ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರದ ವಿಳಂಬ ನೀತಿ: ಹೆಚ್.ಡಿ. ಕುಮಾರಸ್ವಾಮಿ ಕಳವಳ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೇಕೆದಾಟು ಯೋಜನೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರದ ಹೇಳಿಕೆಗಳು ಕೇವಲ ಘೋಷಣೆಯಾಗಿ ಉಳಿದಿವೆ. ಕೇವಲ ಮೇಕೆದಾಟು ಯೋಜನೆ ಒಂದೇ ಅಲ್ಲ, ಎತ್ತಿನಹೊಳೆ ಯೋಜನೆಯಲ್ಲೂ ಹಲವು ಸಮಸ್ಯೆಗಳು ಇವೆ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಮೇಕೆದಾಟು ಯೋಜನೆ ಆರಂಭ ಮಾಡಬೇಕಿತ್ತು. ಆದರೆ, ರಾಜಕೀಯವಾಗಿ ಹಲವು ಸಮಸ್ಯೆಗಳನ್ನು ಈ ಸರ್ಕಾರ ಅನುಭವಿಸುತ್ತಿದೆ. ಈಗಾಗಲೇ ರಾಜ್ಯಪಾಲರನ್ನ ಕೂಡ ಭೇಟಿ ಮಾಡಿದ್ದೇವೆ. ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಮನವೊಲಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಎತ್ತಿನ ಹೊಳೆ ಯೋಜನೆಯಲ್ಲೂ ಹಲವಾರು ಸಮಸ್ಯೆಗಳು ಇವೆ. ಅದು 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಕಾರ್ಯಕ್ರಮ. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡುತ್ತೇವೆ ಎಂದು ಆರಂಭವಾದ ಕಾರ್ಯಕ್ರಮ ಇದೀಗ 23 ಸಾವಿರ ಕೋಟಿಗೆ ಏರಿಕೆ ಆಗಿದೆ. ಈಗಿನ ವೇಗದಲ್ಲಿ ಹೋದರೆ ಎತ್ತಿನಹೊಳೆ ಯೋಜನೆಗೆ ಒಟ್ಟು 50 ಸಾವಿರ ಕೋಟಿ ಬೇಕು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರ ಸಮಯ ಕೇಳಿದ್ದೇನೆ. ನೀರಾವರಿ ಸಮಸ್ಯೆಯನ್ನು ಬಗೆಹರಿಸುವಂತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಾತಿಗಣತಿ ವರದಿ ವಿಚಾರವಾಗಿ ತಮ್ಮ ವಿರುದ್ಧ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯನವರಿಗೆ ಮಾಡಲು ಬೇರೆ ಕೆಲಸವಿಲ್ಲ, ಎಲ್ಲದರಲ್ಲೂ ರಾಜಕೀಯ ಬೆರೆಸಬೇಕು ಎನ್ನುವುದಾದರೆ ನಾನು ದೊಡ್ಡ ಮಟ್ಟದಲ್ಲಿ ರಾಜಕೀಯ ಬೆರೆಸಬಲ್ಲೆ ಎಂದು ಪರೋಪಕ್ಷ ಎಚ್ಚರಿಕೆ ನೀಡಿದ್ದಾರೆ.
ಕಾಂತರಾಜು ವರದಿಯಲ್ಲಿ ಏನೂ ಇಲ್ಲ. ಆ ವರದಿಯಿಂದ ಕೇವಲ ಸಿದ್ದರಾಮಯ್ಯ ಅವರಿಗೆ ಅನುಕೂಲ ಆಗುತ್ತದೆ ಅಷ್ಟೇ ಎಂದ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಕ್ರೆಡಿಟ್ ಪಡೆಯಲು ಎಷ್ಟೆಲ್ಲಾ ನಾಟಕವಾಡುತ್ತಿದ್ದಾರೆ ನೋಡಿ ಎಂದು ಕಿಡಿಕಾರಿದರು.
ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜಕಾರಣ ಮಾಡುವುದಾಗಿ ಹೇಳುವ ಸಿದ್ದರಾಮಯ್ಯ, ಅಸಲಿಗೆ ಈ ವರ್ಗಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


