ರಾಜಕೀಯ

ವಿಷ ಸರ್ಪಕ್ಕೆ ಹಾಲೆರೆಯಲು ಸಾಧ್ಯವೇ..? ನೋಂದಣಿ ಮಾಡಿಸಿಕೊಂಡಿದ್ದರೆ ಲೆಟರ್‌ಹೆಡ್‌ನಲ್ಲಿ ದೂರು ದಾಖಲಿಸಿ; RSSಗೆ ಪ್ರಿಯಾಂಕ್ ಖರ್ಗೆ ಸವಾಲು; Video

ಆರ್‌ಎಸ್‌ಎಸ್‌ ವಿಷಸರ್ಪ, ಅವನ್ನು ಹೊಡೆದು ಸಾಯಿಸಿ’ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರುದ್ಧ ಯಾರೋ ದೂರು ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್‌ ಯಾಕೆ ದೂರು ದಾಖಲಿಸಿಲ್ಲ?

ವಿಷ ಸರ್ಪಕ್ಕೆ ಹಾಲೆರೆಯಲು ಸಾಧ್ಯವೇ..? ನೋಂದಣಿ ಮಾಡಿಸಿಕೊಂಡಿದ್ದರೆ ಲೆಟರ್‌ಹೆಡ್‌ನಲ್ಲಿ ದೂರು ದಾಖಲಿಸಿ; RSSಗೆ ಪ್ರಿಯಾಂಕ್ ಖರ್ಗೆ ಸವಾಲು; Video
ಪ್ರಿಯಾಂಕ್ ಖರ್ಗೆ
Published On :

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದೇನು..? ವಿಷಸರ್ಪಗಳನ್ನು ಹೊಡೆಯಿರಿ ಎಂದಿದ್ದಾರೆ. ವಿಷ ಸರ್ಪ ಎದುರಾದರೆ ಯಾರಾದರೂ ಹಾಲು ಎರೆಯಲು ಆಗುತ್ತದೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಹೇಳಿದ್ದು, ಈ ಮೂಲಕ ತಮ್ಮ ತಂದೆ ಹಾಗೂ ಎಐಸಿಸಿ ಅಧ್ಯಕ್ಷರು ಆರೆಸ್ಸೆಸ್‌ ವಿರುದ್ಧ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ವಿಷಸರ್ಪ, ಅವನ್ನು ಹೊಡೆದು ಸಾಯಿಸಿ’ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿರುದ್ಧ ಯಾರೋ ದೂರು ಸಲ್ಲಿಸಿದ್ದಾರೆ. ಆರ್‌ಎಸ್‌ಎಸ್‌ ಯಾಕೆ ದೂರು ದಾಖಲಿಸಿಲ್ಲ?. ಅವರು ನೋಂದಣಿ ಮಾಡಿಸಿಕೊಂಡಿದ್ದರೆ ತಾವೇ ಲೆಟರ್‌ಹೆಡ್‌ನಲ್ಲಿ ದೂರು ದಾಖಲಿಸಲಿ ಎಂದು ಸವಾಲು ಹಾಕಿದ್ದಾರೆ.

ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ತತ್ವ ನಮ್ಮದು. ನಾವು ಬುದ್ಧ, ಬಸವ, ಅಂಬೇಡ್ಕರ್‌ ತತ್ವಗಳನ್ನು ಹೊಂದಿದ್ದೇವೆ. ಕೆಲವೊಬ್ಬರು ಈ ತತ್ವಗಳ ಹಾಗೂ ಸಂವಿಧಾನ ವಿರೋಧಿ ಸಿದ್ದಾಂತ ಹೊಂದಿರುತ್ತಾರೆ. ಅದು ಸರಿಯಲ್ಲ ಎನ್ನುವುದು ನಮ್ಮ ವೈಯಕ್ತಿಕ ಅಭಿಪ್ರಾಯ. ಅಷ್ಟಕ್ಕೂ ಅವರು ಹೇಳಿದ್ದೇನು? ವಿಷಸರ್ಪಗಳನ್ನು ಹೊಡೆಯಿರಿ ಎಂದಿದ್ದಾರೆ. ವಿಷ ಸರ್ಪ ಎದುರಾದರೆ ಯಾರಾದರೂ ಹಾಲು ಎರೆಯಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಹಿಮಂತ ಬಿಸ್ವಾ ಶರ್ಮಾ ಸೋಲಿನ ಭೀತಿಯಲ್ಲಿ ಏನೋನೊ ಮಾತನಾಡುತ್ತಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಅವರ ಡ್ಯಾಡಿ ಮೋದಿ ಅವರೇ ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಉತ್ತರ ಕೊಟ್ಟಿಲ್ಲ. ಇವರೇನು ಕೊಡುತ್ತಾರೆ?

