ವಿಧಾನಸಭೆ ಚುನಾವಣೆ: ಕರ್ನಾಟಕಕ್ಕೆ ಬಂದು 'ಟಿಫಿನ್ ಬಾಕ್ಸ್ ಬೈಠಕ್' ತೆರೆದ ಜೆ ಪಿ ನಡ್ಡಾ; ಬಿಜೆಪಿಯ ತಂತ್ರವೇನು?
ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನಿನ್ನೆ ಪ್ರವಾಸ ಆರಂಭಿಸಿದ ಅವರು ಮೊದಲಿಗೆ 'ಟಿಫನ್ ಬಾಕ್ಸ್ ಬೈಠಕ್' ಮೂಲಕ ತಮ್ಮ ಚುನಾವಣಾ ತಂತ್ರಗಾರಿಕೆ ಪ್ರವಾಸವನ್ನು ಆರಂಭಿಸಿದರು.

ತುಮಕೂರು: ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕರ್ನಾಟಕಕ್ಕೆ ಆಗಮಿಸಿದ್ದಾರೆ. ನಿನ್ನೆ ಪ್ರವಾಸ ಆರಂಭಿಸಿದ ಅವರು ಮೊದಲಿಗೆ 'ಟಿಫನ್ ಬಾಕ್ಸ್ ಬೈಠಕ್' ಮೂಲಕ ತಮ್ಮ ಚುನಾವಣಾ ತಂತ್ರಗಾರಿಕೆ ಪ್ರವಾಸವನ್ನು ಆರಂಭಿಸಿದರು.
ಏನಿದು ‘tiffin box baithak’?: ಬಿಜೆಪಿಯಲ್ಲಿನ ವಿವಿಧ ಜಾತಿ ಮತ್ತು ಧರ್ಮಗಳ ಕಾರ್ಯಕರ್ತರು ತಮ್ಮ ಮನೆಯಿಂದ ಆಹಾರವನ್ನು ತಂದು ಬೇರೆಯವರ ಜೊತೆ ಹಂಚಿಕೊಂಡು ತಿನ್ನುವುದು. ಎಸ್ ಸಿ/ಎಸ್ ಟಿ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುತ್ತಿದ್ದೇವೆ ಎಂಬ ಪ್ರಬಲ ಸಂದೇಶ ಸಾರಲು ಬಿಜೆಪಿ ರಾಷ್ಟ್ರ ನಾಯಕರು ಸೇರಿದಂತೆ ರಾಜ್ಯ ನಾಯಕರು ಬಹಳ ಯತ್ನ ನಡೆಸುತ್ತಿದ್ದಾರೆ. ಎಲ್ಲಾ ಜಾತಿ-ಧರ್ಮದವರು ಸಮಾನರು, ಸಮಾಜದಲ್ಲಿ ಸಮಾನತೆ ತರಲು ಪಕ್ಷ ಪ್ರಯತ್ನಿಸುತ್ತಿದೆ ಎಂದು ತೋರಿಸಲು ದಲಿತರ ಮನೆಯಲ್ಲಿ ಹೋಗಿ ನಾಯಕರು ಉಪಾಹಾರ, ಭೋಜನ ಸವಿಯುವುದು, ಪಕ್ಷದ ಶಕ್ತಿ ಕೇಂದ್ರ ಕಚೇರಿಯಲ್ಲಿ ಎಲ್ಲರೂ ತಂದ ಆಹಾರವನ್ನು ಒಟ್ಟು ಸೇರಿಸಿ ತಿನ್ನುವುದು ಇತ್ಯಾದಿಗಳನ್ನು ಬಿಜೆಪಿ ನಾಯಕರು ಇತ್ತೀಚೆಗೆ ಮಾಡುತ್ತಿದ್ದಾರೆ. ದಲಿತ ಸಮುದಾಯಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಬಿಜೆಪಿ ಕೇವಲ ಮೇಲ್ವರ್ಗದವರಿಗೆ ಮಾತ್ರ ಕೈಗೆಟಕುವ ಪಕ್ಷವಲ್ಲ, ಎಲ್ಲಾ ಜಾತಿ-ಧರ್ಮ, ಸಮುದಾಯದವರನ್ನು ಸಮಾನವಾಗಿ ಕಾಣುತ್ತಿದೆ ಎಂದು ಸಂದೇಶ ಸಾರಲು ಇರುವ ಕಾರ್ಯಕ್ರಮವೇ ಟಿಫಿನ್ ಬಾಕ್ಸ್ ಬೈಠಕ್.
