ರಾಜಕೀಯ

ಅಧಿಕಾರಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಕೃಷ್ಣ ಬೈರೇಗೌಡರ ಪರೋಕ್ಷ ಟಾಂಗ್‌ಗೆ ಉತ್ತರ ಕೊಡಿ ಡಿಕೆಶಿ ಅವರೇ..!

ನಿಮ್ಮದೇ ಸಚಿವರು ನಿಮ್ಮ ಮೂರು ವರ್ಷಗಳ ಆಡಳಿತ ವೈಫಲ್ಯವನ್ನು ಮತ್ತು ರಸ್ತೆಗುಂಡಿಗಳನ್ನು ಕಾಸು ಮಾಡುವ ಚಿನ್ನದ ಗುಂಡಿಗಳನ್ನಾಗಿ ಮಾಡಿಕೊಂಡಿದ್ದ ಹಗಲು ದರೋಡೆಯನ್ನು ಇಡೀ ರಾಜ್ಯದ ಮುಂದೆ ತೆರೆದಿಟ್ಟಿದ್ದಾರೆ. ಇದಕ್ಕೆ ಉತ್ತರಿಸಬೇಕಾದವರು ಅಧಿಕಾರಿಗಳಲ್ಲ, ನೇರವಾಗಿ ನೀವೇ.

ಅಧಿಕಾರಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಕೃಷ್ಣ ಬೈರೇಗೌಡರ ಪರೋಕ್ಷ ಟಾಂಗ್‌ಗೆ ಉತ್ತರ ಕೊಡಿ ಡಿಕೆಶಿ ಅವರೇ..!
ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ.
Published On :

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರಿನ ರಸ್ತೆಗುಂಡಿಗಳು ಮತ್ತು ಕಳಪೆ ಕಾಮಗಾರಿಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ವ್ಯಕ್ತಪಡಿಸಿದ ಅಸಮಾಧಾನವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿ, ಕೃಷ್ಣ ಬೈರೇಗೌಡರ ಹೇಳಿಕೆಗಳು ಪರೋಕ್ಷವಾಗಿ ಮಾಜಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿದ್ದ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಕಾರ್ಯವೈಖರಿಯ ಮೇಲಿನ ಟೀಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಕೃಷ್ಣ ಬೈರೇಗೌಡ ಅವರು ಇಲಾಖೆ ಅಧಿಕಾರಿ ವಹಿಸಿಕೊಂಡ ಮೊದಲ ದಿನವೇ ಬೆಂಗಳೂರಿನ ರಸ್ತೆಗಳ ದುಸ್ಥಿತಿ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು, ಕಳೆದ ಮೂರು ವರ್ಷಗಳಿಂದ ರಸ್ತೆಗುಂಡಿ ಮುಚ್ಚುವ ಹೆಸರಿನಲ್ಲಿ ಸರ್ಕಾರ ನಡೆಸಿದ ಕಾರ್ಯಗಳ ವೈಫಲ್ಯವನ್ನು ಬಯಲಿಗೆಳೆದಂತಾಗಿದೆ ಎಂದು ಟೀಕಿಸಿದ್ದಾರೆ.

ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಇಲಾಖೆಯ ಚಾರ್ಜ್ ತೆಗೆದುಕೊಂಡ ಮೊದಲ ದಿನವೇ ಇಲಾಖೆಯ ನಿಕಟಪೂರ್ವ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಕಳೆದ ಮೂರು ವರ್ಷಗಳಿಂದ ಆಡಿಕೊಂಡು ಬಂದಿರುವ 'ರಸ್ತೆಗುಂಡಿ ಮುಚ್ಚುವ ನಾಟಕ'ವನ್ನು ಬಟಾಬಯಲು ಮಾಡಿದ್ದಾರೆ. ಬೆಂಗಳೂರಿನ ರಸ್ತೆಗಳ ದುಸ್ಥಿತಿಗೆ ಮತ್ತು ಕಳಪೆ ಕಾಮಗಾರಿಗಳಿಗೆ ಕೃಷ್ಣ ಬೈರೇಗೌಡರು ಇಲಾಖೆಯ ಆಂತರಿಕ ಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವುದು ಬೇರೆ ಯಾರದ್ದೋ ವಿರುದ್ಧವಲ್ಲ; ಅದು ನೇರವಾಗಿ ನಿಕಟಪೂರ್ವ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೇ ಎಂಬುದು ಸ್ಪಷ್ಟವಾಗಿದೆ.

ಕಳೆದ ಮೂರು ವರ್ಷಗಳಿಂದ ಬೆಂಗಳೂರನ್ನು ಉದ್ಧಾರ ಮಾಡುತ್ತಿದ್ದೇವೆ, ರಸ್ತೆಗುಂಡಿಗಳನ್ನು ಮುಚ್ಚಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಡೋಲು ಬಾರಿಸಿಕೊಳ್ಳುತ್ತಿದ್ದವರ ಅಸಲಿ ಮುಖವಾಡವನ್ನು ಈಗ ಅವರದೇ ಪಕ್ಷದ ಸಚಿವರು ಸಾರ್ವಜನಿಕವಾಗಿ ಕಳಚಿ ಬಿಸಾಡಿದ್ದಾರೆ.

ಮುಖ್ಯಮಂತ್ರಿ ಡಿಕೆ.ಶಿವಕಮಾರ್ ಅವರೇ, ನಿಮ್ಮದೇ ಸಚಿವರು ನಿಮ್ಮ ಮೂರು ವರ್ಷಗಳ ಆಡಳಿತ ವೈಫಲ್ಯವನ್ನು ಮತ್ತು ರಸ್ತೆಗುಂಡಿಗಳನ್ನು ಕಾಸು ಮಾಡುವ ಚಿನ್ನದ ಗುಂಡಿಗಳನ್ನಾಗಿ ಮಾಡಿಕೊಂಡಿದ್ದ ಹಗಲು ದರೋಡೆಯನ್ನು ಇಡೀ ರಾಜ್ಯದ ಮುಂದೆ ತೆರೆದಿಟ್ಟಿದ್ದಾರೆ. ಇದಕ್ಕೆ ಉತ್ತರಿಸಬೇಕಾದವರು ಅಧಿಕಾರಿಗಳಲ್ಲ, ನೇರವಾಗಿ ನೀವೇ. 'ಬ್ರ್ಯಾಂಡ್ ಬೆಂಗಳೂರು' ಹೆಸರಿನಲ್ಲಿ ನಡೆದ ರೀಲ್ಸ್ ನಾಟಕಗಳು ಮತ್ತು ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಹಣ ಎಲ್ಲಿಗೆ ಹೋಯಿತು? ಕಮಿಷನ್ ದಂಧೆಯ ಮರೆಯಲ್ಲಿ ಬೆಂಗಳೂರಿನ ರಸ್ತೆಗಳನ್ನು ಮೃತ್ಯುಕೂಪ ಮಾಡಿದ ಪಾಪ ಯಾರದ್ದು?

ಅಧಿಕಾರಿಗಳ ಹೆಗಲ ಮೇಲೆ ಬಂದೂಕು ಇಟ್ಟು ತಪ್ಪಿಸಿಕೊಳ್ಳಲು ಇನ್ನು ಸಾಧ್ಯವಿಲ್ಲ. ಕೃಷ್ಣ ಬೈರೇಗೌಡರ ಈ ಪರೋಕ್ಷ ಟಾಂಗ್‌ಗೆ ಮತ್ತು ಬೆಂಗಳೂರಿನ ಜನತೆಗೆ ನೇರ ಉತ್ತರ ಕೊಡಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.