ಸರಳ, ವೇಗದ E-Aasthi 2.0 ಗೆ ರಾಜ್ಯ ಸರ್ಕಾರ ಚಾಲನೆ; ಇನ್ಮುಂದೆ ಇ-ಖಾತಾ ಮತ್ತಷ್ಟು ಸುಲಭ..!
ಕಳೆದ 2024ರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಾಗಿದ್ದ ಮೊದಲ ಆವೃತ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ದಾಖಲೆ ಅಪ್‌ಲೋಡ್ ಸಮಸ್ಯೆ ಸೇರಿದಂತೆ ಎಲ್ಲಾ ತಾಂತ್ರಿಕ ಲೋಪದೋಷಗಳನ್ನು ಈ ಹೊಸ 2.0 ಆವೃತ್ತಿಯಲ್ಲಿ ಸಂಪೂರ್ಣವಾಗಿ ನಿವಾರಿಸಲಾಗಿದೆ.

ಬೆಂಗಳೂರು: ಬೆಂಗಳೂರು ನಾಗರಿಕರಿಗೆ ಇಲ್ಲಿದೆ ಒಂದು ಮಹತ್ವದ ಸುದ್ಧಿ. ಇನ್ಮುಂದೆ ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವ ಕೆಲಸ ಇರುವುದಿಲ್ಲ. ಸಾರ್ವಜನಿಕರ ದೂರು ಹಾಗೂ ತಾಂತ್ರಿಕ ತೊಂದರೆಗಳಿಗೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಈಗ ಅತ್ಯಂತ ಸರಳ ಹಾಗೂ ವೇಗದ ‘ಇ-ಆಸ್ತಿ 2.0’ (e-Aasthi 2.0) ಪೋರ್ಟಲ್ ಅನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐಟಿ ತಂಡವು ಸ್ವಂತವಾಗಿ ಈ ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸಿodog, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈ ನೂತನ ತಂತ್ರಾಂಶವನ್ನು ಮಂಗಳವಾರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಚಿವರು, ಕಳೆದ 2024ರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಾಗಿದ್ದ ಮೊದಲ ಆವೃತ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ದಾಖಲೆ ಅಪ್‌ಲೋಡ್ ಸಮಸ್ಯೆ ಸೇರಿದಂತೆ ಎಲ್ಲಾ ತಾಂತ್ರಿಕ ಲೋಪದೋಷಗಳನ್ನು ಈ ಹೊಸ 2.0 ಆವೃತ್ತಿಯಲ್ಲಿ ಸಂಪೂರ್ಣವಾಗಿ ನಿವಾರಿಸಲಾಗಿದೆ. ಇದರಿಂದ ಸರ್ಕಾರಿ ಕಚೇರಿಗಳಿಗೆ ಪದೇಪದೇ ಭೇಟಿ ನೀಡುವ ಹಾಗೂ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 24 ಲಕ್ಷ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಕರಡು ಇ-ಖಾತಾ ನೀಡಲಾಗಿದೆ. ಸುಮಾರು 11 ಲಕ್ಷ ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ನೀಡಲಾಗಿದೆ. ಇದೂವರೆಗೆ ಇ-ಖಾತಾ ಪಡೆಯದ ಆಸ್ತಿ ಮಾಲೀಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
‘ಇ-ಆಸ್ತಿ 2.0’ ಮೂಲಕ ಆಸ್ತಿ ಮಾಲೀಕರು ಇ-ಖಾತಾ ಸೇವೆಗಳನ್ನು ಪಡೆಯುವುದು, ಅರ್ಜಿ ಸಲ್ಲಿಸುವುದು ಹಾಗೂ ಅದರ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸುವುದು ಸಾಧ್ಯವಾಗಲಿದೆ. ಕರ್ನಾಟಕದ ಹೊರಗೆ ವಾಸಿಸುವ ಆಸ್ತಿ ಮಾಲೀಕರು ಹಾಗೂ ಅನಿವಾಸಿ ಭಾರತೀಯರು ಕೂಡ ಆನ್‌ಲೈನ್ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು.
