ಬೇಹುಗಾರಿಕೆಯ ದೊಡ್ಡ ವೈಫಲ್ಯ: ಗೃಹ ಸಚಿವರ ರಾಜೀನಾಮೆಗೆ ಭಾಸ್ಕರ್ ರಾವ್ ಆಗ್ರಹ
ಬೆಂಗಳೂರು ನಗರ ಬೇಹುಗಾರಿಕಾ ದಳ, ನಗರ ಭಯೋತ್ಪಾದನಾ ನಿಗ್ರಹ ದಳ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಚಿಸಿದ ಆಂತರಿಕ ಭದ್ರತಾ ಇಲಾಖೆಗಳು ವಿಫಲವಾಗಿವೆ.

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಶಂಕಿತ ಉಗ್ರರು ರಾಜ್ಯ ಬಿಜೆಪಿ ಕಚೇರಿಯನ್ನು ವಿಫಲ ಯತ್ನ ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವುದು ರಾಜ್ಯದಲ್ಲಿ ಬೇಹುಗಾರಿಕೆಯ ಅತ್ಯಂತ ದೊಡ್ಡ ವೈಫಲ್ಯ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಟೀಕಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಕಚೇರಿಯನ್ನು ಭಯೋತ್ಪಾದಕರು ಗುರಿಯಾಗಿ ಇಟ್ಟುಕೊಂಡಿದ್ದರು. ಕಾರಣಾಂತರದಿಂದ ರಾಮೇಶ್ವರಂ ಕೆಫೆಗೆ ಹೋಗಿ ಬಾಂಬ್ ಸ್ಫೋಟ ನಡೆಸಿದ್ದು ಎನ್‍ಐಎ ತನಿಖೆ ವೇಳೆ ಗೊತ್ತಾಗಿದೆ. ಇದೇ ವಿಚಾರವನ್ನು ಅದು ಕೋರ್ಟಿಗೆ ತಿಳಿಸಿದೆ. ಬೇಹುಗಾರಿಕೆ ವಿಫಲತೆಗೆ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರೇ ಹೊಣೆಗಾರರು. ರಾಜ್ಯದ ಗೃಹ ಸಚಿವರು ಸಂಪೂರ್ಣ ಅಸಮರ್ಥರಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ನಗರ ಬೇಹುಗಾರಿಕಾ ದಳ, ನಗರ ಭಯೋತ್ಪಾದನಾ ನಿಗ್ರಹ ದಳ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಚಿಸಿದ ಆಂತರಿಕ ಭದ್ರತಾ ಇಲಾಖೆಗಳು ವಿಫಲವಾಗಿವೆ. ಈ ಸರಕಾರ ಅಧಿಕಾರಕ್ಕೆ ಬಂದು 16 ತಿಂಗಳಾದರೂ ಒಂದೇ ಒಂದು ಬಾರಿ ಈ ವಿಭಾಗಗಳ ಅವಶ್ಯಕತೆಗಳನ್ನು ಈಡೇರಿಸಿಲ್ಲ. ಇದೇ ಕಾರಣಕ್ಕೆ ಎನ್‍ಐಎ, ಕರ್ನಾಟಕದಲ್ಲಿ ಮಾಹಿತಿ ಸಂಗ್ರಹ ಮಾಡುವುದಲ್ಲದೆ, ದಾಳಿ, ಬಂಧನ, ತನಿಖೆ, ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುತ್ತಿದೆ ಎಂದರು.
ಹಿಂದೆ ಜಗದೀಶ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರಕಾರ ಇರುವಾಗ ಭಯೋತ್ಪಾದನೆ ಚಟುವಟಿಕೆ ಪತ್ತೆಗೆ ಪ್ರತ್ಯೇಕ ವಿಭಾಗ ರೂಪಿಸಿದ್ದರು. ಆದರೆ, ವಸೂಲಿ ವಿಚಾರ ಹೊರಬರುವ ಭಯದಿಂದ ಈಗಿನ ಸರ್ಕಾರ ಆ ವಿಭಾಗವನ್ನು ಸಮರ್ಪಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಭ್ರಷ್ಟಾಚಾರ, ಹಣದ ಪ್ರಭಾವದಿಂದ ಪೊಲೀಸ್ ಇಲಾಖೆಯು ಸರಿಯಾಗಿ ಕೆಲಸ ಮಾಡದಂತಾಗಿದೆ. ಇಲಾಖೆ ನಿಷ್ಕ್ರಿಯವಾಗಿದ್ದು, ರಾಜ್ಯದ ಜನರ ಸುರಕ್ಷತೆ ಜೊತೆ ಆಟವಾಡುವ ಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಬೆಂಗಳೂರು, ದೇಶ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಹಣಕಾಸು ಕೇಂದ್ರವೆನಿಸಿದೆ. ಈ ನಗರಕ್ಕೆ ಸಿಗಬೇಕಾದಷ್ಟು ರಕ್ಷಣೆ ಸಿಗುತ್ತಿಲ್ಲ. ಕಡಿಮೆ ಸಂಖ್ಯೆಯ ಪೊಲೀಸ್ ವ್ಯವಸ್ಥೆಯಿಂದ ತನಿಖೆ ಕಾರ್ಯ ನಡೆದಿದೆ. ಸರಕಾರವು ತಾನು ಕಾನೂನು ಮತ್ತು ಸುವ್ಯವಸ್ಥೆಗೆ ಬೇಕಾದ ಮೂಲಸೌಕರ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 16 ತಿಂಗಳಿನಲ್ಲಿ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಗೆ ಒಬ್ಬ ಎಸ್‍ಐ, ಒಬ್ಬ ಕಾನ್‍ಸ್ಟೆಬಲ್ ಕೂಡ ಸೇರಿಸಿಲ್ಲ; ಮೂಲಸೌಕರ್ಯ ಕೊಟ್ಟಿಲ್ಲ ಎಂದು ದೂರಿದರು.
ಮಹಿಳಾ ಸುರಕ್ಷತೆಯತ್ತ ಗಮನ ಕೊಡುತ್ತಿಲ್ಲ. ಕೇಂದ್ರ ಸರಕಾರ ನೀಡುವ ನಿರ್ಭಯಾ ನಿಧಿಯನ್ನೂ ಬಳಸಿಲ್ಲ. ಭಯೋತ್ಪಾದನೆ, ಮಾದಕವಸ್ತು ನಿಯಂತ್ರಣದಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ. ಮಾದಕವಸ್ತು ಮಾರಾಟ, ಸಾಗಾಟ ಸಂಬಂಧ ಸಣ್ಣಪುಟ್ಟ ಮಾರಾಟಗಾರರನ್ನು ಗುರಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕೋಟ್ಯಂತರ ರೂಪಾಯಿ ಕೊಟ್ಟು ಸಿಸಿಬಿಗೆ ಯಾಕೆ ಹೋಗುತ್ತಾರೆ? ಎಂದು ಕೇಳಿದ ಅವರು, ಸಿಸಿಬಿಯನ್ನು ಬಂದ್ ಮಾಡಿದರೆ, ಬೆಂಗಳೂರು ನಗರದ ಒಳಗೆ ಅಪರಾಧ ಕಡಿಮೆ ಆಗಬಹುದೆಂದು ನಾವು ಆಂತರಿಕವಾಗಿ ಮಾತನಾಡಿದ್ದಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



