ಆರ್'ಎಸ್ಎಸ್ ಕುರಿತು ಹೇಳಿಕೆ: ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿ ತೀವ್ರ ಕಿಡಿ
ದೇಶದಲ್ಲಿ 4 ಸಾವಿರಕ್ಕೂ ಅಧಿಕ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್'ಎಸ್ಎಸ್ ಕಾರ್ಯಕರ್ತರಾಗಿದ್ದು, ದೇಶದ ಕಾರ್ಯಾಂಗದ ಮೇಲೆ ಆರ್'ಎಸ್ಎಸ್ ಹಿಡಿತ ಸಾಧಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು: ದೇಶದಲ್ಲಿ 4 ಸಾವಿರಕ್ಕೂ ಅಧಿಕ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್'ಎಸ್ಎಸ್ ಕಾರ್ಯಕರ್ತರಾಗಿದ್ದು, ದೇಶದ ಕಾರ್ಯಾಂಗದ ಮೇಲೆ ಆರ್'ಎಸ್ಎಸ್ ಹಿಡಿತ ಸಾಧಿಸಿದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆರ್'ಎಸ್ಎಸ್'ನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಮಾಜಿ ಮುಖ್ಯಮಂತ್ರಿಗಳು ಆರ್'ಎಸ್ಎಸ್ ಶಾಖೆಗೆ ಬಂದು, ನಮ್ಮ ಸಂಘದ ಚಟುವಟಿಕೆಗಳ ಬಗ್ಗೆ ಅರಿತುಕೊಳ್ಳಲಿ. ಕಾಮಲೆ ರೋಗಿಗೆ ಜಗತ್ತೆಲ್ಲಾ ಹಳದಿಯಾಗಿ ಕಾಣುವಂತೆ ಕುಮಾರಸ್ವಾಮಿ ಆರ್‌ಎಸ್ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರ್‌ಎಸ್ಎಸ್ ರಾಷ್ಟ್ರ ಭಕ್ತಿ, ದೇಶ ಸೇವೆಗೆ ಇನ್ನೊಂದು ಹೆಸರು. ಕುಮಾರ ಸ್ವಾಮಿ ಕುಟುಂಬ ರಾಜಕಾರಣ, ಜಾತಿ ರಾಜಕಾರಣ ನಡೆಸುತ್ತಾ ಬಂದವರು. ತಮ್ಮ ಕುಟುಂಬ, ಜಾತಿಯವರನ್ನು ಆಯಕಟ್ಟಿನ ಜಾಗದಲ್ಲಿ ಇರಿಸಿಕೊಂಡು ಬಂದವರು. ಜೆಡಿಎಸ್ ಮುಖಂಡರಾಗಿದ್ದ ಸಿಂಧ್ಯಾ ಅವರು ಆರ್‌ಎಸ್ಎಸ್ ಮೂಲಕ ಬಂದವರು.
ಆರ್‌ಎಸ್ಎಸ್ ದೇಶದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಸಂಸ್ಥೆಗಳನ್ನು ನಡೆಸುತ್ತಾ, ದೇಶದ ಜನರಲ್ಲಿ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ನಿರ್ಮಾಣ ಮಾಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೇಮಿಸುವ ಕೆಲಸದಲ್ಲಿ ಆರ್‌ಎಸ್ಎಸ್ ತೊಡಗಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 5 ರಂದು ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು ಆರ್'ಎಸ್ಎಸ್ ವಿರುದ್ದ ಕಿಡಿಕಾರಿದ್ದರು.
ಬಿಜೆಪಿಯವರು ಆರ್'ಎಸ್ಎಸ್'ನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮೋದಿಯವರು ಕೂಡ ಆರ್'ಎಸ್ಎಸ್'ನ ಕೀಲುಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತವನ್ನು ಆರ್'ಎಸ್ಎಸ್ ಮಾಡುತ್ತಿದೆ. ಬಿಪಿಯಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.