‘ಇ-ಆಸ್ತಿ 2.0’ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಸರ್ಕಾರಿ ಇಲಾಖೆಗಳ ವಿವಿಧ ವ್ಯವಸ್ಥೆಗಳ ಜೋಡಣೆಯೂ ಸೇರಿದೆ. ಕಾವೇರಿ, ಬೆಸ್ಕಾಂ ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿ ಸೇರಿದಂತೆ ಇತರ ಸರ್ಕಾರಿ ವ್ಯವಸ್ಥೆಗಳೊಂದಿಗೆ ವೇದಿಕೆಯನ್ನು ಸಂಯೋಜಿಸಲಾಗಿದ್ದು, ಆಸ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿವಿಧ ಇಲಾಖೆಗಳ ನಡುವೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇ-ಖಾತಾ ಮಾಹಿತಿಯ ಆಧಾರದ ಮೇಲೆ ದಾಖಲೆಗಳನ್ನು ಸ್ವಯಂಚಾಲಿತವಾಗಿ ನವೀಕರಿಸುವ ವ್ಯವಸ್ಥೆಯೂ ಇರಲಿದೆ.
“ಸರ್ಕಾರಿ ವ್ಯವಸ್ಥೆಗಳಲ್ಲೇ ಮಾಹಿತಿ ಲಭ್ಯವಿರುವಾಗ, ನಾಗರಿಕರು ಅದೇ ಮಾಹಿತಿಯನ್ನು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಪದೇಪದೇ ಕೊಂಡೊಯ್ಯುವ ಅಗತ್ಯ ಇರಬಾರದು ಎಂಬುದು ಇದರ ಉದ್ದೇಶ ಎಂದು ಹೇಳಿದರು.
ಹಿಂದಿನ ಬಿಬಿಎಂಪಿಯಿಂದ 2024ರ ಅಕ್ಟೋಬರ್‌ನಲ್ಲಿ ‘ಇ-ಆಸ್ತಿ’ ವ್ಯವಸ್ಥೆ ಆರಂಭಿಸಲಾಗಿತ್ತು. ಸುಮಾರು 25 ಲಕ್ಷ ಇ-ಖಾತಾಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲೀಕರಣಗೊಳಿಸಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಕೇಂದ್ರಿತ ಸೇವೆ ಒದಗಿಸಿದ್ದಕ್ಕಾಗಿ ಈ ಉಪಕ್ರಮಕ್ಕೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ-2025 ಕೂಡ ಲಭಿಸಿದೆ.
ಹಿಂದಿನ ವ್ಯವಸ್ಥೆಯಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವಾಗ ನಾಗರಿಕರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಿತ ಬಳಕೆದಾರ ಸಂಪರ್ಕ ವ್ಯವಸ್ಥೆ, ಸ್ವಯಂಚಾಲಿತ ಪ್ರಕ್ರಿಯೆ ಹಾಗೂ ಉತ್ತಮ ವ್ಯವಸ್ಥೆಗಳ ಸಂಯೋಜನೆಯೊಂದಿಗೆ ‘ಇ-ಆಸ್ತಿ 2.0’ ಅಭಿವೃದ್ಧಿಪಡಿಸಲಾಗಿದೆ. ಇ-ಖಾತಾ ನೀಡಿದ ಬಳಿಕ ದಾಖಲೆಗಳಲ್ಲಿ ತಿದ್ದುಪಡಿ ಮಾಡುವ ಪ್ರಕ್ರಿಯೆಗೂ ವ್ಯವಸ್ಥಿತ ಡಿಜಿಟಲ್ ಕಾರ್ಯವಿಧಾನ ರೂಪಿಸಲಾಗಿದೆ.
ಒಂದೇ ಆಸ್ತಿಗೆ ಸಂಬಂಧಿಸಿದ 2004ರ ಹಿಂದಿನ ಹಾಗೂ ನಂತರದ ದಾಖಲೆಗಳು ಸೇರಿದಂತೆ ಹಲವು ಕ್ರಯಪತ್ರಗಳನ್ನು ಈ ವ್ಯವಸ್ಥೆಯಲ್ಲಿ ನಿರ್ವಹಿಸಲು ಅವಕಾಶವಿದೆ. ಉತ್ತರಾಧಿಕಾರ ಹಾಗೂ ಖಾತೆ ಬದಲಾವಣೆ ಪ್ರಕ್ರಿಯೆಗಳನ್ನೂ ದೃಢೀಕೃತ ಮಾಹಿತಿಯ ಆಧಾರದ ಮೇಲೆ ಸರಳಗೊಳಿಸಲಾಗುತ್ತಿದೆ. ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದರ ಜೊತೆಗೆ, ಅಧಿಕಾರಿಗಳು ಅರ್ಜಿಗಳ ಪ್ರಗತಿ, ಬಾಕಿ ಉಳಿದಿರುವ ಅರ್ಜಿಗಳು ಹಾಗೂ ವಿಲೇವಾರಿಯನ್ನು ಮೇಲ್ವಿಚಾರಣೆ ಮಾಡಲು ಈ ವೇದಿಕೆ ನೆರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




