CM ಕುರ್ಚಿ ಗುದ್ದಾಟ: ಕದನ ವಿರಾಮ ಬಿದ್ದಿಲ್ಲ; ಬ್ರೇಕ್ ಫಾಸ್ಟು, ಒಗ್ಗಟ್ಟು ಎಂಬುದೆಲ್ಲಾ ಬರೀ ನಾಟಕ- ಬಿಜೆಪಿ
ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಇಲ್ಲಿವರು ಬ್ರೇಕ್ ಫಾಸ್ಟ್ ನೆಪದಲ್ಲಿ ಅರ್ಧ ಇಡ್ಲಿ ತಿನ್ನಬೇಕಿತ್ತೇ?

ಹುಬ್ಬಳ್ಳಿ: ರಾಜ್ಯದಲ್ಲಿನ ಮುಖ್ಯಮಂತ್ರಿ ಕುರ್ಚಿ ಗುದ್ದಾಟಕ್ಕೆ ಕದನ ವಿರಾಮ ಬಿದ್ದಿಲ್ಲ. ಬ್ರೇಕ್ ಫಾಸ್ಟು, ಒಗ್ಗಟ್ಟು ಎಂಬುದೆಲ್ಲಾ ಬರೀ ನಾಟಕ ಎಂದು ಪ್ರತಿಪಕ್ಷ ಬಿಜೆಪಿ ಭಾನುವಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಎಂ ಹುದ್ದೆ ಮತ್ತು ಅಧಿಕಾರ ಹಂಚಿಕೆ ವಿಚಾರದಲ್ಲಿ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಇಲ್ಲಿವರು ಬ್ರೇಕ್ ಫಾಸ್ಟ್ ನೆಪದಲ್ಲಿ ಅರ್ಧ ಇಡ್ಲಿ ತಿನ್ನಬೇಕಿತ್ತೇ? ಎಂದು ವ್ಯಂಗ್ಯವಾಡಿದರು.
ಸಿಎಂ ಕುರ್ಚಿಗಾಗಿ ಸಿಎಂ - ಡಿಸಿಎಂ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಮೇಲ್ನೋಟಕ್ಕೆ ಎಲ್ಲವನ್ನೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎನ್ನುತ್ತಿದ್ದಾರೆ. ಆದರೆ ಈರ್ವರೂ ಜಟಾಪಟಿ ಮಾತ್ರ ಬಿಟ್ಟಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಬಾವಿಯಲ್ಲಿ ಕೆಡವಲು ನೋಡುತ್ತಿದ್ದಾರೆ ಅಷ್ಟೇ ಎಂದರು.
ಇಬ್ಬರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ ಕಾಂಗ್ರೆಸ್ ಅಲ್ಲಿ ಖರ್ಗೆ ಅವರದ್ದು ಏನೂ ನಡೆಯುವುದಿಲ್ಲ. ಎಲ್ಲಾ ನಕಲಿ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರದ್ದೇ ಫೈನಲ್. ಹಾಗಾಗಿ ಖರ್ಗೆ ಹೈಕಮಾಂಡ್ ಮೇಲೆ ಎತ್ತಿ ಹಾಕುತ್ತಿದ್ದಾರೆ. ಸಿಎಂ, ಡಿಸಿಎಂ ಒಗ್ಗಟ್ಟಿನ ಮಂತ್ರ ಜಪಿಸುತ್ತಲೇ ಜೈಲಿಗೂ ಹೋಗಿ ಶಾಸಕರ ಬೆಂಬಲ ಕೋರುತ್ತಿದ್ದಾರೆ. ಅಂದರೆ ಸಿಎಂ ಗದ್ದುಗೆ ಜಟಾಪಟಿ ಕಾಂಗ್ರೆಸ್ ನಲ್ಲಿ ಅದೆಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂಬುದನ್ನು ತೋರ್ಪಡಿಸುತ್ತದೆ. ಬ್ರೇಕ್ ಫಾಸ್ಟು, ಒಗ್ಗಟ್ಟು ಎಂಬುದೆಲ್ಲಾ ಒಂದು ನಾಟಕ ಎಂದು ಜೋಶಿ ಲೇವಡಿ ಮಾಡಿದರು.