ಈ ದೇಶದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆರ್'ಎಸ್ಎಸ್'ಗೆ ಸಂಬಂಧ ಪಟ್ಟ ಪುಸ್ತಕ ಓದುತ್ತಿದ್ದೇನೆ. 1990ರಲ್ಲಿ ಬೆಳವಣಿಗೆ ಪ್ರಾರಂಭವಾಯಿತು, ಅಡ್ವಾಣಿ ಬಿಜೆಪಿ ಪಕ್ಷ ಕಟ್ಟುವ ಸಮಯ ಅದು. ಜಿನ್ನಾ ಅವರ ಬಗ್ಗೆ ಮಾತನಾಡಿದ್ದರಂತೆ, ಆಗ ಅಡ್ವಾಣಿ ಅವರಿಗೆ ಒಂದು ಮೆಸೇಜ್ ಹೋಗುತ್ತೆ. ಅಲ್ಲಿಂದ ಬಂದ ನಂತರ ನೀವು ಆರ್'ಎಸ್ಎಸ್ ಕಚೇರಿಗೆ ಬನ್ನಿ ಅಂತ. ಹೀಗೆ ಆ ಬಗ್ಗೆ ಓದುತ್ತಾ ಇದ್ದರೆ ಅವರ ಹಿಡನ್ ಅಜೆಂಡಾ ಗೊತ್ತಾಗುತ್ತಿದೆ ಎಂದು ಹೇಳಿದ್ದರು.
6-7 ತಿಂಗಳಿಂದ ಪುಸ್ತಕವನ್ನು ಓದುತ್ತಿದ್ದೇನೆ. ಇವತ್ತು ಈ ನಾಡಿನಲ್ಲಿ ಯುವಕರು ಬುದ್ದಿವಂತರಾಗದೇ ಇದ್ದರೆ ಕಷ್ಟವಾಗಲಿದೆ. ವಾಸ್ತವಾಂಶದ ಅರಿವು ಬಂದ ಮೇಲೂ ಅದರ ಬಗ್ಗೆ ಜನತೆಯ ಮುಂದೆ ಇಡದೇ ಇದ್ದರೆ ಜನರಿಗೆ ಮಾಡುವ ದ್ರೋಹ ಅದು. ಕರ್ನಾಟಕದಲ್ಲಿ ಸರ್ವ ಧರ್ಮ ರಕ್ಷಣೆ ಮಾಡುವ ಸರ್ಕಾರ ತರಬೇಕು. ಮೂಲಭೂತ ಹಕ್ಕುಗಳು ಪ್ರತಿ ಕುಟುಂಬಕ್ಕೆ ಕೊಡಬೇಕಾಗಿದೆ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್'ಎಸ್ಎಸ್ ಅವರ ಸಂಘದಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.
ಕುಮಾರಸ್ವಾಮಿಯವರ ಈ ಹೇಳಿಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಸುನಿಲ್ ಕುಮಾರ್, ಸಿಟಿ.ರವಿ, ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ, ಪ್ರಭು ಚವ್ಹಾಣ್ ಸೇರಿ ಹಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಚಿವ ಸುನಿಲ್ ಕುಮಾರ್ ಅವರು ಮಾತನಾಡಿ, ಕುಮಾರಸ್ವಾಮಿಯವರಿಗೆ ಎಲ್ಲೋ ಲೆಕ್ಕ ತಪ್ಪಾಗಿದೆ. 4 ಸಾವಿರ ಅಲ್ಲ, ಅದಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳು ಆರ್'ಎಸ್ಎಸ್ ಕಾರ್ಯಕರ್ತರಾಗಿದ್ದಾರೆ. ಬರೇ ಐಎಎಸ್, ಐಪಿಎಸ್ ಹುದ್ದೆಗಳಲ್ಲಿ ಮಾತ್ರವಲ್ಲ, ಗ್ರಾಮ ಪಂಚಾಯಿತಿ ಪಿಡಿಒನಿಂದ ರಾಷ್ಟ್ರಪತಿಗಳವರೆಗೆ ಆರ್'ಎಸ್ಎಸ್ ಕಾರ್ಯಕರ್ತರು ಇದ್ದಾರೆ. ವ್ಯಕ್ತಿಯ ಜೊತೆಗೆ ದೇಶವನ್ನು ಕಟ್ಟುವನ್ನು ಆರ್'ಎಸ್ಎಸ್ ಗುರಿಯಾಗಿದೆ. ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ ಹಲವರು ಈಗಾಗಲೇ ದೇಶ ಕಟ್ಟುವುದರತ್ತ ಕಾರ್ಯನಿರತರಾಗಿದ್ದಾರೆ. ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವವರಷ್ಟೇ ಆರ್'ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದಾರೆಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾತನಾಡಿ, ಜನರಿಂದ ತಿರಸ್ಕರಿಸಲ್ಪಟ್ಟ ಅರೆಕಾಲಿಕ ರಾಜಕಾರಣಿಗಳು ರಾಜಕೀಯದಲ್ಲಿ ಪ್ರಸ್ತುತವಾಗಲು ರಾಷ್ಟ್ರೀಯತಾವಾದಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಮೂರ್ಖತನದ ಆರೋಪಗಳನ್ನು ಮಾಡುವ ಬದಲು, ಶಾಖೆಗೆ ಬಂದು ಆರ್'ಎಸ್ಎಸ್ ನಡೆಸುವ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗೆ ಸಾಕ್ಷಿಯಾಗಬೇಕು ಎಂದು ತಿಳಿಸಿದ್ದಾರೆ.
