'ಅವರಿಗಂತೂ ಮತದಾರರ ಭಯವೇ ಇಲ್ಲದಂತಾಗಿದೆ': ಕಪಾಳ ಮೋಕ್ಷ ಮಾಡಿದ ಸಚಿವ ಪರ್ವೇಶ್ ವರ್ಮಾ ವಿರುದ್ಧ ರಾಹುಲ್ ಗಾಂಧಿ ಕಿಡಿ!
ಚುನಾವಣಾ ಗೆಲುವು ಖಚಿತ ಎಂದು ಭಾವಿಸಿದಾಗ ಅಧಿಕಾರದಲ್ಲಿರುವವರು ಸಾರ್ವಜನಿಕರ ಒಪ್ಪಿಗೆಯ ಬಗ್ಗೆ ಕಡಿಮೆ ಕಾಳಜಿ ವಹಿಸಬಹುದು ಎಂಬುದನ್ನು ಈ ಘಟನೆಯು ತೋರಿಸಿಕೊಟ್ಟಿದೆ ಎಂದು ಹೇಳಿದರು.

ನವದೆಹಲಿ: ತಿಲಕ್ ನಗರದಲ್ಲಿ ರಸ್ತೆ ಪರಿಶೀಲನೆಯ ವೇಳೆ ದೆಹಲಿ ಪಿಡಬ್ಲ್ಯೂಡಿ (PWD) ಸಚಿವ ಪರ್ವೇಶ್ ವರ್ಮಾ ಅವರು ಯುವಕರೊಬ್ಬರಿಗೆ ಕಪಾಳಮೋಕ್ಷ ಮಾಡಿರುವುದು ಇದೀಗ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ; ಈ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿಯನ್ನು ಟೀಕಿಸಿದ್ದಾರೆ.
ಭಾನುವಾರ, ಹೊಸದಾಗಿ ನಿರ್ಮಿಸಲಾದ ರಸ್ತೆ ಪರಿಶೀಲನೆ ವೇಳೆ ವರ್ಮಾ ಅವರು ಅಲ್ಲಿ ಉಪಸ್ಥಿತರಿದ್ದರು. ತಿಲಕ್ ನಗರದ ಆಪ್ ಶಾಸಕ ಜರ್ನೈಲ್ ಸಿಂಗ್, ರಸ್ತೆಯ ಮೇಲ್ಭಾಗದ ಕೆಲ ಭಾಗಗಳನ್ನು ಕೈಯಿಂದಲೇ ಕಿತ್ತು ತೆಗೆದು ಅದರ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರು. ಈ ಪ್ರಕ್ರಿಯೆಯನ್ನು ಹತ್ತಿರದಲ್ಲಿದ್ದ ಯುವಕರೊಬ್ಬರು ಚಿತ್ರೀಕರಿಸುತ್ತಿದ್ದಾಗ, ವರ್ಮಾ ಅವರು ಆತನಿಗೆ ಕಪಾಳಮೋಕ್ಷ ಮಾಡಿದರು ಎಂದು ಆರೋಪಿಸಲಾಗಿದೆ.
'ಟೈಮ್ಸ್ ನೌ' ವರದಿ ಪ್ರಕಾರ, ಈ ಘಟನೆಯ ವಿಡಿಯೋವನ್ನು ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಂತರ ಅದು ರಾಜಕೀಯ ವಿವಾದಕ್ಕೆ ಕಾರಣವಾಯಿತು.
ಈ ವಿಡಿಯೋಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ನಾಯಕರ ಅಹಂಕಾರವನ್ನು ಟೀಕಿಸಿದರು ಮತ್ತು ಈ ಘಟನೆಯು ಮತದಾರರಿಗೆ ಇನ್ನು ಮುಂದೆ ಹೆದರದ ಸರ್ಕಾರದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
'ದೆಹಲಿ ಸರ್ಕಾರದ ಬಿಜೆಪಿ ಸಚಿವರೊಬ್ಬರು ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಕಂಡುಬರುತ್ತಿದೆ. ಆತನ ತಪ್ಪೇನು? ಆತ ವಿಡಿಯೋ ಮಾಡುತ್ತಿದ್ದನು. ಸಚಿವರ ಕಣ್ಣ ಮುಂದೆಯೇ ರಸ್ತೆಯನ್ನು ಪರೀಕ್ಷಿಸಲಾಗುತ್ತಿತ್ತು ಮತ್ತು ಯುವಕನ ಕೈಯಲ್ಲಿ ಕ್ಯಾಮೆರಾ ಇತ್ತು. ಮತದಾರರಿಗೆ ಇನ್ನು ಮುಂದೆ ಹೆದರದ ಅಧಿಕಾರದ ನಿಜರೂಪ ಇದಾಗಿದೆ' ಎಂದು ಹೇಳಿದರು.
