ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣ ಕುಮಾರಸ್ವಾಮಿ ಹಣೆಯಲ್ಲಿ ಬರೆದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ನಾನು ಬೆಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಹಾಸನದಿಂದ ಬಂದಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ಇಲ್ಲಿಗೆ ಬಂದಾಗ ಇದು ಬೆಂಗಳೂರಾಗಿಯೇ ಇತ್ತು.

ಬೆಂಗಳೂರು: ನಮ್ಮನ್ನು ಸರ್ವನಾಶ ಮಾಡುವುದು ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರು ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. “ಕುಮಾರಸ್ವಾಮಿ ಅವರು ನಮ್ಮನ್ನು ಸರ್ವನಾಶ ಮಾಡಲು ಪ್ರತಿನಿತ್ಯ ರಾಜಕಾರಣ ಮಾಡುತ್ತಿದ್ದಾರೆ. ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಅವರ ಆಚಾರ, ವಿಚಾರ ಎಲ್ಲವೂ ನಮಗೆ ಗೊತ್ತಿದೆ. ನಾವು ರಾಮನಗರದ ಹೆಸರನ್ನು ಬದಲಿಸುತ್ತಿಲ್ಲ. ಇದು ನಮ್ಮ ಜಿಲ್ಲೆ. ಇವರು ಬಂದು ಅಕ್ರಮವಾಗಿ ಜಿಲ್ಲೆಯ ಗುರುತನ್ನು ಬದಲಿಸಿದ್ದಾರೆ. ರಾಜಕೀಯವಾಗಿ ಇದಕ್ಕೆ ಅವಕಾಶ ನೀಡಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಜನ ನಮ್ಮವರು, ಬೆಂಗಳೂರಿನವರು ಎಂದು ವಾಗ್ದಾಳಿ ನಡೆಸಿದರು.
ನಾನು ಬೆಂಗಳೂರು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಹಾಸನದಿಂದ ಬಂದಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರು ಇಲ್ಲಿಗೆ ಬಂದಾಗ ಇದು ಬೆಂಗಳೂರಾಗಿಯೇ ಇತ್ತು. ಅವರು ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದಾಗಲೂ ಇದು ಬೆಂಗಳೂರಾಗಿಯೇ ಇತ್ತು. ಇದು ನಮ್ಮ ಜಿಲ್ಲೆ. ನಾವು ಭಾರತೀಯರು ಎಂದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ, ಅದೇ ರೀತಿ ನಾವು ಬೆಂಗಳೂರಿನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗ ಜಿಲ್ಲೆಯನ್ನು ಒಡೆದು ಬೇರೆ ಹೆಸರು ಕೊಟ್ಟರು ಎಂದು ತಿಳಿಸಿದರು.
ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದ್ದು ಬೆಂಗಳೂರಿನಲ್ಲಿ, ರಾಮಕೃಷ್ಣ ಹೆಗಡೆ ಅವರು ಬಂದು ನಿಂತಿದ್ದು ಬೆಂಗಳೂರಿನಲ್ಲಿ. ಈ ಬೆಂಗಳೂರು ನಾಲ್ಕೈದು ಮುಖ್ಯಮಂತ್ರಿಗಳನ್ನು ಮಾಡಿದೆ. ನಮ್ಮ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವಾಗ ಬೆಂಗಳೂರು ಹೆಸರು ಉಳಿಸಿಕೊಳ್ಳುವಂತೆ ನಾವು ಸಲಹೆ ನೀಡಿದ್ದೆವು. ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ನಮ್ಮ ಪೂರ್ವಜರು ಕೊಟ್ಟಿರುವ ಈ ಹೆಸರನ್ನು ನಾವು ಯಾಕೆ ಕಳೆದುಕೊಳ್ಳಬೇಕು? ಎಂದು ಪ್ರಶ್ನಿಸಿದರು.
ಈ ಜಿಲ್ಲೆಯ ಆಡಳಿತ ಕೇಂದ್ರ ರಾಮನಗರದಲ್ಲೇ ಇರುತ್ತದೆ. ಈ ಜಿಲ್ಲೆಯ ಜನಕ್ಕೆ ಹೊಸ ದಿಕ್ಕನ್ನು ನೀಡಬೇಕು, ಹೊಸ ಆಲೋಚನೆ, ಅಭಿವೃದ್ಧಿ ನೀಡಬೇಕು, ಮುಂದಿನ ಪೀಳಿಗೆ ದೃಷ್ಟಿಯಿಂದ ನಾವು ಆಲೋಚನೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ನಮ್ಮ ಈ ತೀರ್ಮಾನಕ್ಕೆ ಪಕ್ಷಾತೀತವಾಗಿ ಜನರು ಸಂತೋಷವಾಗಿದ್ದಾರೆ ಎಂದು ತಿಳಿಸಿದರು.
2028ರ ಒಳಗೆ ನಾವು ಬಂದು ಮತ್ತೆ ರಾಮನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಹಣೆಯಲ್ಲಿ ಬರೆದಿಲ್ಲ. 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂದು ಸವಾಲೆಸೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



