ರಾಜಕೀಯ

ಪ್ರಧಾನ್ ಹೋದರೂ RSS ಸಿದ್ಧಾಂತ ಬದಲಾಗಲ್ಲ: ಜೋಶಿ-ಪ್ರಧಾನ್ ಸೈದ್ಧಾಂತಿಕ ಅವಳಿ-ಜವಳಿಗಳು: ಸಿದ್ದರಾಮಯ್ಯ

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಲ್ಹಾದ್ ಜೋಶಿ ನಡುವೆ ಯಾವುದೇ ಸೈದ್ಧಾಂತಿಕ ವ್ಯತ್ಯಾಸ ಇಲ್ಲ. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಬಂದವರು.

ಪ್ರಧಾನ್ ಹೋದರೂ RSS ಸಿದ್ಧಾಂತ ಬದಲಾಗಲ್ಲ: ಜೋಶಿ-ಪ್ರಧಾನ್ ಸೈದ್ಧಾಂತಿಕ ಅವಳಿ-ಜವಳಿಗಳು: ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ನೇಮಕಗೊಂಡಿರುವುದನ್ನು ತೀವ್ರವಾಗಿ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ಶಿಕ್ಷಣ ಖಾತೆಯಿಂದ ಕೈಬಿಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್'ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ ಅವರು, ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹಾದಿಯಲ್ಲೇ ಪ್ರಲ್ಹಾದ್ ಜೋಶಿಯವರೂ ಸಾಗಲಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆ ನಾವು ಹೆಮ್ಮೆಪಡಬೇಕಾಗಿತ್ತು. ಆದರೆ, ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸಮರ್ಥಿಸಿದ್ದ ಪ್ರಲ್ಹಾದ್ ಜೋಶಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸುವ ಮೂಲಕ ಪ್ರಧಾನಿ ಮೋದಿ ಕನ್ನಡಿಗರು ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಲ್ಹಾದ್ ಜೋಶಿ ನಡುವೆ ಯಾವುದೇ ಸೈದ್ಧಾಂತಿಕ ವ್ಯತ್ಯಾಸ ಇಲ್ಲ. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಬಂದವರು. ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು, ಬಡವರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಆರ್‌ಎಸ್‌ಎಸ್ ಹೊಂದಿರುವ ನಿಲುವನ್ನೇ ಇಬ್ಬರೂ ಹೊಂದಿದ್ದಾರೆ.

ಆದ್ದರಿಂದಲೇ ಪ್ರಧಾನ್ ಅವರ ಸ್ಥಾನಕ್ಕೆ ಜೋಶಿ ಅವರನ್ನು ನೇಮಿಸಲಾಗಿದೆ. ಇದು ಪಾತ್ರಧಾರಿ ಮಾತ್ರ ಬದಲಾಗಿರುವುದೇ ಹೊರತು, ಸೂತ್ರಧಾರಿಗಳು ಬದಲಾಗಿಲ್ಲ ಎಂಬಂತಾಗಿದೆ" ಎಂದು ಟೀಕಿಸಿದರು.

ಇದೇ ವೇಳೆ ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಬಾನು ಪ್ರಕರಣವನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದ ಮೇಲೆ ಅಪರಾಧಿಗಳನ್ನು ಬಿಡುಗಡೆ ಮಾಡಿದಾಗ, ಆ ನಿರ್ಧಾರವನ್ನು ಪ್ರಲ್ಹಾದ್ ಜೋಶಿ ಸಮರ್ಥಿಸಿ ಅವರ ಪರವಾಗಿ ಮಾತನಾಡಿದ್ದರು. ಇಂತಹ ವ್ಯಕ್ತಿ ಶಿಕ್ಷಣ ಸಚಿವರಾಗಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆತಂಕ ಹುಟ್ಟಿಸಿದೆ" ಎಂದು ಹೇಳಿದರು.

ಇದೇ ವೇಳೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಪ್ರಲ್ಹಾದ್ ಜೋಶಿ ಅವರ ನಿಲುವನ್ನು ದೇಶದ ಮುಂದೆ ಬಹಿರಂಗಪಡಿಸಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಸದನದಲ್ಲಿ ಅವರ ಧ್ವನಿಯನ್ನು ಹತ್ತಿಕ್ಕಬಹುದು. ಆದರೆ, ದೇಶದ ಜನರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ಪ್ರಧಾನಿ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಿತದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ, ಪ್ರಲ್ಹಾದ್ ಜೋಶಿ ಅವರಿಂದ ತಕ್ಷಣ ಶಿಕ್ಷಣ ಖಾತೆಯನ್ನು ಹಿಂಪಡೆದು, ಆ ಜವಾಬ್ದಾರಿಯನ್ನು ಅರ್ಹ ವ್ಯಕ್ತಿಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.