳ ಢಿಕ್ಕಿಯಿಂದ ಪರಿಣಮಿಸುವ ಆಘಾತವನ್ನು ನೌಕೆ ತಕ್ಕಮಟ್ಟಿಗಾದರೂ ತಡೆದುಕೊಂಡೀತು.
ವಿಜ್ಞಾನಿಗಳ ಯೋಜನೆಗಳು ಕಟ್ಟು ಕಥೆಗಳನ್ನೂ ಮೀರಿಸುತ್ತವೆ. ರೊಬಾಟ್ ಅಥವಾ ಯಂತ್ರಮಾನವರ ಕೈನಲ್ಲಿ ಪೊರಕೆಗಳನ್ನಿಟ್ಟು 'ಹೋಗಿ ಗುಡಿಸಿ ನೇರವಾಗಿ ನಮ್ಮ ಅಂತರಿಕ್ಷ ನಿಲ್ದಾಣಕ್ಕೆ ರದ್ದಿ ತಂದು ಬಿಡಿ. ಇಲ್ಲಿ ಹೇಗೂ ಮರುಬಳಕೆ ಘಟಕಗಳುಂಟಲ್ಲ...' ಎನ್ನುವುದು.
ಅಂದಹಾಗೆ ಇಂದಿಗೆ ಭೂಮಿಯನ್ನು ಕಕ್ಷಾಯಿಸುತ್ತಿರುವ ವ್ಯರ್ಥ ಪದಾರ್ಥಗಳ (4 ಕೋಟಿ ತುಣುಕುಗಳೆನ್ನಿ!) ಪೈಕಿ ಬಹುತೇಕ 10 ಸೆಂ.ಮೀ.ಗೂ ದೊಡ್ಡ ಗಾತ್ರದವು. 'ಸ್ಪೇಸ್ ಶಟಲ್' (ವ್ಯೂಮ ಲಾಳೆ)ನಂಥ ಗಗನನೌಕೆಗಳು ಅಗಾಧ ವೇಗದಲ್ಲಿ ಸಾಗುತ್ತವೆ. ಒಂದು ವೇಳೆ ಅವು ತಾಜ್ಯ ತುಣುಕುಗಳೊಂದಿಗೆ ಘರ್ಷಣೆ ಹೊಂದಿದರೆ ಫಲಶ್ರುತಿ ಅತ್ಯಂತ ಅಪಾಯಕಾರಿ. ಏಕೆಂದರೆ ನೌಕೆಗೆ ಬಡಿಯುವ ಸಣ್ಣ ಚೂರು ಕೂಡಾ ತಾಸಿಗೆ 40,000 ಕಿ.ಮೀ. ವೇಗದಲ್ಲಿರುತ್ತದೆ. ನೌಕೆಯ ಕಿಟಕಿ ಧ್ವಂಸಗೊಳ್ಳಲು ಈ ಹೊಡೆತ ಸಾಕು! ನೌಕೆಯೊಳಗೆ ದಿಢೀರನೆ ಒತ್ತಡವಿಳಿದು ಎಲ್ಲ ಗಗನಯಾತ್ರಿಗಳೂ ಬದುಕಿಗೆ ವಿದಾಯ ಹೇಳುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಅಂತರಿಕ್ಷವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ವಿಶ್ವ ಪ್ರಜೆಗಳೆಲ್ಲರ ಹೊಣೆ.
- ಬಿಂಡಿಗನವಿಲೆ ಭಗವಾನ್
---
ಸಂಖ್ಯಾ ಕೌತುಕ
- ಮ್ಯಾಮ್ಮಲ್ ಜಾತಿಯಲ್ಲಿ ಜಿಗಿಯಲಾಗದ ಏಕೈಕ ಪ್ರಾಣಿ ಆನೆ.
- ತಲೆಯುಳ್ಳ ಹಾವು ಜನಿಸಿದರೆ, ಆಹಾರಕ್ಕಾಗಿ ಪರಸ್ಪರ ಕಿತ್ತಾಟ ನಡೆಸುತ್ತವೆ.
- ನೀಲಿ ವೇಲ್ ನಿತ್ಯ ಇಷ್ಟು ಟನ್ ಆಹಾರ ಸೇವಿಸುತ್ತವೆ.
- ಮಾನವ ತನಗೆ ಅರಿವಿಲ್ಲದೆ ನಿತ್ಯ ಶೇಕಡಾ ತಣ್ಣನೆ ನೀರು ಕುಡಿಯುತ್ತಾನೆ.
- ಮಾನವನ ಮೂಳೆ ಉಕ್ಕಿಗಿಂತ ಇಷ್ಟು ಪಟ್ಟು ಗಟ್ಟಿ.
- ಕಾಲುಗಳಿರುವ ಜೀವಿಗಳಲ್ಲಿ ಜಿರಳೆಯೇ ಅತಿವೇಗಿ.
- ಆರೋಗ್ಯವಂತ ಮನುಷ್ಯ ಇಷ್ಟು ನಿಮಿಷಗಳಲ್ಲಿ ನಿದ್ರೆಗೆ ಜಾರುತ್ತಾನೆ.
- ಒಂದು ಸೆಕೆಂಡಿನಲ್ಲಿ ನಮ್ಮ ದೇಹದಲ್ಲಿ ಇಷ್ಟು ಮಿಲಿಯನ್ ರಕ್ತಕಣಗಳು ಹುಟ್ಟುತ್ತವೆ.
- ಬಲಗೈ ಬಲವಿರುವ ಮನುಷ್ಯ ಎಡಗೈಪ್ರಿಯರಿಗಿಂತ ಇಷ್ಟು ವರ್ಷ ಜಾಸ್ತಿ ಬದುಕುತ್ತಾರೆ.
- ಪತ್ರಕ್ಕೆ ಅಂಟಿಸಲು ಸ್ಟ್ಯಾಂಪ್ ನೆಕ್ಕುವಾಗ ಇಷ್ಟು ಕ್ಯಾಲರಿ ಖರ್ಚಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