ಅಸ್ಸಾಂ ಮೂಲಕ ಬಾಂಗ್ಲಾದೇಶದವರು ಕರ್ನಾಟಕೆ ಬರುತ್ತಾರೆ ಎನ್ನುತ್ತಾರೆ. ಹಾಗಾದರೆ‌ ಅಸ್ಸಾಂ ಸಿಎಂ, ಹೋಂ ಮಿನಿಸ್ಟರ್ ಕತ್ತೆ ಕಾಯುತ್ತಿದ್ದಾರಾ?’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬಿಜೆಪಿಗೆ ಸಂಸತ್ತಿನಲ್ಲಿ ಬಹುಮತವಿದೆ. ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ನಮ್ಮ ದೇಶದವರಲ್ಲ ಎಂದು ಹೇಳಿಬಿಡಲಿ. ಯುಎಇಯನ್ನು ತಬ್ಬಿಕೊಳ್ಳುತ್ತಾರೆ, ಅವರಿಂದ ತೈಲ ಬೇಕು, ಯೂರಿಯಾ ಬೇಕು. ಅಷ್ಟೇಯೇಕೆ ಕೇಸರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಅಲ್ಲಿಂದಲೇ ಬರುತ್ತದೆ. ಹಾಗಾದರೆ ಮುಸ್ಲಿಂ ರಾಷ್ಟ್ರಗಳ ಜೊತೆಗೆ ಎಲ್ಲ ವ್ಯಾಪಾರ ವ್ಯವಹಾರ ನಿಲ್ಲಿಸಿ ಬಿಡಲಿ. ಕೋವಿಡ್‌ ಸಮಯದಲ್ಲಿ ಅಮಿತ್ ಶಾರ ಮಗ ಐಪಿಎಲ್ ಆಡಿಸಿದ್ದು ಇದೇ ದುಬೈನಲ್ಲಿ. ಇಂಥ ಇಬ್ಬಗೆ ನೀತಿ ಯಾಕೆ? ಅವರ ಮಾತುಗಳನ್ನು ಅವರೇ ಸಮರ್ಥಿಸಿಕೊಳ್ಳಲು ಆಗುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರನ್ನು ಜೈಲಿಗೆ ಹಾಕಿಸುತ್ತೇವೆ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು. ಅವರಿಗೆ ತಾಕತ್ ಇದ್ದರೆ ಸ್ಕ್ವಾಡ್ ತಂದು ನಮ್ಮನ್ನು ಅರೆಸ್ಟ್ ಮಾಡಿಸಲಿ’ ಎಂದು ಸವಾಲು ಹಾಕಿದರು.

‘ನನ್ನದು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರದು ಒಂದೇ ಸಿದ್ಧಾಂತ. ಅದರಲ್ಲೇನಿದೆ ತಪ್ಪು? ನಮ್ಮದು ಬಸವ ಸಿದ್ಧಾಂತ. ನಮ್ಮಲ್ಲಿ ಇದ್ದಾಗ ನಾರಾಯಣ ಸ್ವಾಮಿ ಅವರಿಗೂ ಇತ್ತು. ಯಾವಾಗ ಬಿಜೆಪಿ ಹೋಗಿ ಆರ್‌ಎಸ್‌ಎಸ್ ಚಡ್ಡಿ ಹೊತ್ತುಕೊಂಡರೋ ಸಂಪೂರ್ಣ ಬದಲಾಗಿದ್ದಾರೆ’ ಎಂದು ಟೀಕಿಸಿದರು.

ಡಾ. ಶರಣಪ್ರಕಾಶ್ ಪಾಟೀಲ್ ಅವರು ಮಾತನಾಡಿ, ಬಿಜೆಪಿ ಮತ್ತು ಆರೆಸ್ಸೆಸ್‌ ಅನ್ನು “ವಿಷ ಸರ್ಪ” ಎಂದು ಹೇಳಿದ ವಿಷಯವನ್ನು ದೊಡ್ಡ ವಿವಾದವನ್ನಾಗಿ ಮಾಡಿರುವುದು ಅಸಂಬದ್ಧ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಿಂದೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ನಾಯಕರನ್ನು ಅರ್ಬನ್ ನಕ್ಸಲ್ ಎಂದು ಕರೆದು, ಸೋನಿಯಾ ಗಾಂಧಿ, ಜವಾಹರಲಾಲ್ ನೆಹರು ಸೇರಿದಂತೆ ಹಲವರ ಬಗ್ಗೆ ಟೀಕೆ ಮಾಡಿದ್ದಾರೆ. ಈಗ ಖರ್ಗೆ ಅವರ ಹೇಳಿಕೆಯನ್ನು ದೊಡ್ಡ ವಿಷಯ ಮಾಡುವುದು ಸರಿಯಲ್ಲ,” ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಟೀಕಿಸಿದ ಅವರು, “ಅಮಿತ್ ಷಾ ಅವರು ನೆಹರು ಅವರನ್ನು ಅನೇಕ ಬಾರಿ ಟೀಕಿಸಿದ್ದಾರೆ. ನೆಹರು ಅವರ ಸರಿಸಾಟಿ ಇದ್ದಾರಾ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.