ನನ್ನ ಮೇಲೆ ನಿರಂತರ ಆರೋಪ ಮಾಡಲು ಕುಮಾರಸ್ವಾಮಿ RSS ನಿಂದ ಗುತ್ತಿಗೆ ಪಡೆದಿದ್ದಾರೆಯೇ?: ಪ್ರಿಯಾಂಕ್ ಖರ್ಗೆ; Video
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದಾಖಲೆಗಳು ಮತ್ತು ವಾಸ್ತವಾಂಶಗಳಿಲ್ಲದೆ ಮಾತನಾಡುವುದಕ್ಕೆ ಹಾಗೂ ‘ಹಿಟ್ ಆ್ಯಂಡ್ ರನ್’ ಮಾಡುವುದಕ್ಕೆ ಒಗ್ಗಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಹಾಲಿ ಕೇಂದ್ರ ಸಚಿವರಾಗಿ ಅವರು ಮಾತನಾಡಬೇಕಾದ ರೀತಿಯಲ್ಲಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.

ಬೆಂಗಳೂರು: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ತಳ್ಳಿಹಾಕುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ತಮ್ಮನ್ನು ಗುರಿಯಾಗಿಸಿಕೊಂಡು ಆರೋಪ ಮಾಡಲು ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ನಿಂದ ಗುತ್ತಿಗೆ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು ದಾಖಲೆಗಳು ಮತ್ತು ವಾಸ್ತವಾಂಶಗಳಿಲ್ಲದೆ ಮಾತನಾಡುವುದಕ್ಕೆ ಹಾಗೂ ‘ಹಿಟ್ ಆ್ಯಂಡ್ ರನ್’ ಮಾಡುವುದಕ್ಕೆ ಒಗ್ಗಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಹಾಗೂ ಹಾಲಿ ಕೇಂದ್ರ ಸಚಿವರಾಗಿ ಅವರು ಮಾತನಾಡಬೇಕಾದ ರೀತಿಯಲ್ಲಿ ಮಾತನಾಡುತ್ತಿಲ್ಲ. ಅವರು ಇತ್ತೀಚೆಗೆ ಆರ್‌ಎಸ್‌ಎಸ್ ಕಚೇರಿಗೆ ತೆರಳಿದ್ದರು ಎಂಬ ಸುದ್ದಿ ಇದೆ. ಅಲ್ಲಿ ಅವರಿಗೆ ಯಾವುದಾದರೂ ಗುತ್ತಿಗೆ ಪಡೆದಿರಬಹುದು. ನಮ್ಮನ್ನು, ಅದರಲ್ಲೂ ನನ್ನನ್ನು ಗುರಿಯಾಗಿಸಲು ಆರ್‌ಎಸ್‌ಎಸ್ ಮತ್ತು ಅಮಿತ್ ಶಾ ಅವರಿಗೆ ಗುತ್ತಿಗೆ ನೀಡಿರಬಹುದು ಎಂದು ಆರೋಪಿಸಿದರು.
ಇತ್ತೀಚಿನವರೆಗೆ ತಾವು ನಿರ್ವಹಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯಲ್ಲಿ 24 ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ (AEE) ನೇಮಕಾತಿಗೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವರು, ಕರ್ನಾಟಕ ಲೋಕಸೇವಾ ಆಯೋಗ (KPCS)ವೇ 24 ಎಇಇಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆರೋಪಗಳ ಕುರಿತು ಪರಿಶೀಲಿಸಲು ಮೊದಲು ಮೂವರು ಸದಸ್ಯರ ಸಮಿತಿಯನ್ನು ಹಾಗೂ ನಂತರ ಅದೇ ವಿಚಾರದ ಕುರಿತು ಪರಿಶೀಲಿಸಲು ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು ಎಂದು ತಿಳಿಸಿದರು.
ಪರೀಕ್ಷೆ ನಡೆಸುವ ಜವಾಬ್ದಾರಿ ಯಾರದ್ದು? ಅದು ಆರ್‌ಡಿಪಿಆರ್ ಇಲಾಖೆಯದ್ದೇ? 22/02/2024ರಂದು ಅಂತಿಮ ಆಯ್ಕೆ ಪಟ್ಟಿಯನ್ನು ತಡೆಹಿಡಿಯುವಂತೆ ಆರ್‌ಡಿಪಿಆರ್ ಇಲಾಖೆಗೆ ಅವರು ಪತ್ರ ಬರೆದಿದ್ದರು. ಆದರೆ ನಮಗೆ ಪತ್ರ ಬರೆಯುವ ಬದಲು, 2020ರ ಸಾಮಾನ್ಯ ನೇಮಕಾತಿ ನಿಯಮಗಳ ಪ್ರಕಾರ, ಹಲವು ನ್ಯಾಯಾಲಯಗಳು ನೀಡಿರುವ ತೀರ್ಪುಗಳಂತೆ ಹಾಗೂ ನಮಗೆ ಇತ್ತೀಚೆಗೆ ದೊರೆತಿರುವ ಅವರ ತನಿಖಾ ವರದಿಯ ಆಧಾರದ ಮೇಲೆ, ಅವರೇ ಈ ವರದಿಯನ್ನು ರದ್ದುಗೊಳಿಸಬಹುದಿತ್ತು. ಅವರು ಕ್ರಮ ಕೈಗೊಳ್ಳಬಹುದಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ವರದಿಯ ಬಗ್ಗೆಯೂ ಏನನ್ನೂ ಹೇಳಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಒಎಂಆರ್ ಉತ್ತರ ಪತ್ರಿಕೆಗಳ ಸಂರಕ್ಷಕ ಕೆಪಿಎಸ್‌ಸಿಯೇ ಆಗಿತ್ತು. ಆರ್‌ಡಿಪಿಆರ್ ಇಲಾಖೆ ಹೊರಡಿಸಿದ್ದ ನೇಮಕಾತಿ ಆದೇಶವು ಷರತ್ತುಬದ್ಧವಾಗಿದ್ದು, ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಹಲವು ಇಲಾಖೆಗಳು ಕೂಡ ಷರತ್ತುಬದ್ಧ ಆದೇಶಗಳನ್ನು ನೀಡಿವೆ. ಇದರಲ್ಲಿ ಕಾನೂನುಬಾಹಿರವಾದದ್ದು ಏನು? ಕೆಪಿಎಸ್‌ಸಿಗೆ ಸಂಬಂಧಿಸಿದ ಈ ವಿಚಾರಗಳಲ್ಲಿ ನನ್ನ ಪಾತ್ರ ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಇದೆ ಎಂದು ಸಾಬೀತಾದರೆ, ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



