ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್, ಚುನಾವಣಾ ಪ್ರಚಾರಕ್ಕೆ ಬರದಿದ್ದರೇ ಬೇಜಾರಿಲ್ಲ: ಸುಮಲತಾ
ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್, ಅವರು ಪ್ರಚಾರಕ್ಕೆ ಬರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಅವರಾಗಿಯೇ ಬರುವುದಾದರೆ ಸಂತೋಷಪಡುತ್ತೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ಮಂಡ್ಯ: ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್, ಅವರು ಪ್ರಚಾರಕ್ಕೆ ಬರಬೇಕೆಂದು ನಿರೀಕ್ಷಿಸುವುದು ಸರಿಯಲ್ಲ. ಅವರಾಗಿಯೇ ಬರುವುದಾದರೆ ಸಂತೋಷಪಡುತ್ತೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸೋಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಯಶ್, ರಾಜಕಾರಣ ಗಲೀಜು ಎಂದು ಹೇಳಿದ್ದಾರೆ. ಟೀಕೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಈಗ ದೇಶ ಮಟ್ಟದಲ್ಲಿ ಸ್ಟಾರ್. ದರ್ಶನ್ ಮತ್ತು ಯಶ್ ನನ್ನ ಮನೆಯ ಮಕ್ಕಳಿದ್ದಂತೆ. ಅವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಅವರು ಪ್ರಚಾರಕ್ಕೆ ಬರಲಿಲ್ಲವೆಂದರೂ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ಯಶ್, ದರ್ಶನ್ ಪ್ರಚಾರಕ್ಕೆ ಬಂದರೆ ಬಲ ಇರುತ್ತೆ, ಎಲ್ಲರೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ದರು. ಪದೇ ಪದೇ ಎಲ್ಲಾ ಬಿಟ್ಟು ಪ್ರಚಾರಕ್ಕೆ ಬನ್ನಿ ಎಂದು ಕರೆಯೋದು ಸರಿಯಲ್ಲ. ಅದಕ್ಕೆ ನನ್ನ ಮನಸ್ಸೂ ಒಪ್ಪುವುದಿಲ್ಲ. ಯಶ್, ದರ್ಶನ್ ಒಂದೊಂದು ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅದನ್ನೆಲ್ಲ ಬಿಟ್ಟು ನನ್ನ ಪರ ಪ್ರಚಾರಕ್ಕೆ ಬನ್ನಿ ಎಂದು ಕರೆಯೋದು ಸರಿಯಲ್ಲ. ಅವರೇ ಪ್ರಚಾರಕ್ಕೆ ಬರೋದಾದರೆ ಖಂಡಿತವಾಗಿಯೂ ಸ್ವಾಗತಿಸುತ್ತೇನೆ. ದೊಡ್ಡ ಶಕ್ತಿಯಾಗಿ ಅವರ ಬೆಂಬಲ ನನಗೆ ಇರುತ್ತೆ ಎಂದರು.
ಕಳೆದ ಬಾರಿ ಯಶ್ ಹಾಗೂ ದರ್ಶನ್ ಅವರು ಸುಮಲತಾ ಪರ ಪ್ರಚಾರ ಮಾಡಿದಾಗ ಕೆಲವು ಪಕ್ಷಗಳು ಅವರ ವಿರುದ್ಧ ಟೀಕೆ ಮಾಡಿದ್ದವು. ಮಾಜಿ ಸಿಎಂ ಕುಮಾರಸ್ವಾಮಿ ಬಳಕೆ ಮಾಡಿದ ಪದಗಳು ಅವರಿಗೆ ನೋವು ತಂದಿತ್ತು. ರಾಜಕೀಯದ ನಿಜವಾದ ಅನುಭವ ಪಡೆದ ಯಶ್ ಅವರು ಆ ಬಗ್ಗೆ ಬೇಸರ ಮಾಡಿಕೊಂಡಿದ್ದರಂತೆ. ಈ ವಿಚಾರವನ್ನು ಸುಮಲತಾ ರಿವೀಲ್ ಮಾಡಿದ್ದಾರೆ.
‘ಯಶ್ ಬರ್ತೀನಿ ಎಂದರೆ ನನಗಿಂತ ಖುಷಿ ಪಡೋರು ಯಾರೂ ಇಲ್ಲ. ಬರಲ್ಲ ಅಂದ್ರೂ ನನಗೇನು ಬೇಸರ ಇಲ್ಲ. ಅಂಬರೀಷ್ ಅವರ ಗೌರವದ ಮೇಲೆ ಬಂದರು. ನಾನು ಅವರನ್ನು ಕರೆದಿಲ್ಲ’ ಎಂದಿದ್ದಾರೆ ಸುಮಲತಾ. ಈ ಮೂಲಕ ಹಲವು ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ
ಪಕ್ಷದ ಚಿಹ್ನೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತಾರೋ ನೋಡಬೇಕು. ಇದು ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ. ಪ್ರಚಾರ, ಹೋರಾಟ, ಕ್ಯಾಂಪೇನ್ ಎಲ್ಲವೂ ಡಿಫರೆಂಟ್ ಆಗಿರುತ್ತದೆ ಎಂದರು.
ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವುದು ಪ್ರಚಾರ ಆರಂಭಿಸಲು ಎಂದು ಹೋಗಿಲ್ಲ. ನಾಗಮಂಗಲದಲ್ಲಿ ಇಂದು ನನಗೆ ಒಂದಷ್ಟು ಕಾರ್ಯಕ್ರಮ ಇತ್ತು. ಕಳೆದ ಬಾರಿ ಚುನಾವಣೆಗೂ ಮೊದಲೇ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೆ. ಒಳ್ಳೆಯದಾಗಿತ್ತು. ಶುಭವಾಗಿತ್ತು. ಹಾಗಾಗಿ ನಂಬಿಕೆ ವಿಶ್ವಾಸ ಇದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