ಇದನ್ನು ನಿನ್ನೆ ತುಮಕೂರು ಮತ್ತು ಮಧುಗಿರಿ ಸಂಘಟನಾ ಜಿಲ್ಲೆಗಳ ಸಭೆಯಲ್ಲಿ ಶಕ್ತಿ ಕೇಂದ್ರ ಪ್ರಮುಖರಿಗೆ ಜೆ ಪಿ ನಡ್ಡಾ ಸಂದೇಶ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನಡ್ಡಾ, ಕಾಂಗ್ರೆಸ್ ನ ಮಿಷನ್ ರಾಜ್ಯದಲ್ಲಿ ಕಮಿಷನ್, ಜಾತೀಯತೆ ಮತ್ತು ಭ್ರಷ್ಟಾಚಾರವಾಗಿದೆ. ಆದರೆ ಚುನಾವಣೆಗೆ ಹೋಗುವಾಗ ಮೋದಿಯವರು ಸಾಧನೆಯ ರಿಪೋರ್ಟ್ ಕಾರ್ಡು ತೋರಿಸುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಡಿರುವ ಕೆಲಸಗಳು, ಸಾಧನೆಗಳ ರಿಪೋರ್ಟ್ ಕಾರ್ಡನ್ನು ಜನತೆಯ ಮುಂದೆ ತೋರಿಸಿ ಚುನಾವಣೆ ಎದುರಿಸುತ್ತೇವೆ ಎಂದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಒಕ್ಕಲಿಗ ಸಚಿವರ ಮೇಲೆ ಹಳೆ ಮೈಸೂರು ಭಾಗ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊರಿಸಿದ ಅಮಿತ್ ಶಾ
ಉಕ್ರೇನ್ ಯುದ್ಧದ ಮಧ್ಯೆಯೂ ಭಾರತದ ಆರ್ಥಿಕತೆ ಸ್ಥಿರವಾಗಿತ್ತು. ಬ್ರಿಟನ್ ಆರ್ಥಿಕತೆಯನ್ನು ಭಾರತ ಹಿಂದಿಕ್ಕಿದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆ, ಶೌಚಾಲಯ ನಿರ್ಮಾಣದಂತಹ ಯೋಜನೆಗಳು ಬಡವರು, ಹೆಣ್ಣುಮಕ್ಕಳು ಗೌರವಯುತವಾಗಿ ಬಾಳುವಂತೆ ಮಾಡಿದೆ. ಜನತೆಗೆ ಉಚಿತ ಕೋವಿಡ್ ಲಸಿಕೆ, ರಾಷ್ಟ್ರ ಮತ್ತು ರಾಜ್ಯ ಹೆದ್ದಾರಿ ಯೋಜನೆಗಳ ಜಾರಿ ಬಗ್ಗೆ ಪಕ್ಷದ ಕಾರ್ಯಕರ್ತರು ಜನತೆಗೆ ತೋರಿಸಬೇಕು ಎಂದರು.
ಎಸ್ ಸಿ ಎಸ್ ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಶೇಕಡಾ 7ಕ್ಕೆ ಹೆಚ್ಚಿಸುವ ಬೊಮ್ಮಾಯಿ ಸರ್ಕಾರದ ತೀರ್ಮಾನಗಳನ್ನು ಉಲ್ಲೇಖಿಸಿದ ನಡ್ಡಾ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಸಹ ಬೇರೆ ಮೀಸಲಾತಿ ವರ್ಗಗಳನ್ನು ಸರ್ಕಾರ ತರುತ್ತಿದೆ ಎಂದರು. ಮೋದಿ ಸರ್ಕಾರ ದಲಿತರು ಮತ್ತು ಬುಡಕಟ್ಟು ಜನಾಂಗದ ಮಹಿಳೆಯನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಿಲ್ಲ ಏಕೆ ಎಂದು ನೀವೆಲ್ಲಾ ಕೇಳಬೇಕು. ಬದಲಿಗೆ ಅಂಬೇಡ್ಕರ್ ಚುನಾವಣೆಗೆ ನಿಂತಾಗ ಸೋಲಿಸಿದರು ಎಂದು ನಡ್ಡಾ ಟೀಕಿಸಿದರು.