ಒಗ್ಗಟ್ಟು ಒಗ್ಗಟ್ಟು ಎನ್ನುತ್ತಲೇ ಒಬ್ಬರಿಗೊಬ್ಬರು ಬಾವಿಗೆ ತಳ್ಳಲು ನೋಡುತ್ತಿದ್ದಾರೆ. ಸಿಎಂ ಕುರ್ಚಿ ಗುದ್ದಾಟಕ್ಕೆ ಕದನ ವಿರಾಮ ಬಿದ್ದಿಲ್ಲ. ಮುಸುಕಿನ ಗುದ್ದಾಟ ನಡೆದೇ ಇದೆ. ಈ ಬಡಿದಾಟದಲ್ಲಿ ರಾಜ್ಯದ ಹಿತವನ್ನು, ರೈತರ ಸಂಕಷ್ಟ ಸ್ಥಿತಿಯನ್ನು ಮರೆತು ಬಿಟ್ಟಿದ್ದಾರೆ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಬಡಿದಾಟದಲ್ಲಿ ರೈತರ ಮರೆತ ಸರ್ಕಾರ: ಸರ್ಕಾರ ಒಳ ಬಡಿದಾಟದಲ್ಲೇ ಹೆಚ್ಚಿದೆ. ಹಾಗಾಗಿ ರೈತರ ಬಗ್ಗೆ, ಯೋಜನೆ ಅನುಷ್ಠಾನ ಬಗ್ಗೆ ಗಮನ ಹರಿಸಿಲ್ಲ ಎಂದು ಆರೋಪಿಸಿದ ಸಚಿವ ಜೋಶಿ, ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ವಿಚಾರವಾಗಿ ಕೇಂದ್ರ ಸರ್ಕಾರ ಎಲ್ಲ ತರಹದ ಬೆಂಬಲ ನೀಡಿದೆ. ಅದನ್ನು ಅನುಷ್ಠಾನಕ್ಕೆ ತರಬೇಕಾದ್ದು ರಾಜ್ಯ ಸರ್ಕಾರದ ಕೆಲಸ ಎಂದು ಚಾಟಿ ಬೀಸಿದರು.
ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಉತ್ತಮ ಬೆಲೆಯನ್ನೂ ಕೊಡುತ್ತಿದೆ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿದೆ. ಮೆಕ್ಕೆಜೋಳಕ್ಕೂ ಬೆಂಬಲ ಬೆಲೆಯಿದೆ. ಹೀಗಿರುವಾಗ ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಡಿಸ್ಟಿಲರಿಗಳು ಅಬಕಾರಿ ಅಡಿಯಲ್ಲಿ ಬರುತ್ತವೆಯಾದ್ದರಿಂದ ಮಾನಿಟರ್ ಮಾಡಬೇಕು ಎಂದರು.

ಕುರ್ಚಿ ಗುದ್ದಾಟ: 'ಇನ್ನು ರಾಜಕಾರಣ ಇಲ್ಲ.. ಜನರ ಸೇವೆ, ಆಡಳಿತ ಅಷ್ಟೇ'; ಡಿಸಿಎಂ ಡಿ.ಕೆ ಶಿವಕುಮಾರ್ ಮಾರ್ಮಿಕ ಮಾತು
ಮನ್ ಕಿ ಬಾತ್ ಪ್ರೇರಣೆ: ಪ್ರಧಾನಿ ನರೇಂದ್ರ ಮೋದಿ ಅವರ "ಮನ್ ಕೀ ಬಾತ್" ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ. ಪ್ರತಿ ಬಾರಿಯೂ ಪ್ರಧಾನಿ ಮೋದಿ ಅವರು ದೇಶದೆಲ್ಲೆಡೆಯ ಹೊಸ ಹೊಸ ವಿಚಾರ, ಸಂಗತಿ, ಯೋಜನೆಗಳನ್ನು ಪ್ರಸ್ಥಾಪಿಸುತ್ತಿದ್ದಾರೆ. ಇದು ಎಲ್ಲರಿಗೂ ಪ್ರೇರಣದಾಯಕವಾಗಿದೆ ಎಂದು ಹೇಳಿದರು.
ನವೀಕರಿಸಬಹುದಾದ ಇಂಧನ ಇಲಾಖೆ ಮೂಲಕ ಸ್ಟಾರ್ಟ್ ಅಪ್ ಗಳಿಗೆ ಕೇಂದ್ರ ಸರ್ಕಾರ ರೂ. 100 ಕೋಟಿ ಒದಗಿಸಿದೆ. ಹೀಗೆ ಪ್ರತಿಯೊಂದಕ್ಕೂ ಪ್ರಧಾನಿ ಮೋದಿ ಮನ್ ಕೀ ಬಾತ್ ಮೂಲಕ ಉತ್ತೇಜನ, ಪ್ರೇರಣೆ ನೀಡುತ್ತಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