ಈ ನಡುವೆ ಕುಮಾರಸ್ವಾಮಿಯವರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರೂ ಕೂಡ ಆರ್'ಎಸ್ಎಸ್ ವಿರುದ್ಧ ಕಿಡಿಕಾರಿದ್ದಾರೆ.
ಆರ್'ಎಸ್ಎಸ್ ಸಾಮಾಜಿಕ ನ್ಯಾಯದ ವಿರೋಧಿಯಾಗಿರುವ ಸಂಘಟನೆ. ಮನುವಾದದ ಸಮರ್ಥನೆ ಮಾಡುವ ಈ ಸಂಘಟನೆ ಯಾವತ್ತೂ ಸಾಮಾಜಿಕ ನ್ಯಾಯದ ಪರ ನಿಂತಿಲ್ಲ. ನಾನು ಜೀವನವಿಡೀ ಆರ್'ಎಸ್ಎಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆರ್'ಎಸ್ಎಸ್ ವಿರುದ್ಧ ಇದ್ದೇನೆ. ಈ ವಿಷಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಆರ್'ಎಸ್ಎಸ್ ಇಲ್ಲದಿದ್ದರೆ ನಮ್ಮ ದೇಶವೂ ಪಾಕಿಸ್ತಾನದಂತೆ ಆಗುತ್ತಿತ್ತು' ಎಂಬ ಸಚಿವ ಪ್ರಭು ಚೌಹಾಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್'ಎಸ್ಎಸ್ ಸರ ಸಂಘಚಾಲಕರಾಗಿದ್ದ ಗೋಳ್ವಾಳ್ಕರ್ ಪುಸ್ತಕ ಓದಿ. ಸತ್ಯ ಏನು ಎಂಬುದು ಗೊತ್ತಾಗುತ್ತದೆ. ನನ್ನ ಚುನಾವಣಾ ಸೋಲಿಗೂ ಆರ್'ಎಸ್ಎಸ್ ಕಾರಣ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಆರ್‌ಎಸ್ಎಸ್‌ನವರು ಶಿಕ್ಷಣ ಸಂಸ್ಥೆ, ವಿದ್ಯಾಲಯಗಳನ್ನು ಆರಂಭಿಸುತ್ತಾ ಸರ್ಕಾರಿ ಹುದ್ದೆ ಸೇರಿದಂತೆ ಎಲ್ಲ ಕ್ಷೇತ್ರಗಳ ಉನ್ನತ ಹುದ್ದೆಗಳಲ್ಲಿ ತಮ್ಮ ಕಾರ್ಯಕರ್ತರನ್ನು ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಶಾಲೆ ಕಾಲೇಜುಗಳಲ್ಲಿ ಎಬಿವಿಪಿಗೆ ಸಂಬಂಧಿಸಿದವರನ್ನೇ ಪ್ರಾಧ್ಯಾಪಕರು, ಪ್ರಾಂಶುಪಾಲರುಗಳನ್ನು ನೇಮಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಕಾರ್ಯಾಚರಣೆ ಶೈಲಿ. ಇದನ್ನೇ ನಾವು ಕೇಸರೀಕರಣ ಎಂದು ಹೇಳುತ್ತಿದ್ದೇವೆ. ಇದು ದೇಶದ ಸಾಮರಸ್ಯಕ್ಕೆ ಮಾರಕವಾಗಿದೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ಸಚಿವರು, ಶಾಸಕರು ಹಾಗೂ ಇತರರು ಕೋವಿಡ್-19 ಸಾಂಕ್ರಾಮಿಕದ ಸಮಯದಿಂದಲೂ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಬಿಜೆಪಿ ಆಡಳಿತ ಇರುವ ದೇಶದ ಎಲ್ಲ ರಾಜ್ಯಗಳಲ್ಲೂ ಇದೇ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


