'ವಿಪಕ್ಷದೊಂದಿಗೆ ಗುರುತಿಸಿಕೊಂಡಾಗ ಅವಮಾನಿಸುವುದು, ವೈಫಲ್ಯ ಮುಚ್ಚಿಹಾಕಲು ಅದೇ ಬಾಗಿಲು ತಟ್ಟುವುದು ನಾಯಕತ್ವವಲ್ಲ, ಅಶ್ಲೀಲ ಪ್ರದರ್ಶನ'
ನಂದನ್ ನಿಲೇಕಣಿಯವರ ಸಾಮರ್ಥ್ಯದ ಬಗ್ಗೆ ನಮಗೆ ಪ್ರಶ್ನೆಯಿಲ್ಲ. ಪ್ರಶ್ನೆ ಇರುವುದು ನರೇಂದ್ರ ಮೋದಿಯವರ ರಾಜಕೀಯ ಪ್ರಾಮಾಣಿಕತೆಯ ಬಗ್ಗೆ ಎಂದರು.

ಬೆಂಗಳೂರು: ನಿಂದಿಸಿದವರನ್ನೇ ನೆಚ್ಚಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಗೂ, ಬಿಜೆಪಿಗೂ ಹೊಸದೇನಲ್ಲ. ಚುನಾವಣಾ ವೇದಿಕೆಯಲ್ಲಿ ನಂದನ್ ನಿಲೇಕಣಿ ಅವರನ್ನು ವೈಯಕ್ತಿಕವಾಗಿ ಅವಹೇಳನ ಮಾಡಿದ್ದನ್ನು ಪ್ರಧಾನಿ ಮರೆತಿರಬಹುದು. ಆದರೆ, ದೇಶದ ಜನ ಮರೆತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಸೋಮವಾರ ಟೀಕಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ನಿಲೇಕಣಿಯವರು ರೂಪಿಸಿದ ಆಧಾರ್ ಯೋಜನೆಯನ್ನು ‘ಸಾರ್ವಜನಿಕ ಹಣದ ಲೂಟಿ’, ‘ವ್ಯರ್ಥ ಯೋಜನೆ’, ‘ರಾಷ್ಟ್ರೀಯ ಭದ್ರತೆಗೆ ಅಪಾಯ’ ಎಂದು ಅಪಪ್ರಚಾರ ಮಾಡಿದ್ದವರು ಇದೇ ಬಿಜೆಪಿ ನಾಯಕರು. ಆದರೆ, ಇಂದು ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸುವ ಉನ್ನತಾಧಿಕಾರ ಇರುವ ಸಮಿತಿಯ ಚುಕ್ಕಾಣಿಯನ್ನು ಅದೇ ನಂದನ್ ನಿಲೇಕಣಿಯವರ ಕೈಗೆ ಒಪ್ಪಿಸಿದ್ದಾರೆ! ಎಂದು ದೂರಿದರು.
'ಗುರುತೇ ಇಲ್ಲದ ಕೋಟ್ಯಧಿಪತಿ' ಎಂದು ನಿಲೇಕಣಿ ಅವರನ್ನು ಅವಮಾನಿಸಿದ ಪ್ರಧಾನಮಂತ್ರಿಗಳೇ, ಈಗ ಏಕಾಏಕಿ ನಿಮಗೆ ನಂದನ್ ನಿಲೇಕಣಿಯವರ 'ಗುರುತು' ದೊರಕಿದೆಯೇ? ಅಥವಾ ನೀವು ಹಿಂದೆ ಮಾಡಿದ್ದ ಆರೋಪಗಳಿಗೇ ಇಂದು ಗುರುತೇ ಉಳಿದಿಲ್ಲವೇ? ಎಂದು ಪ್ರಶ್ನಿಸಿದರು.
ಅಂದಿನ ಆರೋಪಗಳು ಸತ್ಯವಾಗಿದ್ದರೆ, ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅವರ ಕೈಗೆ ಒಪ್ಪಿಸಿರುವುದು ಏಕೆ? ಹಿಂದಿನ ಆರೋಪಗಳು ಸುಳ್ಳಾಗಿದ್ದರೆ, ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಸಾಧಕನ ವಿರುದ್ಧ ನಡೆಸಿದ ವೈಯಕ್ತಿಕ ಅವಹೇಳನಕ್ಕಾಗಿ ಕ್ಷಮೆ ಕೇಳುವುದು ಯಾವಾಗ?. ವಿರೋಧ ಪಕ್ಷದೊಂದಿಗೆ ಗುರುತಿಸಿಕೊಂಡಾಗ ದೇಶದ ಪ್ರತಿಭೆಯನ್ನು ಅವಮಾನಿಸುವುದು; ತಮ್ಮ ಆಡಳಿತದ ವೈಫಲ್ಯವನ್ನು ಸರಿಪಡಿಸಬೇಕಾದಾಗ ಅದೇ ಪ್ರತಿಭೆಯ ಬಾಗಿಲು ತಟ್ಟುವುದು ನಾಯಕತ್ವವಲ್ಲ, ಅವಕಾಶವಾದದ ಅಶ್ಲೀಲ ಪ್ರದರ್ಶನ ಎಂದು ವಾಗ್ದಾಳಿ ನಡೆಸಿದರು.
ನಂದನ್ ನಿಲೇಕಣಿಯವರ ಸಾಮರ್ಥ್ಯದ ಬಗ್ಗೆ ನಮಗೆ ಪ್ರಶ್ನೆಯಿಲ್ಲ. ಪ್ರಶ್ನೆ ಇರುವುದು ನರೇಂದ್ರ ಮೋದಿಯವರ ರಾಜಕೀಯ ಪ್ರಾಮಾಣಿಕತೆಯ ಬಗ್ಗೆ. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಲು ಸಮಿತಿ ನೇಮಿಸುವ ಮೊದಲು, ನಿಮ್ಮ ಹಿಂದಿನ ಆರೋಪಗಳ ಪರೀಕ್ಷೆಗೆ ಉತ್ತರಿಸಿ ಪ್ರಧಾನಿಗಳೇ ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



