ಪ್ರಜಾಪ್ರಭುತ್ವದ ಮೇಲೆ ಹಣದ ಪ್ರಭಾವ ಹೆಚ್ಚಾಗಿದೆ, ಈ ಹಿಂದೆ 45 ಸಾವಿರ ರೂ ನಲ್ಲಿ ಗೆದ್ದಿದ್ದೆ, ಈಗ 50 ಕೋಟಿ ರೂ ಬೇಕು: ವಿಶ್ವನಾಥ್ ಬೇಸರ
ಮುಖ್ಯಮಂತ್ರಿ ದೇವರಾಜ್ ಅರಸು ಅವರು ನಮಗೆ ತಲಾ ರೂ.20 ಸಾವಿರ ನೀಡಿದ್ದರು. ನನ್ನ ತಂದೆ ರೂ.10 ಸಾವಿರ ಕೊಟ್ಟರು. ನಾನು ಮತ್ತಷ್ಟು ರೂ.10-15 ಸಾವಿರ ಖರ್ಚು ಮಾಡಿದ್ದೆ. ಒಟ್ಟು ರೂ.45 ಸಾವಿರದಲ್ಲಿ ನಾನು ಮೊದಲ ಬಾರಿಗೆ ಶಾಸಕರಾಗಿ ಗೆದ್ದೆ.

ಬೆಂಗಳೂರು: “ಒಂದಾನೊಂದು ಕಾಲದಲ್ಲಿ ರಾಜಕೀಯವು ಸೇವಾಭಾವ, ಸರಳತೆ ಮತ್ತು ಸ್ವಾಭಿಮಾನದ ಪ್ರತೀಕವಾಗಿತ್ತು. ಈಗ ಅದು ಸಂಪೂರ್ಣ ವ್ಯವಹಾರಿಕ ಮತ್ತು ವಾಣಿಜ್ಯೀಕರಣಗೊಂಡಿದೆ” ಎಂದು ಬಿಜೆಪಿ ಎಂಎಲ್‌ಸಿ ಅಡಗೂರು ವಿಶ್ವನಾಥ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರದ ತಮ್ಮ 79ನೇ ಜನ್ಮದಿನ ಆಚರಣೆಗೂ ಮುನ್ನ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಅವರು, 1978ರ ತಮ್ಮ ಮೊದಲ ವಿಧಾನಸಭಾ ಚುನಾವಣೆಯ ನೆನಪುಗಳನ್ನು ಹಂಚಿಕೊಂಡು ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ಆ ಸಂದರ್ಭದಲ್ಲಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು ನಮಗೆ ತಲಾ ರೂ.20 ಸಾವಿರ ನೀಡಿದ್ದರು. ನನ್ನ ತಂದೆ ರೂ.10 ಸಾವಿರ ಕೊಟ್ಟರು. ನಾನು ಮತ್ತಷ್ಟು ರೂ.10-15 ಸಾವಿರ ಖರ್ಚು ಮಾಡಿದ್ದೆ. ಒಟ್ಟು ರೂ.45 ಸಾವಿರದಲ್ಲಿ ನಾನು ಮೊದಲ ಬಾರಿಗೆ ಶಾಸಕರಾಗಿ ಗೆದ್ದೆ. ಈಗ ಅದನ್ನು ನೆನೆಸಿಕೊಂಡರೆ ಕನಸಿನಂತಿದೆ” ಎಂದು ಹೇಳಿದರು.
ಇದೇ ವೇಳೆ ಕೆಆರ್ ನಗರ ಕ್ಷೇತ್ರದಲ್ಲಿ ಮತಯಾಚನೆಗೆ ತೆರಳುತ್ತಿದ್ದ ದಿನಗಳನ್ನು ಸ್ಮರಿಸಿದ ಅವರು, “ಜನರು ಮನೆಗೆ ಕರೆದು ತಾಂಬೂಲದ ಎಲೆಯ ಮೇಲೆ ರೂ.10 ಇಟ್ಟು ಗೌರವದಿಂದ ಕೊಡುತ್ತಿದ್ದರು. ತಲೆಯ ಮೇಲೆ ಕೈ ಇಟ್ಟು ಆಶೀರ್ವದಿಸುತ್ತಿದ್ದರು. ಆ ಆತ್ಮೀಯತೆ ಮತ್ತು ಸ್ವಾಭಿಮಾನ ಈಗ ಕಾಣೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ತಿಂಗಳಿಗೆ 2 ಲಕ್ಷ ರೂ.ಗಳವರೆಗೆ ಸಂಪಾದಿಸುವ ಐಷಾರಾಮಿ ಕಚೇರಿಗಳಲ್ಲಿ ಕೆಲಸ ಮಾಡುವವರೂ ಸಹ ‘ನಮ್ಮ ಬಳಿ ಹಣ ಎಲ್ಲಿದೆ?’ ಎಂದು ಕೇಳುತ್ತಾರೆ. ಮತದಾನದ ಪ್ರಕ್ರಿಯೆಯೇ ಹಣದ ವ್ಯವಹಾರವಾಗಿ ಬದಲಾಗಿದೆ” ಎಂದು ಹೇಳಿದರು.
ವಇಂದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ರೂ.50 ಕೋಟಿ ಬೇಕಾಗುತ್ತದೆ. ಅದಕ್ಕಾಗಿಯೇ ಮೂರು ಪಕ್ಷಗಳಲ್ಲಿಯೂ ಅನೇಕ ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ ಎಂದು ಟೀಕಿಸಿದರು.
‘ಹಳ್ಳಿ ಹಕ್ಕಿ’ ಆತ್ಮಕಥೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ವಿಶ್ವನಾಥ್, ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಅರಣ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
1978ರ ಶಾಸಕರ ತಂಡದಲ್ಲಿ ಸ್ಪೀಕರ್ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಚಿವ ಟಿ.ಬಿ. ಜಯಚಂದ್ರ ಕೂಡ ಇದ್ದರು ಎಂದು ಸ್ಮರಿಸಿದರು.
ಹಾಗೆಯೇ ಹಿರಿಯ ನಾಯಕರು ಮಲ್ಲಿಕಾರ್ಜುನ ಖರ್ಗೆ ಮತ್ತು ಎಂ.ವೀರಪ್ಪ ಮೊಯ್ಲಿ 1972ರ ಪೀಳಿಗೆಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ 1983ರಲ್ಲಿ ರಾಜಕೀಯ ಪ್ರವೇಶಿಸಿದರು ಎಂದರು.
1978ರಲ್ಲಿ ಕಾಂಗ್ರೆಸ್ ಪಕ್ಷದಲ್ಲೇ 149 ಶಾಸಕರು ಆಯ್ಕೆಯಾಗಿದ್ದು, ಬಹುತೇಕರು ರೂ.30 ಸಾವಿರದಿಂದ ರೂ.50 ಸಾವಿರ ವೆಚ್ಚದಲ್ಲೇ ಗೆದ್ದಿದ್ದರು. ಆದರೆ ವರ್ಷಗಳು ಕಳೆದಂತೆ ಮತದಾರರಿಗೆ ಹಣ ಹಂಚುವ ಪ್ರಮಾಣ ಹೆಚ್ಚುತ್ತಲೇ ಬಂದಿದೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ವಿಶ್ವನಾಥ್, 2019ರಲ್ಲಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದದ್ದು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೂ ಕಾರಣವಾಯಿತು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