'ಬೀದಿಯಲ್ಲಿ ಪ್ರಶ್ನೆ ಕೇಳಿದರೆ - ಕಪಾಳಮೋಕ್ಷ; ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಶ್ನಿಸಿದರೆ - ಲಾಠಿಚಾರ್ಜ್; ಸಂಸತ್ತಿನಲ್ಲಿ ಪ್ರಶ್ನೆ ಕೇಳಿದರೆ - ಮೈಕ್ ಆಫ್ ಮಾಡಲಾಗುತ್ತದೆ. ಚುನಾವಣೆಗಳ ಮೂಲಕ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬ ಭಯ ಅವರಿಗಿಲ್ಲದಿರುವುದೇ ಇದಕ್ಕೆ ಕಾರಣ. ಮತ ಕಳ್ಳತನವು ಕೇವಲ ಚುನಾವಣಾ ಫಲಿತಾಂಶವನ್ನಷ್ಟೇ ಅಲ್ಲ, ಅದರ ನಂತರದ ಅಹಂಕಾರವನ್ನೂ ತಂದೊಡ್ಡುತ್ತದೆ. ಗೆಲುವನ್ನು ಸಹಜವೆಂದು ಭಾವಿಸುವ ಸರ್ಕಾರಕ್ಕೆ ನಿಮ್ಮ ಒಪ್ಪಿಗೆಯ ಅಗತ್ಯವಿರುವುದಿಲ್ಲ; ಬದಲಾಗಿ, ಅದು ನಿಮ್ಮ ಮೌನ ಮತ್ತು ಕುರುಡು ನಿಷ್ಠೆಯನ್ನು ಬಯಸುತ್ತದೆ' ಎಂದು ಅವರು ಹೇಳಿದರು.
'ಎಕ್ಸ್'ನಲ್ಲಿನ ಪೋಸ್ಟ್ ಒಂದರಲ್ಲಿ, ಚುನಾವಣಾ ಗೆಲುವು ಖಚಿತ ಎಂದು ಭಾವಿಸಿದಾಗ ಅಧಿಕಾರದಲ್ಲಿರುವವರು ಸಾರ್ವಜನಿಕರ ಒಪ್ಪಿಗೆಯ ಬಗ್ಗೆ ಕಡಿಮೆ ಕಾಳಜಿ ವಹಿಸಬಹುದು ಎಂಬುದನ್ನು ಈ ಘಟನೆಯು ತೋರಿಸಿಕೊಟ್ಟಿದೆ ಎಂದು ಗಾಂಧಿ ಹೇಳಿದರು.
ಏನಿದು ವಿವಾದ?
ತಿಲಕ್ ನಗರದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಯುತ್ತಿದ್ದಾಗ ಈ ವಿವಾದ ಉಂಟಾಯಿತು. ಸ್ಥಳದಲ್ಲಿದ್ದ ಜರ್ನೈಲ್ ಸಿಂಗ್ ಅವರು ಹೊಸದಾಗಿ ನಿರ್ಮಿಸಲಾದ ರಸ್ತೆಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು ತಮ್ಮ ಕೈಯಿಂದಲೇ ರಸ್ತೆಯ ಮೇಲ್ಭಾಗದ ಕೆಲವೊಂದು ಭಾಗಗಳನ್ನು ಕಿತ್ತು ತೆಗೆದರು.
ಒಬ್ಬ ಯುವಕ ಈ ದೃಶ್ಯಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಾಗ, ವರ್ಮಾ ಆತನಿಗೆ ಕಪಾಳಮೋಕ್ಷ ಮಾಡಿದರು ಎಂದು ಆರೋಪಿಸಲಾಗಿದೆ. ಈ ಘಟನೆಯು ವಿಡಿಯೋದಲ್ಲಿ ಸೆರೆಯಾಗಿದ್ದು, ನಂತರ ಸಿಂಗ್ ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.
ಈ ವಿಡಿಯೋದ ಹಿನ್ನೆಲೆಯಲ್ಲಿ, ವರ್ಮಾ ಅವರನ್ನು ಬಂಧಿಸಬೇಕೆಂದು ಆಮ್ ಆದ್ಮಿ ಪಕ್ಷದ (AAP) ನಾಯಕರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



