ರಾಜ್ಯ ಪ್ರವಾಸದ ಅಗತ್ಯವಿಲ್ಲ, ದೆಹಲಿಯಿಂದ ಬರ ಪರಿಹಾರ ತನ್ನಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಬರ ಅಧ್ಯಯನ ಮುಗಿದಿದೆ. ಕೇಂದ್ರದ ತಂಡವೇ ಬರ ಪರಿಶೀಲನೆ ಮಾಡಿ ವರದಿ ಕೂಡ ಕೊಟ್ಟಿದೆ. ಹೀಗಿರುವಾಗ ಬಿಜೆಪಿಯ 17 ತಂಡಗಳ ಬರ ಅಧ್ಯಯನ ಪ್ರವಾಸ ಅಗತ್ಯವೇನಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಬರ ಅಧ್ಯಯನ ಮುಗಿದಿದೆ. ಕೇಂದ್ರದ ತಂಡವೇ ಬರ ಪರಿಶೀಲನೆ ಮಾಡಿ ವರದಿ ಕೂಡ ಕೊಟ್ಟಿದೆ. ಹೀಗಿರುವಾಗ ಬಿಜೆಪಿಯ 17 ತಂಡಗಳ ಬರ ಅಧ್ಯಯನ ಪ್ರವಾಸ ಅಗತ್ಯವೇನಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ, ರಾಜ್ಯ ತಂಡಗಳ ಅಧ್ಯಯನ ಮುಗಿದ ಮೇಲೆ ನೀವೇನು ಅಧ್ಯಯನ ಮಾಡುವುದು? ಕಾಂಗ್ರೆಸ್ಗೆ ಏರು ಧ್ವನಿಯಲ್ಲಿ ಗದರಿಸುತ್ತೀರಲ್ಲ, ಅದೇ ಧ್ವನಿಯನ್ನು ಕೇಂದ್ರದ ಮುಂದೆ ಎತ್ತಿ. ಇಲ್ಲಿ ಬರ ಅಧ್ಯಯನ ಮಾಡೋದು ಬಿಟ್ಟು 17 ಸಾವಿರ ಕೋಟಿ ರೂ. ಪರಿಹಾರ ತನ್ನಿ. ಕೇವಲ ಗಿಮಿಕ್ ಮಾಡೋದು ಬಿಡಿ ಎಂದು ಹೇಳಿದರು.
ಕೇಂದ್ರದ ನಾಯಕರನ್ನು ಭೇಟಿ ಮಾಡಲು ರಾಜ್ಯದ ನಾಯಕರು ಕಾಯುತ್ತಿದ್ದಾರೆ. ಆದರೆ, “ನಮಗೆ ಯಾವುದೇ ಸಚಿವರೊಂದಿಗೆ ಅಪಾಯಿಂಟ್‌ಮೆಂಟ್ ಸಿಕ್ಕಿಲ್ಲ. ಕೇಂದ್ರ ತಂಡ ರಾಜ್ಯದಲ್ಲಿ ಪ್ರವಾಸ ಮಾಡಿ ರಾಜ್ಯದ ಬರ ವರದಿಯನ್ನು ಅಂಗೀಕರಿಸಿದ ನಂತರವೇ ನಾವು ದೆಹಲಿಗೆ ಹೋಗಿದ್ದೆವು. ಈಗ ರಾಜ್ಯ ಬಿಜೆಪಿಯವರು ಯಾಕೆ ಪ್ರವಾಸ ಮಾಡುತ್ತಿದ್ದಾರೆ, ಏನು ಪ್ರಯೋಜನ ಎಂಬುದನ್ನು ಸ್ಪಷ್ಟಪಡಿಸಬೇಕು. ಅದರ ಬದಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡಿ, ಅಲ್ಲಿಗೆ ಸಂಬಂಧಿಸಿದ ಸಚಿವರ ಭೇಟಿ ಮಾಡಿ ರಾಜ್ಯಕ್ಕೆ ಹಣ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮಾತೆತ್ತಿದರೆ ವರಿಷ್ಠರು, ವರಿಷ್ಠರು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ರಾಜ್ಯ ನಾಯಕರಿಗೆ ಬೆಲೆ ಇಲ್ಲವೇ? ಎಲ್ಲವನ್ನೂ ವರಿಷ್ಠರೇ ಮಾಡುತ್ತಾ ಇದ್ದರೆ ನೀವೇನು ಮಾಡುತ್ತಾ ಇದೀರಿ? ಬೆರಳು ಚೀಪುತ್ತಾ ಇದ್ದೀರಾ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್‌ನ 19 ಶಾಸಕರು ಬೆಂಬಲ ಕೊಡುತ್ತೇವೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿಯವರ ಬೆಂಬಲ ಕೇಳಿದವರು ಯಾರು? ಈಗ ನಮಗೆ ಅವರ ಅವಶ್ಯಕತೆ ಏನಿದೆ? ಯಾರು ಮುಖ್ಯಮಂತ್ರಿ ಆಗುತ್ತಾರೆ, ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎನ್ನುವುದು ಅವರಿಗೆ ಏಕೆ ಬೇಕು’ ಎಂದರು.
‘ಬಿಜೆಪಿ ಜೊತೆ ಜೆಡಿಎಸ್ ಬಹುತೇಕ ವಿಲೀನ ಆಗಿದೆ. ಜೆಡಿಎಸ್ ಪೀಪಲ್ ಲೆಸ್ ಪಾರ್ಟಿ. ಬಿಜೆಪಿ ಲೀಡರ್‌ಲೆಸ್ ಪಾರ್ಟಿ. ನಮಗೆ ಜೆಡಿಎಸ್‌ನವರ ಅವಶ್ಯಕತೆ ಇಲ್ಲ. ಅವರ ಅಸ್ತಿತ್ವಕ್ಕೆ ಏನು ಬೇಕಾದರೂ ಹೇಳಿಕೊಳ್ಳಲಿ. ಜೆಡಿಎಸ್ ಬಳಿ ಯಾವುದೇ ವಿಷಯ ಇಲ್ಲ. ಅವರು ಮೊದಲು ಭ್ರಷ್ಟಾಚಾರ ವಿಚಾರ ಮಾತನಾಡಿದರು. ಅವರ ಪೆನ್ ಡ್ರೈವ್ ಅವರ ಜೇಬಿನಲ್ಲೇ ಉಳಿಯಿತು’ ಎಂದು ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


