'ಇಂದಿರಾಗಾಂಧಿ ಹೇಳಿದರೆ 'ಶಿಸ್ತು', ಮೋದಿ ಹೇಳಿದರೆ ಅಪರಾಧವೇ? ಚಿನ್ನದ ಮೇಲಿನ ವ್ಯಾಮೋಹ ಬಿಡಿ ಎಂದು ಚಿದಂಬರಂ ಗೋಗರೆದಿದ್ದು ನೆನಪಿಲ್ಲವೇ?'
ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ ಎಂದಿದ್ದಾರೆ.

ಬೆಂಗಳೂರು: ದೇಶದ ಹಿತದೃಷ್ಟಿಯಿಂದ ಚಿನ್ನ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ನಾಯಕ ಆರ್. ಅಶೋಕ್ ಗ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಆರ್. ಅಶೋಕ್. ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಇತಿಹಾಸದ ಅರಿವೂ ಇಲ್ಲದ, ಆರ್ಥಿಕ ನಿರ್ವಹಣೆಯ ಗಂಧ-ಗಾಳಿಯೂ ಗೊತ್ತಿಲ್ಲದ ಇಂದಿನ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ವಿರೋಧಿಸುವುದೇ ಒಂದು ‘ನಿತ್ಯ ಕಾಯಕ’ವಾಗಿಬಿಟ್ಟಿದೆ.
ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ನೀಡುವ ದೂರದೃಷ್ಟಿಯ ಆರ್ಥಿಕ ಸಲಹೆಗಳನ್ನು ಲೇವಡಿ ಮಾಡುವ ಈ ಕಾಂಗ್ರೆಸ್ಸಿಗರು ಒಮ್ಮೆ ತಮ್ಮದೇ ಪಕ್ಷದ ಇತಿಹಾಸವನ್ನು ತಿರುವಿ ಹಾಕಲಿ ಎಂದಿದ್ದಾರೆ.
1967 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಆರ್ಥಿಕ ಶಿಸ್ತಿಗಾಗಿ 'ಚಿನ್ನ ಕೊಳ್ಳಬೇಡಿ' ಎಂದು ಜನರಲ್ಲಿ ಮನವಿ ಮಾಡಿದ್ದರು. 2013 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಾಲ್ತಿ ಖಾತೆ ಕೊರತೆ (CAD) ಸರಿದೂಗಿಸಲು 'ಚಿನ್ನದ ಮೇಲಿನ ವ್ಯಾಮೋಹ ಬಿಡಿ' ಎಂದು ಪದೇ ಪದೇ ಗೋಗರೆದಿದ್ದರು.
'ದೊರೆ ಮಾಡಿದರೆ ದಂಡವಿಲ್ಲ' ಎಂಬಂತೆ, ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅವರ ಕಾಲದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಗಳು ಕರೆ ನೀಡಿದರೆ ಅದು "ಆರ್ಥಿಕ ನೀತಿ". ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಮೋದಿ ಅವರು ಕರೆ ನೀಡಿದರೆ ಅದು ಇವರಿಗೆ ತಪ್ಪಾಗಿ ಕಾಣುತ್ತಿರುವುದು ಕಾಂಗ್ರೆಸ್ ನಾಯಕರ ಎಡಬಿಡಂಗಿತನಕ್ಕೆ ಹಿಡಿದ ಕನ್ನಡಿ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಕೇವಲ ರಾಜಕೀಯ ಕಾರಣಕ್ಕಾಗಿ ದೇಶದ ಆರ್ಥಿಕತೆಯ ಬಗ್ಗೆ ಯಾವುದೇ ತರ್ಕವಿಲ್ಲದೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ಥಿಕತೆಯ ಮೂಲಪಾಠಗಳನ್ನು ಕಲಿಯಲಿ. ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶದ ಹಿತವನ್ನು ಬಲಿ ಕೊಡಬೇಡಿ ಎಂದು ಕಿಡಿ ಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



