ಗುಂಡಿ ಮುಚ್ಚಲು ಕ್ಷೇತ್ರಕ್ಕೊಂದು ದರ, ಗುಂಡಿಗೊಂದು ಬೆಲೆ: ಇದು ರಸ್ತೆ ರಿಪೇರಿಯೋ? ಸರ್ಕಾರದ ಖಜಾನೆ ಲೂಟಿಯೋ?
ಒಂದೇ ನಗರದಲ್ಲಿ, ಒಂದೇ ರೀತಿಯ ರಸ್ತೆಗಳಿಗೆ ಇಷ್ಟು ಭಾರೀ ದರ ವ್ಯತ್ಯಾಸ ಏಕೆ? ಒಂದು ಕಡೆ ರೂ.1,200 ಕ್ಕೆ ಗುಂಡಿ ಮುಚ್ಚಿದರೆ, ಮತ್ತೊಂದು ಕಡೆ ರೂ.1 ಲಕ್ಷ ಹೇಗೆ? ಈ ಅಂಕಿಅಂಶಗಳೇ ಹೇಳುತ್ತಿವೆ ಇದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ‘ಶೇ.100 ಕಮಿಷನ್’ ಲೂಟಿಯಾಗಿದೆ.

ಬೆಂಗಳೂರು: ರಾಜ್ಯ ಸರ್ಕಾರ ನಗರದ ರಸ್ತೆಗಳಲ್ಲಿರುವ ಒಂದೊಂದು ಗುಂಡಿ ಮುಚ್ಚಲೂ ರೂ.1 ಲಕ್ಷ ಖರ್ಚು ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿರುವ ಗುಂಡಿ ಬಿದ್ದು ಹಾಳಾದ ರಸ್ತೆಗಳು ಇಂದು ನಿಜವಾಗಿಯೂ ಸಾವಿನ ಬಲೆಗಳಾಗಿ ಮಾರ್ಪಟ್ಟಿವೆ. ಜನರು ಕಟ್ಟುವ ತೆರಿಗೆ ಹಣ ರಸ್ತೆ ಗುಂಡಿಗಳನ್ನು ಮುಚ್ಚಲು ಬಳಕೆಯಾಗುತ್ತಿದೆಯೋ, ಅಥವಾ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಜೇಬು ತುಂಬಲು ಹೋಗುತ್ತಿದೆಯೋ ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಗಂಭೀರವಾಗಿ ಮೂಡಿದೆ. ಸರ್ಕಾರದ ಅಧಿಕೃತ ಅಂಕಿಅಂಶಗಳೇ ಈ ಅನುಮಾನಕ್ಕೆ ಬಲ ತುಂಬುತ್ತಿವೆ ಎಂದು ಹೇಳಿದ್ದಾರೆ.
ಸದನಕ್ಕೆ ಸರ್ಕಾರವೇ ನೀಡಿರುವ ಮಾಹಿತಿಯ ಪ್ರಕಾರ ಕಳೆದ 6 ತಿಂಗಳಲ್ಲಿ ಒಟ್ಟು 41,150 ಗುಂಡಿಗಳಿದ್ದು, 39,887 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ 1,263 ಗುಂಡಿಗಳನ್ನು ಮುಚ್ಚಬೇಕಿದ್ದು, ಈವರೆಗೂ ರೂ.33.85 ಕೋಟಿವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದೆ. ಆದರೆ ನೆಲದ ವಾಸ್ತವಿಕತೆ ಏನು ಹೇಳುತ್ತಿದೆ? ನಗರದ ರಸ್ತೆಗಳಲ್ಲಿ ಗುಂಡಿಗಳು ಇನ್ನೂ ರಾಜಾರೋಷವಾಗಿ ಕಂಡು ಬರುತ್ತಿವೆ, ವಾಹನ ಸವಾರರ ಜೀವಕ್ಕೆ ಅಪಾಯ ಉಂಟುಮಾಡುತ್ತಿವೆ. ಹೀಗಿದ್ದರೂ “ಎಲ್ಲವೂ ಸರಿಯಾಗಿದೆ” ಹಾಗೂ ಬಿದ್ದಿರುವ ಎಲ್ಲಾ ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಸರ್ಕಾರದ ಹೇಳಿಕೆ ಜನರನ್ನು ಮೋಸಗೊಳಿಸುವ ಪ್ರಯತ್ನವಲ್ಲವೇ? ಒಂದು ಗುಂಡಿಗೆ ರೂ.1 ಲಕ್ಷ? ಇದು ರಸ್ತೆ ಕಾಮಗಾರಿಯೋ ಅಥವಾ ಚಿನ್ನದ ಲೇಪನವೇ? ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಕ್ಷೇತ್ರವಾರು ವೆಚ್ಚಗಳನ್ನು ಗಮನಿಸಿದರೆ ಭ್ರಷ್ಟಾಚಾರದ ಗಂಧ ಸ್ಪಷ್ಟವಾಗಿ ಮೂಡುತ್ತದೆ. ಚಾಮರಾಜಪೇಟೆಯಲ್ಲಿ 140 ಗುಂಡಿಗಳಿಗೆ ರೂ.1.40 ಕೋಟಿ (ಸರಾಸರಿ ರೂ.1 ಲಕ್ಷ ಪ್ರತಿ ಗುಂಡಿಗೆ), ಶಿವಾಜಿನಗರದಲ್ಲಿ ಪ್ರತಿ ಗುಂಡಿಗೆ ಸರಾಸರಿ ರೂ.60,000, ಗೋವಿಂದರಾಜನಗರದಲ್ಲಿ ಪ್ರತಿ ಗುಂಡಿಗೆ ಸರಾಸರಿ ರೂ.49,000 ವೆಚ್ಚವಾಗಿದೆ.
ಒಂದೇ ನಗರದಲ್ಲಿ, ಒಂದೇ ರೀತಿಯ ರಸ್ತೆಗಳಿಗೆ ಇಷ್ಟು ಭಾರೀ ದರ ವ್ಯತ್ಯಾಸ ಏಕೆ? ಒಂದು ಕಡೆ ರೂ.1,200 ಕ್ಕೆ ಗುಂಡಿ ಮುಚ್ಚಿದರೆ, ಮತ್ತೊಂದು ಕಡೆ ರೂ.1 ಲಕ್ಷ ಹೇಗೆ? ಈ ಅಂಕಿಅಂಶಗಳೇ ಹೇಳುತ್ತಿವೆ ಇದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ‘ಶೇ.100 ಕಮಿಷನ್’ ಲೂಟಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಒಂದು ಗುಂಡಿ ಮುಚ್ಚಲು ಇಷ್ಟೊಂದು ಹಣ ಖರ್ಚಾಗುತ್ತಿದ್ದರೆ, ಅಲ್ಲಿ ಬಳಸಿರುವ ವಸ್ತುಗಳು ಯಾವ ಮಟ್ಟದವು? ಡಾಂಬರು ಹಾಕಿದ್ದೀರಾ, ಅಥವಾ ಬಂಗಾರವೋ? ಸಾರ್ವಜನಿಕರ ಬೆವರಿನ ಹಣವನ್ನು ಹೀಗೆ ದುರುಪಯೋಗ ಮಾಡುವುದು ಅಕ್ಷಮ್ಯ ಅಪರಾಧ. ಲಕ್ಷಾಂತರ ರೂಪಾಯಿ ಖರ್ಚಾದ ಸ್ಥಳಗಳಲ್ಲಿ ಇಂದಿಗೂ ಗುಂಡಿಗಳು ಕಾಣಿಸಿಕೊಳ್ಳುತ್ತಿದ್ದರೆ, ಆ ಹಣದ ಗತಿ ಏನು ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕು.
ಬೆಂಗಳೂರಿನ ರಸ್ತೆಗಳನ್ನು ಸುಧಾರಿಸುವ ಬದಲು, ಸರ್ಕಾರಿ ಖಜಾನೆಯನ್ನು ಖಾಲಿ ಮಾಡುವ ಕೆಲಸವೇ ನಡೆಯುತ್ತಿರುವುದು ವಿಷಾದನೀಯ. ಈ ಹಗರಣದ ಬಗ್ಗೆ ತಕ್ಷಣವೇ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ “ಬ್ರ್ಯಾಂಡ್ ಬೆಂಗಳೂರು” ಹೆಸರಿನಲ್ಲಿ ನಡೆಯುತ್ತಿರುವ ಈ ‘ಬ್ರ್ಯಾಂಡ್ ಲೂಟಿ’ ನಿಲ್ಲುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದೂ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



