ಕೈ ಪಾಳಯದಲ್ಲಿ ಸದ್ಯಕ್ಕಿಲ್ಲ ಸಂಪುಟ ಸರ್ಜರಿ: ವದಂತಿಗಳ ಅಲ್ಲಗಳೆದ ಹೈಕಮಾಂಡ್..!
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಚಿವರ ನೇಮಕ ಅಥವಾ ಸಂಪುಟದಿಂದ ಕೈಬಿಡುವ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳು ಎಐಸಿಸಿ ಅಧ್ಯಕ್ಷರ ಅನುಮೋದನೆಗೆ ಬರಬೇಕು. ಆದರೆ, ಕರ್ನಾಟಕದಿಂದ ಈವರೆಗೆ ಅಂತಹ ಯಾವುದೇ ಕಡತ ತಮ್ಮ ಬಳಿಗೆ ಬಂದಿಲ್ಲ.

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಚಿವ ಸಂಪುಟ ಬದಲಾವಣೆ ಅಥವಾ ಪುನಾರಚನೆಯ ವದಂತಿಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬ್ರೇಕ್ ಹಾಕಿದ್ದಾರೆ.
ರಾಜ್ಯ ಸಚಿವ ಸಂಪುಟದಿಂದ ಕೆಲವರನ್ನು ಕೈಬಿಡುವುದು ಅಥವಾ ಹೊಸಬರನ್ನು ಸೇರಿಸಿಕೊಳ್ಳುವ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರನ್ನು ಕೈಬಿಡುವ ಅಥವಾ ಹೊಸಬರನ್ನು ಸಂಪುಟಕ್ಕೆ ಸೇರಿಸುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮಗಳ ಬಳಿ ಮಾಹಿತಿ ಇದ್ದರೆ ತಿಳಿಸಬಹುದು ಎಂದು ಹೇಳಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಚಿವರ ನೇಮಕ ಅಥವಾ ಸಂಪುಟದಿಂದ ಕೈಬಿಡುವ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳು ಎಐಸಿಸಿ ಅಧ್ಯಕ್ಷರ ಅನುಮೋದನೆಗೆ ಬರಬೇಕು. ಆದರೆ, ಕರ್ನಾಟಕದಿಂದ ಈವರೆಗೆ ಅಂತಹ ಯಾವುದೇ ಕಡತ ತಮ್ಮ ಬಳಿಗೆ ಬಂದಿಲ್ಲ. ಯಾವುದಾದರೂ ಬೆಳವಣಿಗೆ ನಡೆದರೆ ನಿಮಗೆ ಫೋನ್ ಮಾಡುತ್ತೇನೆ ಎಂದು ತಿಳಿಸಿದರು.
ನೇಪಾಳ ಪ್ರವಾಹ ಪೀಡಿತರ ರಕ್ಷಣೆಗೆ ಆಗ್ರಹ
ಇದೇ ವೇಳೆ ನೇಪಾಳದಲ್ಲಿ ಉಂಟಾಗಿರುವ ದಿಢೀರ್ ಪ್ರವಾಹದಿಂದಾಗಿ ಕನ್ನಡಿಗರು ಸೇರಿದಂತೆ ನೂರಾರು ಭಾರತೀಯ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಸಂತ್ರಸ್ತರ ಸುರಕ್ಷಿತ ರಕ್ಷಣೆ ಹಾಗೂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ಒದಗಿಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಅಧಿಕೃತ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಭಾರತ ಮತ್ತು ನೇಪಾಳ ನಡುವೆ ಆಳವಾದ ಸಾಂಸ್ಕೃತಿಕ ಬಾಂಧವ್ಯ ಇರುವುದರಿಂದ, ಕೇಂದ್ರ ಸರ್ಕಾರವು ನೇಪಾಳದ ಆಡಳಿತಕ್ಕೂ ರಕ್ಷಣಾ ಕಾರ್ಯಗಳಿಗಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



