ಕುಮಾರಸ್ವಾಮಿ 'ಗೆಣಸು' ಕೆತ್ತುತ್ತಿರಲಿಲ್ಲ, ನಿಮ್ಮ ಅಕ್ರಮದ ಬೇರು ಕೀಳ್ತಿದ್ದರು; ಬಚ್ಚಲುಬಾಯಿ ಬಾಲಕೃಷ್ಣಗೆ ಆಸ್ಕರ್ ಪ್ರಶಸ್ತಿ ಕೊಡಬೇಕು!
ಹೊಸ ಯಜಮಾನರ ಮೆಚ್ಚುಗೆ ಗಳಿಸಲು "ನಮ್ಮವರು ಅನ್ನೋಕೆ ಅಸಹ್ಯ ಆಗುತ್ತೆ" ಎಂದು ನಾಲಿಗೆ ಹರಿಬಿಡುತ್ತಿರುವುದು ಹಾಸ್ಯಾಸ್ಪದ. ಕೆಲಸ ಇಲ್ಲದವರು ಯಾರು? ಸಂವಿಧಾನಕ್ಕೆ ವಂಚನೆ ಮಾಡಿದವರು ಯಾರು ? ಈಗ ಆ ಭ್ರಷ್ಟರ ಬೂಟು ಪಾಲಿಶ್ ಮಾಡುತ್ತಿರುವವರು ಯಾರು ?

ಬೆಂಗಳೂರು: 2007 ರಲ್ಲಿ ಕುಮಾರಸ್ವಾಮಿ ಅವರು 'ಗೆಣಸು' ಕೆತ್ತುತ್ತಿರಲಿಲ್ಲ; ನಿಮ್ಮ ನಾಯಕರ ಅಕ್ರಮದ ಬೇರು ಕೆತ್ತುತ್ತಿದ್ದರು, ಬಚ್ಚಲುಬಾಯಿ ಬಾಲಕೃಷ್ಣ ರಾಜಕೀಯ ನಿಷ್ಠೆ ಬದಲಾದ ತಕ್ಷಣ ಹಳೆಯ ನೆನಪುಗಳೂ ಮಾಸಿಹೋದವೇ? ಎಂದು ಜೆಡಿಎಸ್ ಕಿಡಿ ಕಾರಿದೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್ 30.08.2007 ರಂದು: ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಕ್ಯಾಬಿನೆಟ್ ನೋಟ್ 429/2007 ರ ಮೂಲಕ ನೈಸ್ ಸಂಸ್ಥೆಯು ರಸ್ತೆ ಮತ್ತು ಇಂಟರ್‌ಚೇಂಜ್ ಭೂಮಿಯನ್ನು ಮಾರಾಟ ಮಾಡದಂತೆ ನಿಷೇಧ ಹೇರಿ, ಡಿಕೆ ಶಿವಕುಮಾರ್ ಮಾಡಿಕೊಂಡಿದ್ದ 09.08.2002 ರ ಅಕ್ರಮ "ತ್ರಿಪಕ್ಷೀಯ ಒಪ್ಪಂದ"ವನ್ನು ರದ್ದುಪಡಿಸಲು ಆದೇಶಿಸಿದ್ದರು! ಆಗ ನೀವೂ ಅದೇ ಪಕ್ಷದಲ್ಲಿ ಚಪ್ಪಾಳೆ ತಟ್ಟುತ್ತಿರಲಿಲ್ಲವೇ ? ಎಂದು ಪ್ರಶ್ನಿಸಿದೆ.
2018 ರಲ್ಲಿ: ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರದಲ್ಲಿ ನಿಮ್ಮ ಈಗಿನ ಸಾಹೇಬರೇ ಪ್ರಭಾವಿ ಸಚಿವರಾಗಿ ನೈಸ್ ಫೈಲ್‌ಗಳಿಗೆ ಅಡ್ಡಗಾಲು ಹಾಕಿಕೊಂಡು ಕೂತಿರಲಿಲ್ಲವೇ ? ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ" ಎನ್ನುವ ಬಾಲಕೃಷ್ಣ ₹3 ಲಕ್ಷ ಕೋಟಿ ನಷ್ಟ ಮತ್ತು ಡಿಕೆ ಶಿವಕುಮಾರ್ ಅವರ 1,444 ಕೋಟಿ ಅಕ್ರಮ ಆಸ್ತಿಗಳಿಕೆ ನಿಮಗೆ 'ಇಲಿ'ಯಂತೆ ಕಾಣಿಸುತ್ತಿದೆಯೇ ? ರೈತರ ಭೂಮಿ ನುಂಗಿದ ಈ ನೈಸ್ "ಬಕಾಸುರರನ್ನು" 'ಇಲಿ ಎನ್ನುವ ನಿಮ್ಮ ಸ್ವಾಮಿನಿಷ್ಠೆಗೆ ಆಸ್ಕರ್ ಪ್ರಶಸ್ತಿಯೇ ಕೊಡಬೇಕು ಎಂದು ಜೆಡಿಎಸ್ ಲೇವಡಿ ಮಾಡಿದೆ.
