ಕೊರಗ ಸಮುದಾಯದ ಮೇಲಿನ ಪೊಲೀಸರ ಪ್ರಕರಣ ಅಮಾನವೀಯ, ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ
ಕುಂದಾಪುರದ ಕೋಟ ತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಬೆಂಗಳೂರು: ಕುಂದಾಪುರದ ಕೋಟ ತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಈಡಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ, ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು ಸಿಎಂ ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಗಳೆಲ್ಲ ಒಂದು ಎಂದು ಉದ್ಘೋಷಿಸುತ್ತಿರುವ ಬಿಜೆಪಿ ಬ್ರಾಂಡಿನ ಹಿಂದೂ ಧರ್ಮದಲ್ಲಿ ಕೊರಗ ಸಮುದಾಯ ಸೇರಿಲ್ಲವೇ?. ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಉಳಿಸುವುದು ಇವರ ಗುಪ್ತ ಅಜೆಂಡಾವೇ?. ದೌರ್ಜನ್ಯಕ್ಕೀಡಾದ ಕೊರಗರ ಪರ ಕಂಬನಿ ಮಿಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ಬಾರದೆ ಪೊಲೀಸರು ಕೊರಗ ಬಂಧುಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆಯೇ?. ಹಾಗೆ ನಡೆದಿದ್ದರೆ ಅವರೊಬ್ಬ ಅಸಮರ್ಥ ಸಚಿವ, ಗಮನಕ್ಕೆ ಬಂದು ನಡೆದಿದ್ದರೆ ಅದು ಆತ್ಮವಂಚಕ ನಡವಳಿಕೆ ಎಂದು ಕಿಡಿಕಾರಿದ್ದಾರೆ.
ಹಿಂದೂಗಳ ರಕ್ಷಣೆಗಾಗಿಯೇ ಅವತಾರವೆತ್ತಿ ಬಂದವರಂತೆ ಬೊಬ್ಬಿಡುತ್ತಿರುವ, ಸ್ಥಳೀಯ ಲೋಕಸಭಾ ಸದಸ್ಯರೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೌನವನ್ನು ಕೊರಗರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಮೌನಸಮ್ಮತಿ ಎಂದು ಅರ್ಥೈಸೋಣವೇ?. ಎಸ್ಸಿಪಿ/ಟಿಎಸ್ಪಿ ಕಾಯ್ದೆ ಸೇರಿದಂತೆ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳಿಗೆ ಹಣ ಮಂಜೂರು ಮಾಡದೆ ಆರ್ಥಿಕವಾಗಿ ದಲಿತರನ್ನು ಸಾಯಿಸುತ್ತಿರುವ ಬಿಜೆಪಿ ಸರ್ಕಾರ, ಈಗ ಪೊಲೀಸರಿಂದಲೂ ದೌರ್ಜನ್ಯ ನಡೆಸಲು ಹೊರಟಂತಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