ಇನ್ನು ಚಿತ್ರದುರ್ಗದಲ್ಲಿ ಮಾತನಾಡಿದ ಜೆ ಪಿ ನಡ್ಡಾ, ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದರು. 60 ವರ್ಷಗಳಿಂದ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ ಕಾಂಗ್ರೆಸ್ ದೇಶದ ಜನರಿಗೆ ಮೋಸ ಮಾಡಿದೆ ಮತ್ತು ದ್ರೋಹ ಮಾಡಿದೆ. ಇತ್ತೀಚಿನ IMF ವರದಿಯನ್ನು ಉಲ್ಲೇಖಿಸಿದ ನಡ್ಡಾ, ಶೇಕಡಾ 1ಕ್ಕಿಂತ ಕಡಿಮೆ ಇರುವ ತೀವ್ರ ಬಡತನದಲ್ಲಿ ವಾಸಿಸುವ ಜನರ ಪ್ರಮಾಣವು ಸಾಂಕ್ರಾಮಿಕ ರೋಗದ ಹೊರತಾಗಿಯೂ ಹೆಚ್ಚಾಗಲಿಲ್ಲ, ಪ್ರಧಾನ ಮಂತ್ರಿಯವರ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಗರೀಬ್ ಕಲ್ಯಾಣ್ ಅನ್ನ ಯೋಜನೆ ಕೇಂದ್ರ ಸರ್ಕಾರದ ಸಾಧನೆಗೆ ಕಾರಣವಾಗಿದೆ.
ಜೆ ಪಿ ನಡ್ಡಾ ಟೆಂಪಲ್ ರನ್: ರಾಜ್ಯದ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾದ ಸಿದ್ದಗಂಗಾ ಮಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿನ್ನೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಭೇಟಿ ನೀಡಿ ಒಂದು ಗಂಟೆ ಕಾಲ ಕಳೆದರು. ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಚರ್ಚೆ ನಡೆಸಿ ಊಟ ಮಾಡಿದರು. ಮಾದಾರ ಚನ್ನಯ್ಯ ಗುರಿಪೀಠ, ವೀರಶೈವ ಸಮಾಜದ ಸಿರಿಗೆರೆ ತರಳಬಾಳು ಮಠ, ಕನಕ ಗುರುಪೀಠ, ವಾಲ್ಮೀಕಿ ಗುರುಪೀಠಗಳಿಗೂ ಇಂದು ಭೇಟಿ ನೀಡಲಿದ್ದಾರೆ. ಲಿಂಗಾಯತ ಮತ್ತು ಪಂಚಮಸಾಲಿಗಳ ಧಾರ್ಮಿಕ ಮುಖಂಡರೊಂದಿಗಿನ ಸಭೆ ನಡೆಸಲಿದ್ದು, ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಸಿದ್ದರಾಮಯ್ಯನವರು ಹೇಳಿಕ ನಾಯಿಮರಿ ಟೀಕಿಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ನಡ್ಡಾ, ಅಗ್ಗದ ಹೇಳಿಕೆ ನೀಡಿದ್ದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಕರುಣೆ ಇದೆ. ಅವರು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದರು. ವಿವಿಧ ಪಕ್ಷಗಳ ಇತರ ಮುಖ್ಯಮಂತ್ರಿಗಳನ್ನು ತಮ್ಮೊಂದಿಗೆ ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಪರವಾಗಿರುವ ಮೋದಿ ಎಂದಿಗೂ ಇಂತಹ ರಾಜಕಾರಣ ಮಾಡುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