02.12.2016 ರಂದು: ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ವಿಧಾನಸಭೆಯ ಸದನ ಸಮಿತಿ ವರದಿಯು "12.02.2004 ರ ಒಡಿಪಿ (ODP) ಅನುಮೋದನೆಗೆ ಕ್ಯಾಬಿನೆಟ್ ಒಪ್ಪಿಗೆಯಿಲ್ಲ ಮತ್ತು ಇದು ಮೂಲ ಒಪ್ಪಂದದ ಸ್ಪಷ್ಟ ಉಲ್ಲಂಘನೆ" ಎಂದು ತಪ್ಪಿತಸ್ಥರ ಮುಖವಾಡ ಕಳಚಿತ್ತು. 29.07.2026 ರಂದು: ಹೈಕೋರ್ಟ್ ವಿಭಾಗೀಯ ಪೀಠವು ಈ ಹಗರಣವನ್ನು "ಸಂವಿಧಾನ ಮತ್ತು ಕಾನೂನಿನ ಮೇಲಿನ ವಂಚನೆ" (Para 72) ಎಂದು ತೀರ್ಪು ನೀಡಿದೆ.
ಈಗ ಹೈಕೋರ್ಟ್ ತೀರ್ಪು ಬಂದಿರುವಾಗ ಪ್ರಶ್ನಿಸದೆ, ನಿಮ್ಮ ಸಾಹೇಬರಿಗೆ ಆರತಿ ಎತ್ತಬೇಕಿತ್ತೇ ? ಹೈಕೋರ್ಟ್ 29.07.2026 ರ ತೀರ್ಪಿನ ಪ್ಯಾರಾ 89 ರಲ್ಲಿ "ಸರ್ಕಾರದ ಪೂರ್ವಾನುಮತಿ ಇಲ್ಲದೆ ಟೋಲ್ ಪ್ಲಾಜಾ ಹಾಕಿ ಅಕ್ರಮವಾಗಿ ಭಾರೀ ಟೋಲ್ ವಸೂಲಿ ಮಾಡಲಾಗುತ್ತಿದೆ" ಎಂದು ಸ್ಪಷ್ಟವಾಗಿ ಹೇಳಿದೆ. ನೈಸ್ ಅಕ್ರಮವಾಗಿ ಟೋಲ್ ವಸೂಲಿ ಮಾಡುತ್ತಿದೆ ಎಂದು ನ್ಯಾಯಾಲಯದ ಆದೇಶವೇ ಇರುವಾಗ "ರೋಡ್ ಮೇಲೆ ಮಲಗಿಕೊಳ್ಳಲಿ" ಎನ್ನುವ ದರ್ಪವೇ ? ಎಂದು ಕಿಡಿ ಕಾರಿದೆ.
ಹೌದು, ಕಳೆದ 30 ವರ್ಷಗಳಿಂದ ಭೂಮಿ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಅನ್ನದಾತರನ್ನು ಕಂಡು ಕುಮಾರಸ್ವಾಮಿ ಅವರಿಗೆ ನಿದ್ದೆ ಬರುತ್ತಿಲ್ಲ. ಆದರೆ ರೈತರ ಜಮೀನು ಹಾಗೂ ಜನರ ದಿನನಿತ್ಯದ ₹3 ಕೋಟಿ ಟೋಲ್ ಹಣದ ಮೇಲೆ ಹಾಯಾಗಿ ನಿದ್ದೆ ಮಾಡುತ್ತಿರುವವರಿಗೆ ಜನರ ಕಷ್ಟ ಹೇಗೆ ಅರ್ಥವಾಗಬೇಕು ?
ಯಾವ ಪಕ್ಷದಲ್ಲಿದ್ದು ರಾಜಕೀಯವಾಗಿ ಬೆಳೆದಿರೋ ಅದೇ ಪಕ್ಷಕ್ಕೆ ದ್ರೋಹ ಬಗೆದು, ಈಗ ಹೊಸ ಯಜಮಾನರ ಮೆಚ್ಚುಗೆ ಗಳಿಸಲು "ನಮ್ಮವರು ಅನ್ನೋಕೆ ಅಸಹ್ಯ ಆಗುತ್ತೆ" ಎಂದು ನಾಲಿಗೆ ಹರಿಬಿಡುತ್ತಿರುವುದು ಹಾಸ್ಯಾಸ್ಪದ. ಕೆಲಸ ಇಲ್ಲದವರು ಯಾರು? ಸಂವಿಧಾನಕ್ಕೆ ವಂಚನೆ ಮಾಡಿದವರು ಯಾರು ? ಈಗ ಆ ಭ್ರಷ್ಟರ ಬೂಟು ಪಾಲಿಶ್ ಮಾಡುತ್ತಿರುವವರು ಯಾರು ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಪರಾಕಿ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



