ಈಗ ರಾಜಕೀಯ ಮಾಡುವ ಸಮಯವಲ್ಲ: ಕೊರೊನಾ ಯುದ್ಧ ಕಾಲ: ಡಿಕೆಶಿಗೆ ಬಿಸಿ ಪಾಟೀಲ್ ತಿರುಗೇಟು
ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಷಾದ ಪಡಿಸಿದರು.

ಚಿತ್ರದುರ್ಗ: ಈಗ ಯಾರೂ ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ, ಇಂಥ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ - ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿಷಾದ ಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡುತ್ತಿರುವ ಟೀಕೆಗಳ ಬಗ್ಗೆ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ಕೈಗೊಂಡಿವೆ. ಇಂಥ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಪರಿಶ್ರಮ ವಹಿಸಲಾಗಿದೆ ಎಂದವರು ವಿವರಿಸಿದರು. ಬಿಜೆಪಿ ಸರ್ಕಾರ ಕಂಗೆಡದೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ತಿರುಗೇಟು ನೀಡಿದರು.
ಗಂಗಾವತಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಬೆಳೆ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಪರಿಹಾರ ಬಿಡುಗಡೆ ಮಾಡಿದ್ದಾರೆ. ಸಬ್ಸಿಡಿ ದರದಲ್ಲಿ ಬಿತ್ತನೆಬೀಜ - ರಸಗೊಬ್ಬರ ಲಭ್ಯವಾಗುವಂತೆ ಮಾಡಿದ್ದಾರೆ. ರಾಜ್ಯಾದ್ಯಂತ ಇವುಗಳ ಪೂರೈಕೆಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ಕೃಷಿಯುತ್ಪನ್ನಗಳ ಸಾಗಣೆ - ಮಾರಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ.
ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ತೊಂದರೆಯಾಗಿಲ್ಲ. ಹಾಲನ್ನು ಸರ್ಕಾರವೇ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ. ಸರ್ಕಾರ ವಹಿಸಿರುವ ಇಷ್ಟೆಲ್ಲ ಮುತುವರ್ಜಿ, ಕಾರ್ಯ ತತ್ಪರತೆ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಗಾಗಿದೆ. ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಕೊರೊನಾ ಮಹಾಮಾರಿಯನ್ನು ಎಲ್ಲರೂ ಪಕ್ಷಭೇದ ಮರೆತು ಎದುರಿಸಬೇಕಾಗಿದೆ. ಇಂಥ ಸಮಯ ಯಾರೂ ರಾಜಕೀಯ ಮಾಡಬಾರದು ಎಂದವರು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


