MGR ಆಗೋಕೆ ಹೊರಟಿದ್ದಾರೆ, ಅದೆಲ್ಲಾ ಸಿನಿಮಾದಲ್ಲಷ್ಟೇ ಸಾಧ್ಯ, ಇಲ್ಲಿ ನಡೆಯಲ್ಲ: ವಿಜಯ್ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ
ಇಲ್ಲಿ ಸಾಕಷ್ಟು ಜನ ಕನ್ನಡಿಗರು ಇದ್ದೀರಿ. ನನ್ನ ಕ್ಷೇತ್ರದಲ್ಲಿ ಜಮೀನು ಹೊಂದಿರುವ ಈ ಭಾಗದ ಅನೇಕರಿಗೆ ನಮ್ಮ ಕ್ಷೇತ್ರದಲ್ಲೇ ಮತ ಇಟ್ಟುಕೊಳ್ಳಿ ಎಂದು ನಾನು ಆಹ್ವಾನ ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ.

ಕೃಷ್ಣಗಿರಿ: ನಾವೆಲ್ಲರೂ ಪರಸ್ಪರ ಅಣ್ಣ-ತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಕೆಲಮಂಗಲಂ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ. ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ವಿಧಾನಸಭಾ ಕ್ಷೇತ್ರ. ನನ್ನ ಕ್ಷೇತ್ರ ಕನಕಪುರದೊಂದಿಗೆ ಗಡಿಯನ್ನು ಈ ಕ್ಷೇತ್ರ ಹಂಚಿಕೊಂಡಿದೆ. ಇಲ್ಲಿ ಸಾಕಷ್ಟು ಜನ ಕನ್ನಡಿಗರು ಇದ್ದೀರಿ. ನನ್ನ ಕ್ಷೇತ್ರದಲ್ಲಿ ಜಮೀನು ಹೊಂದಿರುವ ಈ ಭಾಗದ ಅನೇಕರಿಗೆ ನಮ್ಮ ಕ್ಷೇತ್ರದಲ್ಲೇ ಮತ ಇಟ್ಟುಕೊಳ್ಳಿ ಎಂದು ನಾನು ಆಹ್ವಾನ ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ.
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ ಎಂದು ಥಳಪತಿ ವಿಜಯ್ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ನೀವುಗಳು ಇಲ್ಲಿನ ಅಭ್ಯರ್ಥಿ ರಾಮಚಂದ್ರ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಇಲ್ಲೇ ಮತ ಹೊಂದಿದ್ದೀರಿ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ಬಳಿಕ ಮತದಾರರೆಲ್ಲರೂ ನಿಮ್ಮ ಕ್ಷೇತ್ರದಲ್ಲೇ ಮತದಾನ ಮಾಡಲು ಬಸುತ್ತಿದ್ದಾರೆ ಇಲ್ಲಿ ಕಲ್ಪಿಸಲಾಗಿರುವ ಯೋಜನೆಗಳೇನು ಎಂದು ನಾನು ರಾಮಚಂದ್ರ ಅವರನ್ನು ಕೇಳಿದ್ದೆ. ಅವರು ನಮಗೆ ಮಾಹಿತಿ ನೀಡಿದರು. ಆ ಮಾಹಿತಿ ಬಗ್ಗೆ ನಾನು, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ ಅವರೆಲ್ಲರೂ ಸೇರಿ ಚರ್ಚೆ ಮಾಡಿ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಗ್ಯಾರಂಟಿ ಗುಟ್ಟು ಬಿಚ್ಚಿಟ್ಟಿದ್ದಾರೆ
ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇತ್ತು. ಮೋದಿ ಸೇರಿದಂತೆ ಬಿಜೆಪಿಯವರೆಲ್ಲರೂ ಅಚ್ಚೇದಿನ ನೀಡುವುದಾಗಿ ಹೇಳಿದ್ದರು. ನಿಮಗೆ 15 ಲಕ್ಷ ಹಾಕುತ್ತೇವೆ ಎಂದು ನಿಮ್ಮಿಂದ ಜನಧನ್ ಖಾತೆ ತೆರೆಸಿದರು. ನಿಮಗೆ ಆ ಹಣ ಬಂತಾ? ಆದರೆ ನಾವು ಪಂಚ ಗ್ಯಾರಂಟಿ ಭರವಸೆ ನೀಡಿದೆವು. ನಾವು ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ, 200 ಯೂನಿಟ್ ವರೆಗೂ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ 3 ಸಾವಿರ ವರೆಗೂ ನಿರುದ್ಯೋಗ ಭತ್ಯೆ ನೀಡಿದ್ದೇವು ಎಂದು ಹೇಳಿದ್ದಾರೆ.
ಇಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ತಮಿಳುನಾಡಿನಾದ್ಯಂತ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2 ಸಾವಿರ ಹಣ ನೀಡುವ ಭರವಸೆ ನೀಡಿದ್ದಾರೆ. ಇನ್ನು ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ನೀಡುವ ಭರವಸೆ ನೀಡಲಾಗಿದೆ.
ಡಿಎಂಕೆ, ಕಾಂಗ್ರೆಸ್ ಪಕ್ಷಗಳು ಕೊಟ್ಟ ಮಾತಿನಂತೆ ನಡೆಯುವ ಪಕ್ಷಗಳು. ನಮ್ಮ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದೇ ರೀತಿ ನಿಮ್ಮ ರಾಜ್ಯದಲ್ಲಿ ರೈತರಿಗೆ ಮೀಟರ್ ರಹಿತ ಪಂಪ್ ಸೆಟ್ ನೀಡುವ ಭರವಸೆ ನೀಡಿದ್ದೇವೆ. ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನದ ಮೂಲಕ 2 ಸಾವಿರ, ವಿಕಲಾಂಗರಿಗೆ 2500 ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಮತ್ತೊಮ್ಮೆ ಇಂಡಿಯಾ ಕೂಟ ಅಧಿಕಾರಕ್ಕೆ ಈ ಎಲ್ಲವುಗಳ ಲಾಭ ಪಡೆಯಬಹುದು ಎಂದು ಭರವಸೆ ನೀಡಿದ್ದಾರೆ.
ನಾವು ನೀವೆಲ್ಲರೂ ಒಂದೇ ಮನೆಯವರು ಕೇವಲ ಒಂದು ಗೋಡೆ ಅಂತರವಿದೆ. ಬಿಜೆಪಿಯವರು ಏನಿದ್ದರೂ ಸಮಾಜ ಒಡೆಯುವ ಕತ್ತರಿ ಇದ್ದಂತೆ, ನಾವು ಸೂಜಿಯಂತೆ ಎಲ್ಲರನ್ನು ಸೇರಿಸುತ್ತೇವೆ. ರಾಮಚಂದ್ರ ಅವರು ನಿಮ್ಮ ಬಳಿ ಲಂಚ ಪಡೆದಿದ್ದಾರಾ? ಮೋಸ ಮಾಡಿದ್ದಾರಾ? ಇಲ್ಲ. ಸರಳ ನಾಯಕತ್ವದಲ್ಲಿ ನಿಮಗಾಗಿ ಅವರು ಶ್ರಮಿಸುತ್ತಿದ್ದಾರೆ.
ಕಾಂಗ್ರೆಸ್, ಡಿಎಂಕೆ, ಕಮ್ಯುನಿಷ್ಟ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ 20 ಪಕ್ಷಗಳ ಶಕ್ತಿ ರಾಮಚಂದ್ರ ಅವರ ಪರವಾಗಿದೆ. ಅವರ ಗೆಲುವು ನಿಮ್ಮ ಗೆಲುವು, ಅವರ ಶ್ರಮ ನಿಮಗೆ ಫಲ ಎಂದು ಇಂಡಿಯಾ ಕೂಟದ ಅಭ್ಯರ್ಥಿ ರಾಮಚಂದ್ರ ಪರ ಮತಯಾಚನೆ ಮಾಡಿದ್ದಾರೆ.
ಈ ಹಿಂದೆ ರಾಮಚಂದ್ರ ಅವರನ್ನು 56 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ. ಕನಕಪುರದ ಜನ ಅಶೋಕ್ ವಿರುದ್ಧ ನನ್ನನ್ನು 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ನೀವು ರಾಮಚಂದ್ರ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಚುನಾವಣೆಯಲ್ಲಿ ರಾಮಚಂದ್ರ ಅವರನ್ನು ಗೆಲ್ಲಿಸಿದ ನಂತರ ನನ್ನನ್ನು ಕರೆಯಿರಿ ನಾನು ಬರುತ್ತೇನೆ ಎಂದು ಡಿಕೆ ಶಿವಕುಮಾರ್ ಅಭಯ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




