ಮಿಸ್ ಆಯ್ತು ಸಚಿವ ಸ್ಥಾನ: 'ಶಕ್ತಿ ಪ್ರದರ್ಶನ'ಕ್ಕೆ ಸಿದ್ದರಾಮಯ್ಯ ಆಪ್ತರು ಸಜ್ಜು! ಮೈಸೂರಿನಲ್ಲಿ 'ಅಸಮಾಧಾನ' ಸಭೆ!
ಸಿದ್ದರಾಮಯ್ಯ ಅವರ ಆಪ್ತರು ಹಾಗೂ ಮಾಜಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಅವರು ಸಭೆಯ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸದೆ, ಇದು ‘ಹೊಸ ಆರಂಭ ಹಾಗೂ ಶಕ್ತಿ ಪ್ರದರ್ಶನ’ದ ಮುನ್ನುಡಿ ಎಂದು ಹೇಳಿದ್ದಾರೆ.

ಮೈಸೂರು: ಕರ್ನಾಟಕ ಸಚಿವ ಸಂಪುಟದ ಇತ್ತೀಚಿನ ವಿಸ್ತರಣೆಯ ಬಳಿಕ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಲು ನಾಯಕತ್ವ ಹರಸಾಹಸ ನಡೆಸುತ್ತಿರುವ ಬೆನ್ನಲ್ಲೇ, ಸಚಿವ ಸ್ಥಾನ ವಂಚಿತ ಮೈಸೂರು ಜಿಲ್ಲೆಯ ಮೂವರು ಹಿರಿಯ ನಾಯಕರು ಮೈಸೂರಿನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.
ಈ ಬೆಳವಣಿಗೆ ಕಾಂಗ್ರೆಸ್‌ನೊಳಗಿನ ಹೊಸ ರಾಜಕೀಯ ಸಮೀಕರಣಗಳ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರ ಆಪ್ತರು ಹಾಗೂ ಮಾಜಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಮತ್ತು ತನ್ವೀರ್ ಸೇಠ್ ಅವರು ಸಭೆಯ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸದೆ, ಇದು ‘ಹೊಸ ಆರಂಭ ಹಾಗೂ ಶಕ್ತಿ ಪ್ರದರ್ಶನ’ದ ಮುನ್ನುಡಿ ಎಂದು ಹೇಳಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಸಭೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಅಸಮಾಧಾನಗೊಂಡ ನಾಯಕರನ್ನು ಸಮಾಧಾನಪಡಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವುದಿಲ್ಲ’
ತನ್ವೀರ್ ಸೇಠ್ ಮಾತನಾಡಿ, “ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ನಾನು ಹೇಳುವುದಿಲ್ಲ. ಅದೇ ರೀತಿ ಎಲ್ಲವೂ ಸರಿಯಿಲ್ಲ ಎಂದೂ ಹೇಳುವುದಿಲ್ಲ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಆದರೆ, ಮೂವರು ನಾಯಕರಿಗೆ ಅನ್ಯಾಯವಾಗಿದೆ ಎಂಬುದನ್ನು ಅವರು ಬಹಿರಂಗವಾಗಿಯೇ ಒಪ್ಪಿಕೊಂಡರು. “ನಾವೆಲ್ಲರೂ ಒಟ್ಟಾಗಿ ಸೇರಿದ್ದೇವೆ. ನಮಗೆ ಎಲ್ಲಿ ಮತ್ತು ಏಕೆ ಅನ್ಯಾಯವಾಗಿದೆ ಎಂಬುದರ ಕುರಿತು ಚರ್ಚಿಸಿದ್ದೇವೆ. ಈ ಅನ್ಯಾಯ ಏಕೆ ನಡೆಯಿತು ಎಂಬುದನ್ನು ಹೈಕಮಾಂಡ್ ಬಳಿ ಮಾತನಾಡುತ್ತೇವೆ” ಎಂದು ಸೇಠ್ ಹೇಳಿದರು.
ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಸೇಠ್, ಮೂವರು ನಾಯಕರ ಸಭೆ ‘ಒಂದು ಆರಂಭ’ ಎಂದು ಹೇಳಿದರು. ಇದೇ ವೇಳೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದವನ್ನು ಸ್ಮರಿಸಿದ ಅವರು, ಮೂವರಿಗೂ ತಮ್ಮದೇ ಸಮುದಾಯಗಳಲ್ಲಿ ಸ್ವತಂತ್ರ ಬೆಂಬಲವಿದೆ ಎಂದು ಒತ್ತಿ ಹೇಳಿದರು.

‘ಸಚಿವರಾಗದಿದ್ದರೂ ನಮ್ಮ ಶಕ್ತಿ ತೋರಿಸುತ್ತೇವೆ’
“ನಮ್ಮ ಶಕ್ತಿಯನ್ನು ಪ್ರದರ್ಶಿಸಲು ನಾವು ಸಚಿವರಾಗಬೇಕಿಲ್ಲ. ನಮ್ಮ ಮೂವರಿಗೂ ನಮ್ಮದೇ ಸಮುದಾಯಗಳ ಬೆಂಬಲವಿದೆ. ಸೂಕ್ತ ಸಮಯ ಬಂದಾಗ ನಮ್ಮ ಶಕ್ತಿಯ ಬಗ್ಗೆ ಮಾತನಾಡುತ್ತೇವೆ” ಎಂದು ತನ್ವೀರ್ ಸೇಠ್ ಹೇಳಿದರು.
ಮಹದೇವಪ್ಪ ಅವರು ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದರು. “ನಾವಿಬ್ಬರು ಅಲ್ಲ, ಮೂವರೂ ಸೇರಿ ಸಭೆ ನಡೆಸಿದ್ದೇವೆ. ಸದ್ಯಕ್ಕೆ ರಾಜಕೀಯದ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ. ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ಚರ್ಚಿಸಿದ್ದೇವೆ” ಎಂದು ಹೇಳಿದರು.
‘ಜಿಲ್ಲಾ ಉಸ್ತುವಾರಿ ಸಚಿವನಾಗುತ್ತಿರುವುದರಿಂದ ಮಾರ್ಗದರ್ಶನ ಕೇಳಿದೆ’
ಈ ನಡುವೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೂವರು ನಾಯಕರನ್ನು ಭೇಟಿಯಾಗಿ ಮಾರ್ಗದರ್ಶನ ಕೇಳಿದ್ದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




