ಹಗರಣ ಮುಚ್ಚಿ ಹಾಕಲು ಬಿಡಲ್ಲ, ಸರ್ಕಾರದ ವಿರುದ್ಧದ ಹೋರಾಟ ಮತ್ತಷ್ಟು ತೀವ್ರ: ಸ್ನೇಹಮಯಿ ಕೃಷ್ಣ ಬಂಧನಕ್ಕೆ BJP ಕಿಡಿ
ಹತಾಶ ಮನಸ್ಥಿತಿಯಿಂದ ನ್ಯಾಯಾಲಯದಲ್ಲಿ ಸದರಿ ಪ್ರಕರಣದ ವಿಚಾರಣೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಕೋರ್ಟಿನ ಹೊರಗಡೆ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನ ಮಾಡಲು ಹೊರಟ ನಾಚಿಕೆಗೇಡಿತನದ ಪರಮಾವಧಿ.

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ಕೆಲವೇ ಗಂಟೆಗಳ ಮುನ್ನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತನಿಖಾ ಸಂಸ್ಥೆಗಳನ್ನು, ಪೊಲೀಸ್ ವ್ಯವಸ್ಥೆಯನ್ನು ನ್ಯಾಯದ ಪರವಾಗಿ ಹೋರಾಡುವವರನ್ನು ಹತ್ತಿಕ್ಕಲು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಕಂಡ ಅತೀ ದೊಡ್ಡ ಹಗರಣ ಮುಡಾ ನಿವೇಶನಗಳ ಲೂಟಿಕೋರತನದ ವಿರುದ್ಧ ದೂರು ನೀಡಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಆರೋಪಿತ ಅಧಿಕಾರಿಯೊಬ್ಬರ ದೂರು ಆಧರಿಸಿ ಸಿಸಿಬಿ ಪೋಲಿಸರು ಕ್ರಮ ಅನುಸರಿಸದೇ ಬಂಧಿಸಿರುವ ನಡೆ ದೂರುದಾರನ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ಳವ ದುರುದ್ದೇಶದಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ, ಮುಡಾ ಹಗರಣದಲ್ಲಿ ಭಾಗಿಯಾದ ಪ್ರಭಾವಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರೆಂಬ ಹಿನ್ನೆಲೆಯಲ್ಲಿ ಈ ಹಿಂದಿನಿಂದಲೂ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಒಂದಿಲ್ಲೊಂದು ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಬಂಧಿಸಲು ಯತ್ನಿಸುತ್ತಿದ್ದ ಪೊಲೀಸರು ಇದೀಗ ಸತ್ಯ ಹೊರಬರದಂತೆ ತಡೆಯಲು ಸ್ನೇಹಮಯಿ ಕೃಷ್ಣ ಅವರನ್ನು ಕೊನೆಗೂ ಹತಾಶ ಮನಸ್ಥಿತಿಯಿಂದ ನ್ಯಾಯಾಲಯದಲ್ಲಿ ಸದರಿ ಪ್ರಕರಣದ ವಿಚಾರಣೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಕೋರ್ಟಿನ ಹೊರಗಡೆ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನ ಮಾಡಲು ಹೊರಟ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದ ಸಂಬಂಧ ನಿತ್ಯವೂ ನೂರಾರು ದೂರುಗಳು ದಾಖಲಾಗುತ್ತಿವೆ, ಸಾಮಾನ್ಯರ ದೂರುಗಳನ್ನು ದಾಖಲಿಸಿಕೊಳ್ಳುವಲ್ಲಿ ತಾತ್ಸಾರ ತೋರುವ ಪೊಲೀಸರು ಈ ಪ್ರಕರಣದಲ್ಲಿ ವಿಪರೀತ ಕಾಳಜಿ ವಹಿಸಿ ಸ್ನೇಹಮಯಿ ಕೃಷ್ಣ ಅವರನ್ನು ಕ್ರಿಮಿನಲ್ ಆರೋಪಿಯಂತೆ, ಭಯೋತ್ಪಾದಕನಂತೆ ಬಂಧಿಸಿ ನಡೆಸಿಕೊಂಡಿರುವುದರ ಹಿಂದೆ ಭ್ರಷ್ಟ ವ್ಯವಸ್ಥೆ ಹಾಗೂ ಹಗರಣದ ವಾಸ್ತವತೆಯನ್ನು ರಕ್ಷಿಸುವ ದುರುದ್ದೇಶ ಹಾಗೂ ಪ್ರಭಾವಕ್ಕೆ ಮಣಿಯದ ಪ್ರಾಮಾಣಿಕ ಸಾಮಾಜಿಕ ಕಾರ್ಯಕರ್ತನ ಸೊಲ್ಲಡಗಿಸುವ ಕುತಂತ್ರ ಅಡಗಿದೆ, ಈ ಮೂಲಕ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ದನಿ ಎತ್ತುವವರನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತಿದೆ.
ಸುಳ್ಳು, ಭ್ರಷ್ಟಾಚಾರ, ದೌರ್ಜನ್ಯಗಳನ್ನು ಮುಚ್ಚಿಹಾಕಲು ಪೊಲೀಸ್ ವ್ಯವಸ್ಥೆ ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ದೇಶದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಸುಭದ್ರವಾಗಿದೆ, ಬಲಿಷ್ಟವಾಗಿದೆ ಎಂಬ ಅರಿವಿರಲಿ. ದುರ್ಮಾರ್ಗದ ನಡೆಗಳು ಈ ಸರ್ಕಾರಕ್ಕೆ ತಿರುಗುಬಾಣವಾಗಲಿದೆ. ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮುಚ್ಚಿ ಹಾಕಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ಸರ್ಕಾರದ ವಿರುದ್ಧ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



